*ವೈಭವ್ ಸೂರ್ಯವಂಶಿಗೆ ಮತ್ತೊಮ್ಮೆ ನಿರಾಸೆ*: *ಕೊನೆಯ ಟಿ20 ಪಂದ್ಯದಲ್ಲೂ ಅವಕಾಶ ನೀಡದ ಗಂಭೀರ್*

ಪ್ರಗತಿವಾಹಿನಿ ಸುದ್ದಿ: ನ್ಯೂಜಿಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲೂ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿಲ್ಲ. ಐದು ಪಂದ್ಯಗಳ ಸರಣಿಯನ್ನು ಭಾರತ 3-2 ಅಂತರದಲ್ಲಿ ಗೆದ್ದುಕೊಂಡಿದೆ. ಆದರೂ 15 ವರ್ಷದ ಪ್ರತಿಭಾನ್ವಿತ ಆಟಗಾರನಿಗೆ ಕೊನೆಯ ಪಂದ್ಯದಲ್ಲೂ ಅವಕಾಶ ನೀಡಿಲ್ಲ. ಈ ಆಯ್ಕೆ ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ಸರಣಿಯಲ್ಲಿ ವೈಭವ್ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಆಡಿದ್ದರು. ಕೊನೆಯ ಪಂದ್ಯದಲ್ಲಾದರೂ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಆದರೆ ಭಾರತ ತಂಡ ತನ್ನ ಹಿಂದಿನ ಬ್ಯಾಟಿಂಗ್ ಸಂಯೋಜನೆಯನ್ನೇ ಮುಂದುವರಿಸಿತು. ಅಂತಿಮ ಪಂದ್ಯಕ್ಕೆ ಎರಡು ಬದಲಾವಣೆಗಳನ್ನು ಮಾಡಲಾಗಿದ್ದರೂ, ಅವೆರಡೂ ಬೌಲಿಂಗ್ ವಿಭಾಗಕ್ಕೆ ಸೀಮಿತವಾಗಿದ್ದವು. ಹೀಗಾಗಿ ವೈಭವ್ಗೆ ಮತ್ತೊಮ್ಮೆ ಅವಕಾಶ ಕೈತಪ್ಪಿತು.
ಆಯ್ಕೆ ನಿರ್ಧಾರ ಸಮರ್ಥಿಸಿಕೊಂಡ ಗಂಭೀರ್
ಪಂದ್ಯ ಆರಂಭಕ್ಕೂ ಮುನ್ನ ಮಾತನಾಡಿದ ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್, ತಂಡದ ಆಯ್ಕೆ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಎಲ್ಲರನ್ನೂ ಖುಷಿಪಡಿಸುವುದು ತಮ್ಮ ಕೆಲಸವಲ್ಲ. ತಂಡದ ಹಿತದೃಷ್ಟಿಯಿಂದ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ತಮ್ಮ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದ್ದಾರೆ.
ಜನಪ್ರಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭ. ಆದರೆ ತಂಡಕ್ಕೆ ಯಾವುದು ಸೂಕ್ತವೋ ಅದನ್ನು ಆಯ್ಕೆ ಮಾಡುವುದು ಮುಖ್ಯ ಎಂದು ಗಂಭೀರ್ ಹೇಳಿದ್ದಾರೆ.
ತಂಡದ ಆಯ್ಕೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದ್ದ ಪ್ರಶ್ನೆಗಳಿಗೂ ಗಂಭೀರ್ ಪ್ರತಿಕ್ರಿಯಿಸಿದ್ದಾರೆ. ತಂಡದ ಆದ್ಯತೆಗಳು ಹೊರಗಿನ ಅಭಿಪ್ರಾಯಗಳಿಗಿಂತ ಮುಖ್ಯವಾಗಿರಬೇಕು. ಡ್ರೆಸ್ಸಿಂಗ್ ರೂಮ್ನಲ್ಲಿ ಪ್ರತಿಯೊಬ್ಬ ಆಟಗಾರನಿಗೂ ಭದ್ರತೆಯ ಭಾವನೆ ಇರುವಂತೆ ನೋಡಿಕೊಳ್ಳುವುದು ತಮ್ಮ ಜವಾಬ್ದಾರಿ ಎಂದಿದ್ದಾರೆ.
ಭಾರತ ತಂಡದಲ್ಲಿ ಸಾಕಷ್ಟು ಪ್ರತಿಭಾವಂತ ಆಟಗಾರರಿದ್ದಾರೆ. ದೀರ್ಘಕಾಲದಿಂದ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವುದು ಅಗತ್ಯ. ಈ ಸರಣಿಯಲ್ಲೂ ಇದೇ ರೀತಿಯ ನಿರ್ಧಾರವನ್ನು ಅನುಸರಿಸಲಾಗಿದೆ ಎಂದು ಗಂಭೀರ್ ಸ್ಪಷ್ಟಪಡಿಸಿದ್ದಾರೆ.




