Film & EntertainmentKarnataka NewsLatest

*ಪೊಲೀಸರ ನೋಟಿಸ್‌ಗೂ ಧನ್ವೀರ್ ಗೌಡ ಡೋಂಟ್ ಕೇರ್*: *ವಿಚಾರಣೆಗೆ ಗೈರಾದ ನಟ*

ಪ್ರಗತಿವಾಹಿನಿ ಸುದ್ದಿ: ನಟ ಧನ್ವೀರ್ ಗೌಡ ಸುತ್ತ ವಿವಾದಗಳ ಸರಣಿ ಮುಂದುವರಿದಿದೆ. ನಟ ಝೈದ್ ಖಾನ್ ವಿರುದ್ಧ ಅವಹೇಳನಕಾರಿ ಮತ್ತು ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆದರೆ, ನಿಗದಿತ ಸಮಯಕ್ಕೆ ಧನ್ವೀರ್ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಇದೀಗ ಎರಡನೇ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಧನ್ವೀರ್ ಗೌಡ ಮತ್ತು ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ವಿವಾದದ ನಡುವೆಯೇ, ಝೈದ್ ಖಾನ್ ವಿರುದ್ಧ ಧನ್ವೀರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಆಡಿಯೋ ವೈರಲ್ ಆಗುತ್ತಿದ್ದಂತೆ ಝೈದ್ ಖಾನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದರು.

ಇದರ ಬೆನ್ನಲ್ಲೇ ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ, ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಧನ್ವೀರ್‌ಗೆ ಮೊದಲ ನೋಟಿಸ್ ಜಾರಿ ಮಾಡಿದ್ದರು. ಆದರೆ, ನಿಗದಿತ ಸಮಯಕ್ಕೆ ಅವರು ಹಾಜರಾಗದ ಹಿನ್ನೆಲೆಯಲ್ಲಿ ಪೊಲೀಸರು ಇದೀಗ ಎರಡನೇ ನೋಟಿಸ್ ನೀಡಲು ಮುಂದಾಗಿದ್ದಾರೆ.

ಇನ್ನು, ಧನ್ವೀರ್ ಗೌಡ ವಿರುದ್ಧ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ದೂರುಗಳು ಮತ್ತು ಎಫ್‌ಐಆರ್‌ಗಳು ದಾಖಲಾಗಿವೆ ಎನ್ನಲಾಗಿದೆ. ಝೈದ್ ಖಾನ್ ಅಭಿಮಾನಿಗಳು ಮತ್ತು ಬೆಂಬಲಿಗರು ಧನ್ವೀರ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಹೀಗಾಗಿ ಎರಡನೇ ನೋಟಿಸ್ ಜಾರಿಯಾದ ಬಳಿಕವಾದರೂ ಧನ್ವೀರ್ ವಿಚಾರಣೆಗೆ ಹಾಜರಾಗುತ್ತಾರಾ? ಈ ಪ್ರಕರಣದಲ್ಲಿ ಮುಂದಿನ ಬೆಳವಣಿಗೆ ಏನಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

Related Articles

Back to top button