*ಆರ್ಎಸ್ಎಸ್ ನೆಲ ನಾಗ್ಪುರದಲ್ಲಿ ಕಾಂಗ್ರೆಸ್ ಗೆಲುವು*: *ಬಿಜೆಪಿಗೆ 3,271 ಮತಗಳ ಸೋಲು!*

ಪ್ರಗತಿವಾಹಿನಿ ಸುದ್ದಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಪ್ರಧಾನ ಕಚೇರಿ ಇರುವ ಹಾಗೂ ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲಾಗುವ ಮಹಾರಾಷ್ಟ್ರದ ನಾಗ್ಪುರ ಪದವೀಧರರ ವಿಧಾನ ಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಸತತ ಎರಡನೇ ಬಾರಿಗೆ ಗೆಲುವು ಸಾಧಿಸಿದೆ. ಸುದೀರ್ಘ ಮತ ಎಣಿಕೆಯ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಅಭಿಜಿತ್ ಗೋವಿಂದರಾವ್ ವಂಜಾರಿ, ಬಿಜೆಪಿ ಅಭ್ಯರ್ಥಿ ಸುಧಾಕರ್ ಕೊಹ್ಲೆ ಅವರನ್ನು 3,271 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತವರು ನಗರ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರವಾಗಿರುವ ನಾಗ್ಪುರದಲ್ಲಿ ಕಾಂಗ್ರೆಸ್ ಸಾಧಿಸಿರುವ ಈ ಗೆಲುವು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ಬಿಜೆಪಿ ಪ್ರಬಲ ಹಿಡಿತ ಹೊಂದಿದೆ ಎಂದು ಪರಿಗಣಿಸಲಾಗುವ ಪ್ರದೇಶದಲ್ಲಿ ಕಾಂಗ್ರೆಸ್ ತನ್ನ ಸ್ಥಾನವನ್ನು ಉಳಿಸಿಕೊಂಡಿರುವುದು ಗಮನ ಸೆಳೆದಿದೆ.
ವಕೀಲ ಹಾಗೂ ಶಿಕ್ಷಣತಜ್ಞ ಅಭಿಜಿತ್ ವಂಜಾರಿ 2020ರಲ್ಲೂ ಇದೇ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಎನ್ಸಿಪಿ (ಶರದ್ ಪವಾರ್ ಬಣ) ಒಳಗೊಂಡ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಬೆಂಬಲದೊಂದಿಗೆ ಕಣಕ್ಕಿಳಿದಿದ್ದರು. ಒಟ್ಟು 38 ಅಭ್ಯರ್ಥಿಗಳು ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ ವಂಜಾರಿ ಮತ್ತು ಬಿಜೆಪಿ ಅಭ್ಯರ್ಥಿ ಸುಧಾಕರ್ ಕೊಹ್ಲೆ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು.
ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ವಂಜಾರಿ, ಬಿಜೆಪಿ ತನ್ನ ಸಂಪೂರ್ಣ ಶಕ್ತಿ ಹಾಗೂ ಪ್ರಮುಖ ನಾಯಕರನ್ನು ನಾಗ್ಪುರದಲ್ಲಿ ನಿಯೋಜಿಸಿದ್ದರೂ ಮತದಾರರು ಕಾಂಗ್ರೆಸ್ ಕೈಹಿಡಿದಿದ್ದಾರೆ ಎಂದು ಹೇಳಿದರು. ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಒಗ್ಗಟ್ಟು ಹಾಗೂ ಪ್ರಚಾರದಲ್ಲಿ ಕೈಜೋಡಿಸಿದ 48 ಸಂಘಟನೆಗಳ ಕಾರ್ಯಕರ್ತರ ಶ್ರಮದಿಂದ ಗೆಲುವು ಸಾಧ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಮತ ಎಣಿಕೆ ನಡೆದ ಮಾಂಕಾಪುರ ಒಳಾಂಗಣ ಕ್ರೀಡಾಂಗಣದ ಹೊರಗೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ವಾತಾವರಣವನ್ನು ನಿಯಂತ್ರಣಕ್ಕೆ ತಂದರು.
ಮಹಾರಾಷ್ಟ್ರ ವಿಧಾನ ಪರಿಷತ್ತಿನ ಐದು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಿಜೆಪಿ ಮತ್ತು ಶಿವಸೇನೆ ತಲಾ ಒಂದು ಸ್ಥಾನ ಪಡೆದಿವೆ. ಇತರ ರಾಜ್ಯಗಳ ವಿಧಾನ ಪರಿಷತ್ ಚುನಾವಣೆಗಳಲ್ಲಿನ ಫಲಿತಾಂಶಗಳ ಹಿನ್ನೆಲೆಯಲ್ಲಿ ನಾಗ್ಪುರದ ಈ ಗೆಲುವು ಕಾಂಗ್ರೆಸ್ಗೆ ರಾಜಕೀಯವಾಗಿ ಮಹತ್ವದ ಬೆಳವಣಿಗೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



