*ನಿಜವಾಯ್ತು ಎ.ಆರ್.ರೆಹಮಾನ್ ಬಗ್ಗೆ 12 ವರ್ಷಗಳ ಹಿಂದೆ ಅಭಿಮಾನಿ ನುಡಿದಿದ್ದ ಭವಿಷ್ಯ*

ಪ್ರಗತಿವಾಹಿನಿ ಸುದ್ದಿ: ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ರಾಮಾಯಣ ಸಿನಿಮಾದ ಸಿನಿಮಾದ ಆಲ್ಬಂ ಲಾಂಚ್ ಇವೆಂಟ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು, ತಮ್ಮ ಅಭಿಮಾನಿಯೊಬ್ಬ 12 ವರ್ಷಗಳ ಹಿಂದೆ ಬರೆದಿದ್ದ ಪತ್ರವೊಂದನ್ನು ಓದಿದ್ದಾರೆ.
‘ರಾಮಾಯಣ’ ಸಿನಿಮಾ ವಿಶ್ವಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. ಖ್ಯಾತ ಸಂಗೀತ ನಿರ್ದೇಶಕರುಗಳಾಗಿರುವ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಅವರುಗಳು ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಚೆನ್ನೈನಲ್ಲಿ ಸಿನಿಮಾದ ಆಲ್ಬಂ ಲಾಂಚ್ ಇವೆಂಟ್ ಅನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ತಮಗೆ 12 ವರ್ಷದ ಹಿಂದೆ ಅಭಿಮಾನಿಯೊಬ್ಬ ಕಳಿಸಿದ್ದ ಇ-ಮೇಲ್ ಅನ್ನು ಓದಿ ಹೇಳಿದರು. ಅಭಿಮಾನಿ 12 ವರ್ಷದ ಹಿಂದೆಯೇ ರೆಹಮಾನ್ ಬಗ್ಗೆ ಭವಿಷ್ಯವೊಂದನ್ನು ನುಡಿದಿದ್ದು, ಆ ಭವಿಷ್ಯದ ನುಡಿಗಳು ಈಗ ನಿಜವಾಗಿವೆ ಎಂದು ತಿಳಿಸಿದ್ದಾರೆ.
ಎ.ಆರ್.ರೆಹಮಾನ್ ಹೇಳಿದಂತೆ, ಅಭಿಮಾನಿಯೊಬ್ಬ 2014 ರಲ್ಲಿ ಅವರಿಗೆ ಇ-ಮೇಲ್ ಮಾಡಿ, ‘ನೀವು ‘ರಾಮಾಯಣ’ ಸಿನಿಮಾಕ್ಕೆ ಸಂಗೀತ ನೀಡುತ್ತೀರಿ’ ಎಂದಿದ್ದನಂತೆ. ಆ ಭವಿಷ್ಯ ಈಗ ನಿಜವಾಗಿದೆ.
ಚೆನ್ನೈ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ರಹಮಾನ್, ‘ನಾನು ಒಂದಷ್ಟು ವಿಷಯವನ್ನು ಹಂಚಿಕೊಳ್ಳಲು ಬಯಸುತ್ತೇನೆ. 2014ರಲ್ಲಿ ಸತೀಶ್ ಎಂಬುವರು, ನಾನು ಮುಂದೆ ‘ರಾಮಾಯಣ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದೇನೆ ಎಂದು ಭವಿಷ್ಯ ನುಡಿದಿದ್ದರು’ ಎಂದು ಹೇಳಿದರು. ಬಳಿಕ ಅವರು ಆ ಇಮೇಲ್ ಸಂದೇಶವನ್ನು ಓದಿದರು.
ಸತೀಶ್ ಬರೆದಿದ್ದ ಆ ಇಮೇಲ್‌ನಲ್ಲಿ ಹೀಗಿತ್ತು, ‘ಬೆಳಗ್ಗೆ ನೀವು ನನ್ನ ಕನಸಿನಲ್ಲಿ ಬಂದಿದ್ದೀರಿ. ಇದು ನಿಜವಾಗುತ್ತದೆ ಎಂದು ನಾನು ನಂಬುತ್ತೇನೆ. ನೀವು ಭಾರತಾದ್ಯಂತ ಮತ್ತು ವಿಶ್ವದಾದ್ಯಂತ ಮಹಾನ್ ಮಹಾಕಾವ್ಯವಾದ ‘ರಾಮಾಯಣ’ವನ್ನು ಪ್ರಸ್ತುತಪಡಿಸುತ್ತಾ ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೀರಿ’ ಎಂದು ಬರೆಯಲಾಗಿತ್ತು. ಸತೀಶ್ ಎಂಬುವರು 2014 ರಲ್ಲೇ ಈ ಸಂದೇಶವನ್ನು ರೆಹಮಾನ್ ಅವರಿಗೆ ಕಳಿಸಿದ್ದರು. ಅದು ಈಗ ನಿಜವಾಗಿದೆ.
’ರಾಮಾಯಣ’ ಸಿನಿಮಾಕ್ಕೆ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಸಂಗೀತ ನೀಡಿದ್ದಾರೆ. ಇಬ್ಬರೂ ಸಹ ಆಸ್ಕರ್ ವಿಜೇತರಾಗಿದ್ದು ವಿಶ್ವದ ಅತ್ಯುತ್ತಮ ಸಂಗೀತ ನಿರ್ದೇಶಕರು. ಹಾಗಾಗಿ ಸಿನಿಮಾದ ಸಂಗೀತದ ಮೇಲೆ ಭಾರಿ ನಿರೀಕ್ಷೆಗಳು ಮೂಡಿವೆ.
ಈಗಾಗಲೇ ಬಿಡುಗಡೆ ಆಗಿರುವ ‘ರಾಮಾಯಣ’ ಸಿನಿಮಾದ ಕೆಲ ಹಾಡುಗಳು ಮೆಚ್ಚುಗೆ ಗಳಿಸಿವೆ. ಆದರೆ ಇತ್ತೀಚೆಗೆ ಬಿಡುಗಡೆ ಆದ ‘ರಾವಣ ತಾಂಡವಂ’ಗೆ ನೀಡಿರುವ ಸಂಗೀತದ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಅದಕ್ಕೆ ಮುಂಚೆ ಬಿಡುಗಡೆ ಆದ ಕೆಲ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




