*ಉತ್ತರಾಖಂಡ ಹೆಲಿಕಾಪ್ಟರ್ ದುರಂತ*: *ಸರ್ಕಾರಿ ಗೌರವದೊಂದಿಗೆ ಸಿಸಿಬಿ ಇನ್ಸ್ಪೆಕ್ಟರ್ ಅರುಣ್ ಸಾಳುಂಕೆ ಅಂತ್ಯಕ್ರಿಯೆ*

ಪ್ರಗತಿವಾಹಿನಿ ಸುದ್ದಿ: ಉತ್ತರಾಖಂಡದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸಿಸಿಬಿ ಇನ್ಸ್ಪೆಕ್ಟರ್ ಅರುಣ್ ಸಾಳುಂಕೆ ಅವರ ಅಂತ್ಯಕ್ರಿಯೆ ಹುಟ್ಟೂರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಮರಾಠಾ ಸಂಪ್ರದಾಯದಂತೆ ನಡೆದ ಅಂತಿಮ ವಿಧಿವಿಧಾನಗಳ ವೇಳೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಗ್ರಾಮಸ್ಥರು ಕಣ್ಣೀರಿನ ವಿದಾಯ ಹೇಳಿದರು.
ಗ್ರಾಮದಲ್ಲಿರುವ ಅರುಣ್ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಿತು. ಪುತ್ರ ವಲ್ಲಭ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಸಿಸಿಬಿ ಮುಖ್ಯಸ್ಥ ಅಜಯ್ ಹಿಲೋರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು. ಪೊಲೀಸ್ ಇಲಾಖೆಯ ವತಿಯಿಂದ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು.
ಇದಕ್ಕೂ ಮುನ್ನ ಗೋವಾದಿಂದ ಅಥಣಿ ಮಾರ್ಗವಾಗಿ ಅರುಣ್ ಅವರ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸಿತು. ಸಾವಿರಾರು ಯುವಕರು ಬೈಕ್ ರ್ಯಾಲಿ ಮೂಲಕ ಮೃತದೇಹವನ್ನು ಸ್ವಾಗತಿಸಿ ಗ್ರಾಮಕ್ಕೆ ಕರೆತಂದರು. ಮಾರ್ಗದುದ್ದಕ್ಕೂ ಜನರು ನಿಂತು ಅರುಣ್ ಸಾಳುಂಕೆ ಅವರಿಗೆ ಗೌರವ ಸಲ್ಲಿಸಿದರು.
ನಂತರ ಗ್ರಾಮದ ತೋಟದ ಆವರಣದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅರುಣ್ ಅವರ ಸ್ನೇಹಿತರು, ಪೊಲೀಸ್ ಬ್ಯಾಚ್ನ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಪುತ್ರಿ ದೀಪ ಬೆಳಗಿಸಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ತಂದೆಯ ಅಂತಿಮ ದರ್ಶನದ ವೇಳೆ ಕುಟುಂಬದವರ ದುಃಖ ಕಂಡು ನೆರೆದಿದ್ದ ಜನಸ್ತೋಮವೂ ಕಣ್ಣೀರಾಯಿತು.
ಇಲಾಖೆಯಲ್ಲಿ ಅರುಣ್ ಅವರೊಂದಿಗೆ ಕೆಲಸ ಮಾಡಿದ್ದ ಅಧಿಕಾರಿಗಳು ಕೂಡ ತಮ್ಮ ಸಹೋದ್ಯೋಗಿಯನ್ನು ನೆನೆದು ಭಾವುಕರಾದರು. ಸಾವಿರಾರು ಜನರ ಸಮ್ಮುಖದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅರುಣ್ ಸಾಳುಂಕೆ ಅವರಿಗೆ ಅಂತಿಮ ವಿದಾಯ ನೀಡಲಾಯಿತು.




