
ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ದೀಪಾವಳಿ ಹಬ್ಬದ ಕೊಡುಗೆ ನೀಡಿದೆ. ನಿರೀಕ್ಷೆಯಂತೆ ತುಟ್ಟಿಭತ್ಯೆ (ಡಿಎ) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಗ್ರೀನ್ ಸಿಗ್ನಲ್ ನೀಡಿದೆ.
ಕೇಂದ್ರ ಸರ್ಕಾರಿ ನೌಕರಿಗೆ ಶೇ 3ರಷ್ಟು ತುಟ್ಟಿ ಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ ನೀಡಿದೆ. ಈ ಹೆಚ್ಚಳ 2026ರ ಜುಲೈನಿಂದಲೇ ಅನ್ವಯವಾಗುವಂತೆ ಜಾರಿಗೆ ಬರಲಿದೆ.
ಡಿಎ ಮತ್ತು ಡಿಆರ್ ದರಗಳನ್ನು ಕ್ರಮವಾಗಿ ಮೂಲ ವೇತನ ಮತ್ತು ಪಿಂಚಣಿಯ ಶೇ 60ರಿಂದ ಶೇ 63ಕ್ಕೆ ಹೆಚ್ಚಿಸಲಿದೆ. ಈ ಹೆಚ್ಚಳದಿಂದ ದೇಶಾದ್ಯಂತ ಸುಮಾರು 48.54 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.71 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.
ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, ಡಿಎ ಮತ್ತು ಡಿಆರ್ ಹೆಚ್ಚಳದಿಂದ ಕೇಂದ್ರ ಸರ್ಕಾರದ ಮೇಲೆ ಒಟ್ಟಾರೆ ವಾರ್ಷಿಕ 10,016.10 ಕೋಟಿ ರೂಗಳಷ್ಟು ಹೆಚ್ಚುವರಿ ಹೊರೆ ಬೀಳಲಿದೆ. 7ನೇ ಕೇಂದ್ರ ವೇತನ ಆಯೋಗದ ಶಿಫಾರಸಿನ ಅನುಸಾರ ಡಿಎ ಮತ್ತು ಡಿಆರ್ನ ಹೆಚ್ಚುವರಿ ಕಂತನ್ನು ಮಂಜೂರು ಮಾಡಲಾಗಿದೆ.
ಸರ್ಕಾರಿ ನೌಕರರ ಜೀವನ ವೆಚ್ಚದ ಮೇಲೆ ಹಣದುಬ್ಬರವು ಬೀರುವ ಪರಿಣಾಮವನ್ನು ಸರಿದೂಗಿಸಲು ಅವರಿಗೆ ತುಟ್ಟಿ ಭತ್ಯೆಯನ್ನು ನೀಡಲಾಗುತ್ತದೆ. ಅದೇ ರೀತಿ ಪಿಂಚಣಿದಾರರಿಗೆ ತುಟ್ಟಿ ಪರಿಹಾರ ನೀಡಲಾಗುವುದು ಬೆಲೆ ಏರಿಕೆಯು ತಮ್ಮ ಪಿಂಚಣಿ ಆದಾಯದ ಮೇಲೆ ಬೀರುವ ಪರಿಣಾಮವನ್ನು ನಿಭಾಯಿಸಲು ಇದು ಅವರಿಗೆ ಸಹಾಯ ಮಾಡುತ್ತದೆ. ಡಿಎ ಮೂಲ ವೇತನದ ಮೇಲೆ ನಿರ್ಧರಿಸಲಾಗುತ್ತದೆ ಮತ್ತು ಇದನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ.
ಸರ್ಕಾರವು ಸಾಮಾನ್ಯವಾಗಿ ವರ್ಷದಲ್ಲಿ ಎರಡು ಬಾರಿ ಜನವರಿ ಮತ್ತು ಜುಲೈ ತಿಂಗಳಲ್ಲಿ ಡಿಎ ಪರಿಷ್ಕರಿಸುತ್ತದೆ. ಹಣದುಬ್ಬರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಈ ಡಿಎ ಹೆಚ್ಚಳದ ನಿರ್ಧಾರ ತೆಗೆದುಕೊಳ್ಳುತ್ತದೆ. ಇದೀಗ ಜುಲೈ ತಿಂಗಳಿಂದ ಪೂರ್ವಾನ್ವಯವಾಗುವಂತೆ ಡಿಎ ಮತ್ತು ಡಿಆರ್ ಅನ್ನು ಘೋಷಿಸಲಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚುವರಿ ಕಂತು ತುಟ್ಟಿ ಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್) ಬಿಡುಗಡೆ ಮಾಡಲು ಅನುಮೋದನೆ ನೀಡಿದೆ. ಜುಲೈ 1 ರಿಂದ ಅನ್ವಯವಾಗುವಂತೆ, ಪ್ರಸ್ತುತ ಇರುವ ಮೂಲ ಭತ್ಯೆಯ ಶೇ 60 ರಿಂದ 63ಕ್ಕೆ ಹೆಚ್ಚಿಸಿ ನೀಡಲಾಗುವುದು ಎಂದು ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




