*ಬಸ್ ನಲ್ಲಿ ವಿದ್ಯಾರ್ಥಿನಿಯ ಕೈಹಿಡಿದು ಅನುಚಿತವಾಗಿ ವರ್ತಿಸಿದ ಶಾಸಕ ಮಾಲ್ರೆಡ್ಡಿ ರಂಗಾರೆಡ್ಡಿ: ಬಿಆರ್ ಎಸ್ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ಹಿರಿಯ ಕಾಂಗ್ರೆಸ್ ಶಾಸಕ ಮಾಲ್ರೆಡ್ಡಿ ರಂಗಾ ರೆಡ್ಡಿ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುವಾಗ ವಿದ್ಯಾರ್ಥಿನಿಯೊಬ್ಬಳ ಕೈಹಿಡಿದು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪ್ರಮುಖ ವಿರೋಧ ಪಕ್ಷವಾದ ಬಿಆರ್‌ಎಸ್ , ಶಾಸಕ ರಂಗಾರೆಡ್ಡಿ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೆಲಂಗಾಣ ರಾಜಕೀಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ.
ಇಬ್ರಾಹಿಂಪಟ್ಟಣಂ ಕ್ಷೇತ್ರದ 70 ವರ್ಷದ ಶಾಸಕ ಮಾಲ್ರೆಡ್ಡಿ ರಂಗಾ ರೆಡ್ಡಿ ಅವರು ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸಿನಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸುತ್ತಿದ್ದರು. ತೆಲಂಗಾಣ ಸರ್ಕಾರದ ಮಹಿಳೆಯರ ಉಚಿತ ಬಸ್ ಪ್ರಯಾಣದ ‘ಮಹಾಲಕ್ಷ್ಮಿ’ ಯೋಜನೆಯ ಪ್ರಯೋಜನಗಳ ಕುರಿತು ಚರ್ಚಿಸುತ್ತಿದ್ದ ವೇಳೆ, ಶಾಸಕರು ವಿದ್ಯಾರ್ಥಿನಿಯ ಕೈ ಹಿಡಿದು ಮಾತನಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ವಿದ್ಯಾರ್ಥಿನಿಯರು ಈ ಯೋಜನೆಯಿಂದ ತಮಗೆ ವಾರ್ಷಿಕ ಸುಮಾರು 45,000 ರೂ. ಉಳಿತಾಯವಾಗುತ್ತಿದೆ ಎಂದು ವಿವರಿಸುತ್ತಿದ್ದರು.
ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಆರ್‌ಎಸ್ ಹಿರಿಯ ನಾಯಕ ಆರ್.ಎಸ್. ಪ್ರವೀಣ್ ಕುಮಾರ್ ಅವರು ಈ ವಿಡಿಯೋವನ್ನು ಉಲ್ಲೇಖಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. “70 ವರ್ಷದ ಶಾಸಕರು ಸಾರ್ವಜನಿಕ ಸ್ಥಳದಲ್ಲಿ ವಿದ್ಯಾರ್ಥಿನಿಯ ಕೈ ಮುಟ್ಟುವ ಅಗತ್ಯವೇನಿತ್ತು? ಇದು ಮಹಿಳೆಯ ಘನತೆಗೆ ಧಕ್ಕೆ ತರುವಂತಹ ಅಪರಾಧವಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಮಹಿಳಾ ಆಯೋಗವು ಶಾಸಕರಿಗೆ ತಕ್ಷಣ ಸಮನ್ಸ್ ಜಾರಿ ಮಾಡಬೇಕು ಎಂದು ಒತ್ತಾಯಿಸಿದ ಅವರು, ಬಸ್ ಕಂಡಕ್ಟರ್‌ನಿಂದ ದೂರು ಪಡೆದು ಶಾಸಕರ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಯ ನಮ್ರತೆಗೆ ಧಕ್ಕೆ ತರುವುದು) ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಹಾಗೂ ‘SHE Teams’ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆರೋಪಗಳನ್ನು ತಳ್ಳಿಹಾಕಿರುವ ಶಾಸಕ ರಂಗಾರೆಡ್ಡಿ, ವಿಡಿಯೋ ಸಂದೇಶದ ಮೂಲಕ ಸ್ಪಷ್ಟನೆ ನೀಡಿದ್ದಾರೆ: “ನಾನು ವಿದ್ಯಾರ್ಥಿನಿಯರೊಂದಿಗೆ ತಂದೆಯ ವಾತ್ಸಲ್ಯದಿಂದ ಮಾತನಾಡುತ್ತಿದ್ದೆ. ಮಹಿಳೆಯರ ಬಗ್ಗೆ ನನಗೆ ಅಪಾರ ಗೌರವವಿದೆ” ಎಂದು ಹೇಳಿದ್ದಾರೆ.
ಅಕ್ಟೋಬರ್ 6 ರಂದು ಬೊಂಗಲೂರಿನಲ್ಲಿ ಬಸ್ ಹತ್ತಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿದ್ದೆ. ವಿದ್ಯಾರ್ಥಿನಿಯರು ಹೆಚ್ಚಿನ ಬಸ್ ಸೌಲಭ್ಯಕ್ಕೆ ಮನವಿ ಮಾಡುತ್ತಿದ್ದರು. ಬಸ್ ತಿರುವು ತೆಗೆದುಕೊಳ್ಳುವ ಸಂದರ್ಭದಲ್ಲಿ ಸೆರೆಹಿಡಿಯಲಾದ ದೃಶ್ಯಗಳನ್ನು ಬಿಆರ್‌ಎಸ್ ರಾಜಕೀಯ ದುರುದ್ದೇಶದಿಂದ ತಿರುಚಿ ತೇಜೋವಧೆ ಮಾಡುತ್ತಿದೆ ಎಂದು ಅವರು ಕಿಡಿಕಾರಿದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




