*ಕೆಪಿಎಸ್ಸಿ ನೇಮಕಾತಿ ಹಗರಣ*: *ಒಂದೇ ವರ್ಷದಲ್ಲಿ ಸಾಹುಕಾರ್ ಶಿವಶಂಕರಪ್ಪ 10 ಕೋಟಿ ಅಕ್ರಮ ವಹಿವಾಟು*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಹಗರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ಚುರುಕುಗೊಳಿಸಿದೆ. ಪ್ರಕರಣದ ಪ್ರಮುಖ ಆರೋಪಿ ಶಿವಶಂಕರಪ್ಪ ಸಾಹುಕಾರ್ಗೆ ಸಂಬಂಧಿಸಿದಂತೆ ಕೋಟ್ಯಂತರ ರೂಪಾಯಿಗಳ ಅಕ್ರಮ ಹಣಕಾಸು ವಹಿವಾಟು ನಡೆದಿರುವ ಆರೋಪ ಕೇಳಿಬಂದಿದೆ. ಒಂದೇ ವರ್ಷದಲ್ಲಿ ಬರೋಬ್ಬರಿ ₹10 ಕೋಟಿ ಅಕ್ರಮ ವಹಿವಾಟು ನಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಜೊತೆ ಶಿವಶಂಕರಪ್ಪ ಸಾಹುಕಾರ್ ಹಣಕಾಸಿನ ವ್ಯವಹಾರ ನಡೆಸಿದ್ದರು ಎನ್ನಲಾಗಿದೆ. 2025ರ ಆಗಸ್ಟ್ನಿಂದ ಡಿಸೆಂಬರ್ವರೆಗೆ ಉದ್ಯಮಿಯಿಂದ ₹4.99 ಕೋಟಿ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಮಾಹಿತಿಯ ಆಧಾರದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಿಯಲ್ ಎಸ್ಟೇಟ್ ಉದ್ಯಮಿಯ ನಿವಾಸ ಹಾಗೂ ಕಚೇರಿಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ಉದ್ಯಮಿಯ ಕಾರಿನಲ್ಲಿ ಹಲವು ಪ್ರಮುಖ ದಾಖಲೆಗಳು ಹಾಗೂ ಕೈಬರಹದ ಡೈರಿಯೊಂದು ಪತ್ತೆಯಾಗಿದೆ. ಈ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದು, ಹಣಕಾಸಿನ ವಹಿವಾಟು ಮತ್ತು ಕೆಪಿಎಸ್ಸಿ ನೇಮಕಾತಿ ಹಗರಣದ ನಡುವಿನ ಸಂಬಂಧದ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ದಾಖಲೆಗಳಲ್ಲಿ ಕೋಟ್ಯಂತರ ರೂಪಾಯಿಗಳ ವಹಿವಾಟಿನ ವಿವರಗಳಿವೆ ಎಂಬ ಮಾಹಿತಿ ಹೊರಬಿದ್ದಿದ್ದು, ಪ್ರಕರಣದ ತನಿಖೆಗೆ ಮತ್ತಷ್ಟು ಮಹತ್ವ ಬಂದಿದೆ. ಸದ್ಯ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಹಣದ ಮೂಲ, ವಹಿವಾಟಿನ ಉದ್ದೇಶ ಹಾಗೂ ನೇಮಕಾತಿ ಹಗರಣದೊಂದಿಗಿನ ಸಂಬಂಧದ ಬಗ್ಗೆ ತನಿಖೆಯಿಂದ ಇನ್ನಷ್ಟು ವಿವರಗಳು ಹೊರಬರಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



