*ನನ್ನ ಅಂತ್ಯಕ್ರಿಯೆಗೆ ಹಸಿ ಕಟ್ಟಿಗೆ ಬಳಸಬೇಡಿ*: *ನಾನಾ ಪಾಟೇಕರ್ ಮಾತು ಕೇಳಿ ಅಭಿಮಾನಿಗಳು ಭಾವುಕ*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ ಅವರ ನಿಧನದ ಬೆನ್ನಲ್ಲೇ, ಅಂತ್ಯಕ್ರಿಯೆ ಹೇಗಿರಬೇಕು ಎಂಬ ಬಗ್ಗೆ ಹಿಂದೆ ನೀಡಿದ್ದ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮ್ಮ ಸಾವಿನ ಬಗ್ಗೆಯೂ ಹಾಸ್ಯಮಿಶ್ರಿತವಾಗಿ ಮಾತನಾಡಿದ್ದ ನಾನಾ ಅವರ ಮಾತುಗಳು ಈಗ ಅಭಿಮಾನಿಗಳನ್ನು ಭಾವುಕರನ್ನಾಗಿಸಿವೆ.
ಅಕ್ಟೋಬರ್ 8ರಂದು ಗೋವಾದಲ್ಲಿ ಹೃದಯಾಘಾತದಿಂದ ನಾನಾ ಪಾಟೇಕರ್ ನಿಧನರಾಗಿದ್ದಾರೆ. ಬಳಿಕ ಮಹಾರಾಷ್ಟ್ರದ ಗಣ್ಯ ರಾಜಕಾರಣಿಗಳು, ಕುಟುಂಬ ಸದಸ್ಯರು ಹಾಗೂ ಚಿತ್ರರಂಗದ ಪ್ರಮುಖರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿತು. ಈ ನಡುವೆ, ತಮ್ಮ ಅಂತಿಮ ವಿಧಿವಿಧಾನಗಳ ಕುರಿತು ನಾನಾ ಹಿಂದೆ ನೀಡಿದ್ದ ಸಂದರ್ಶನದ ತುಣುಕು ಮತ್ತೆ ಗಮನ ಸೆಳೆಯುತ್ತಿದೆ.
ಸಂದರ್ಶನದಲ್ಲಿ ಮಾತನಾಡಿದ್ದ ನಾನಾ, “ನನ್ನ ಅಂತ್ಯಕ್ರಿಯೆಗೆ 12 ಮಣ್ ಅಂದರೆ ಸುಮಾರು 447 ಕೆ.ಜಿ. ಕಟ್ಟಿಗೆ ಬೇಕಾಗುತ್ತದೆ. ಅದನ್ನು ನಾನು ಸಂಪಾದಿಸಿ ಇಟ್ಟುಕೊಂಡಿದ್ದೇನೆ. ಅದೇ ನನ್ನ ಅಂತಿಮ ಆಸ್ತಿ. ಕಟ್ಟಿಗೆಗಳನ್ನು ಈಗಾಗಲೇ ಸಿದ್ಧಪಡಿಸಿದ್ದೇನೆ. ಅವು ಚೆನ್ನಾಗಿ ಒಣಗಿವೆ. ನನ್ನ ಅಂತ್ಯಕ್ರಿಯೆಗೆ ಅವುಗಳನ್ನೇ ಬಳಸಿ ಎಂದು ಹೇಳಿದ್ದೇನೆ” ಎಂದಿದ್ದರು.
ಇಷ್ಟಕ್ಕೇ ನಿಲ್ಲದ ನಾನಾ, ಹಸಿ ಕಟ್ಟಿಗೆಗಳನ್ನು ಬಳಸಬಾರದು ಎಂಬುದಕ್ಕೂ ತಮಾಷೆಯ ಕಾರಣ ನೀಡಿದ್ದರು. “ಹಸಿ ಕಟ್ಟಿಗೆಗಳಿಂದ ಹೆಚ್ಚು ಹೊಗೆ ಬರುತ್ತದೆ. ಅದು ಅಂತ್ಯಕ್ರಿಯೆಗೆ ಬಂದವರ ಕಣ್ಣಿಗೆ ಹೋಗಿ ನೀರು ತರಿಸುತ್ತದೆ. ಅವರು ನನಗಾಗಿ ಕಣ್ಣೀರು ಹಾಕುತ್ತಿದ್ದಾರೆ ಎಂದು ನಾನು ತಪ್ಪಾಗಿ ಭಾವಿಸಬಹುದು. ಸಾಯುವ ಸಮಯದಲ್ಲೂ ಅಂತಹ ತಪ್ಪು ಕಲ್ಪನೆ ಬೇಡ” ಎಂದು ನಗುತ್ತಲೇ ಹೇಳಿದ್ದರು.
ನಾನಾ ಅವರ ಈ ಮಾತುಗಳು ಈಗ ಮತ್ತೆ ಚರ್ಚೆಯಾಗುತ್ತಿವೆ. ಸಾವಿನಂತಹ ಗಂಭೀರ ವಿಷಯವನ್ನೂ ಹಾಸ್ಯದ ಮೂಲಕ ಹೇಳುವ ಅವರ ವಿಶಿಷ್ಟ ವ್ಯಕ್ತಿತ್ವವನ್ನು ಅಭಿಮಾನಿಗಳು ನೆನಪಿಸಿಕೊಳ್ಳುತ್ತಿದ್ದಾರೆ.
ಚಿತ್ರರಂಗದಲ್ಲಿ ಹೆಸರು, ಹಣ ಮತ್ತು ಖ್ಯಾತಿಯ ಹಿಂದೆ ಓಡುವವರ ನಡುವೆ ನಾನಾ ಪಾಟೇಕರ್ ಸರಳ ಜೀವನಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಕೃಷಿ, ಸಮಾಜಸೇವೆ, ನಾಟಕ ಮತ್ತು ಸಾಹಿತ್ಯದಲ್ಲೂ ಆಸಕ್ತಿ ಹೊಂದಿದ್ದ ನಾನಾ, ತಮ್ಮ ಕೆಲಸದ ಮೂಲಕ ವಿಭಿನ್ನ ಗುರುತು ಮೂಡಿಸಿದ್ದರು.
ಪರದೆಯ ಮೇಲಿನ ಪ್ರಬಲ ಅಭಿನಯದ ಜೊತೆಗೆ, ನೈಜ ಬದುಕಿನ ಸರಳತೆ ಮತ್ತು ನೇರ ಮಾತುಗಳಿಂದಲೂ ನಾನಾ ಜನರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದರು. ಇದೀಗ ಅವರ ಹಳೆಯ ವಿಡಿಯೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ನೆಚ್ಚಿನ ನಟನನ್ನು ಭಾವುಕವಾಗಿ ಸ್ಮರಿಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




