*ಬೆಳಗಾವಿಯಲ್ಲಿ ಮಾಂಜಾ ದಾರದಿಂದ ಪೊಲೀಸ್ ಸಿಬ್ಬಂದಿ ಗಾಯ*: *ಮೂಗಿಗೆ ಆರು ಹೊಲಿಗೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಾಳಿಯಲ್ಲಿ ಹಾರಿಬಂದ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಅಥವಾ ಮುಖಕ್ಕೆ ಸಿಲುಕಿದರೆ ಪ್ರಾಣಕ್ಕೇ ಅಪಾಯ ಎಂಬ ಆತಂಕದ ನಡುವೆಯೇ, ಬೆಳಗಾವಿಯಲ್ಲಿ ರೈಲ್ವೆ ಪೊಲೀಸ್ ಸಿಬ್ಬಂದಿಯೊಬ್ಬರು ಮಾಂಜಾ ದಾರಕ್ಕೆ ಸಿಲುಕಿ ಗಾಯಗೊಂಡಿದ್ದಾರೆ.
ನಗರದ ಕಪಿಲೇಶ್ವರ ಫ್ಲೈಓವರ್ ಮೇಲೆ ಸಂಚರಿಸುತ್ತಿದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ಬಿ.ಆರ್. ನಾಯಕ್ ಅವರ ಮೂಗಿನ ಭಾಗಕ್ಕೆ ಮಾಂಜಾ ದಾರ ಸಿಲುಕಿ ಗಾಯವಾಗಿದೆ. ಗಾಯದ ತೀವ್ರತೆಯಿಂದಾಗಿ ಅವರಿಗೆ ಸುಮಾರು ಆರು ಹೊಲಿಗೆ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಮಾಂಜಾ ದಾರದಿಂದಾಗಿ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಸೇರಿದಂತೆ ಸಾರ್ವಜನಿಕರು ಅಪಾಯ ಎದುರಿಸುವಂತಾಗಿದೆ. ರಸ್ತೆಗಳಲ್ಲಿ ಹಾರಿಬರುವ ಅಥವಾ ಸಡಿಲವಾಗಿ ಬಿದ್ದಿರುವ ದಾರಗಳು ಮುಖ, ಮೂಗು ಹಾಗೂ ಕುತ್ತಿಗೆಗೆ ಸಿಲುಕಿದರೆ ಗಂಭೀರ ಗಾಯಗಳಾಗುವ ಸಾಧ್ಯತೆಯಿದೆ. ಈ ಹಿಂದೆ ಬೆಳಗಾವಿಯ ಛಾಯಾಗ್ರಾಹಕ ವಿಶ್ವನಾಥ ದೇಸಾಯಿ ಅವರೂ ಮಾಂಜಾ ದಾರದಿಂದ ಗಾಯಗೊಂಡು ಚಿಕಿತ್ಸೆ ಪಡೆದಿದ್ದರು.
ಮಾಂಜಾ ದಾರದ ಮಾರಾಟ ಮತ್ತು ಬಳಕೆಗೆ ಕಡಿವಾಣ ಹಾಕಲು ಆಗ್ರಹ
ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡುತ್ತಿರುವ ಅಪಾಯಕಾರಿ ಮಾಂಜಾ ದಾರದ ಮಾರಾಟ ಹಾಗೂ ಬಳಕೆಯನ್ನು ತಡೆಯಲು ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಿಶೇಷವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ, ಫ್ಲೈಓವರ್‌ಗಳಲ್ಲಿ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಇಂತಹ ದಾರಗಳಿಂದ ಅಪಘಾತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮಾಂಜಾ ದಾರದ ಅಪಾಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಗಾಳಿಪಟ ಹಾರಿಸುವಾಗ ಸಾರ್ವಜನಿಕರ ಸುರಕ್ಷತೆಯನ್ನು ಕಡೆಗಣಿಸಬಾರದು. ಮತ್ತಷ್ಟು ಅನಾಹುತಗಳು ಸಂಭವಿಸುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಂಡು ಅಪಾಯಕಾರಿ ಮಾಂಜಾ ದಾರದ ಬಳಕೆಗೆ ಕಡಿವಾಣ ಹಾಕಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




