*ಬೆಳಗಾವಿಯ ರೈತರ ಜಮೀನಿನಲ್ಲಿ ಮೋಟಾರ್ ಪಂಪ್ ಕಳ್ಳತನ*: *ಇಬ್ಬರ ಬಂಧನ*

ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ರೈತರ ಜಮೀನುಗಳಲ್ಲಿ ಬೆಳೆಗಳಿಗೆ ನೀರುಣಿಸಲು ಅಳವಡಿಸಿದ್ದ ಮೋಟಾರ್ ಪಂಪ್‌ಗಳು ಹಾಗೂ ಕೇಬಲ್ ವೈರ್‌ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಾರಿಹಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 3.60 ಲಕ್ಷ ರೂ. ಮೌಲ್ಯದ 12 ಮೋಟಾರ್ ಪಂಪ್‌ಗಳು, 300 ಮೀಟರ್ ಕೇಬಲ್ ವೈರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ.
ತುಮ್ಮರಗುದ್ದಿ ಗ್ರಾಮದ ಗುಡದಪ್ಪ ನಿಂಗಪ್ಪ ತಳವಾರ (36) ಮತ್ತು ಕರಿಕಟ್ಟಿ ಗ್ರಾಮದ ಕಲ್ಲಪ್ಪ ಲಕ್ಕಪ್ಪ ನಾಯಕ (42) ಬಂಧಿತ ಆರೋಪಿಗಳು.
ಅ.15ರಂದು ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ಹುಡಲಿ ಗ್ರಾಮದ ಜಮೀನಿನಲ್ಲಿ ಬೆಳೆಗಳಿಗೆ ನೀರು ಪೂರೈಸಲು ಅಳವಡಿಸಿದ್ದ ಟೆಕ್ಸ್ಮೋ ಕಂಪನಿಯ 5 ಎಚ್‌ಪಿ ಮೋಟಾರ್ ಪಂಪ್ ಕಳವಾಗಿತ್ತು. ಇದೇ ರೀತಿ ಹುಡಲಿ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ರೈತರ ಮೋಟಾರ್ ಪಂಪ್‌ಗಳು ಕಳ್ಳತನವಾಗಿದ್ದ ಬಗ್ಗೆ ದೂರು ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಅ.22ರಂದು ಮಧ್ಯಾಹ್ನ ಮಾರಿಹಾಳ–ತುಮ್ಮರಗುದ್ದಿ ರಸ್ತೆಯಲ್ಲಿ ಬೈಕ್‌ನಲ್ಲಿ ಚೀಲವೊಂದರಲ್ಲಿ ಮೋಟಾರ್ ಪಂಪ್ ಸಾಗಿಸುತ್ತಿದ್ದ ಇಬ್ಬರನ್ನು ತಡೆದು ವಶಕ್ಕೆ ಪಡೆದರು. ವಿಚಾರಣೆ ವೇಳೆ ಆರೋಪಿಗಳು ಹುಡಲಿ, ತುಮ್ಮರಗುದ್ದಿ, ಮಾರಿಹಾಳ, ಖಾನಗಾಂವ ಹಾಗೂ ರಂಗದೋಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮೋಟಾರ್ ಪಂಪ್ ಮತ್ತು ಕೇಬಲ್ ವೈರ್‌ಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ ಕಳವು ಮಾಡಿದ್ದ 12 ಮೋಟಾರ್ ಪಂಪ್‌ಗಳು, 300 ಮೀಟರ್ ಕೇಬಲ್ ವೈರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಸೇರಿದಂತೆ ಒಟ್ಟು 3.60 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




