Kannada NewsKarnataka NewsLatest

*ದೇವರ ದರ್ಶನದ ವೇಳೆ ಕಳೆದುಹೋದ ಚಿನ್ನದ ಬಳೆ*: *ಪ್ರಾಮಾಣಿಕತೆ ಮೆರೆದ ಕಂದಾಯ ಸಿಬ್ಬಂದಿ*

ಪ್ರಗತಿವಾಹಿನಿ ಸುದ್ದಿ: ದೇವರ ದರ್ಶನಕ್ಕೆ ಬಂದ ಮಹಿಳೆಯೊಬ್ಬರಿಗೆ ಕಳೆದುಹೋದ ಚಿನ್ನದ ಬಳೆ ಮರಳಿ ಸಿಕ್ಕಿದೆ. ಬರೋಬ್ಬರಿ 3 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬಳೆಯನ್ನು ಕಂದಾಯ ಇಲಾಖೆ ಸಿಬ್ಬಂದಿ ಪ್ರಾಮಾಣಿಕತೆಯಿಂದ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. ಸಿಬ್ಬಂದಿಯ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ರಾಮನಗರದಿಂದ ಹಾಸನಾಂಬ ದೇವಿಯ ದರ್ಶನಕ್ಕೆ ಬಂದಿದ್ದ ರಮ್ಯಾ ಎಂಬ ಮಹಿಳೆ, ಸಹೋದರಿಯೊಂದಿಗೆ ದೇವಾಲಯಕ್ಕೆ ಆಗಮಿಸಿದ್ದರು. 1,000 ರೂಪಾಯಿ ವಿಶೇಷ ದರ್ಶನದ ಟಿಕೆಟ್ ಪಡೆದು ಸರತಿ ಸಾಲಿನಲ್ಲಿ ಸಾಗುತ್ತಿದ್ದ ವೇಳೆ ಅವರ ಕೈಯಲ್ಲಿದ್ದ ಚಿನ್ನದ ಬಳೆ ಕಳಚಿ ಬಿದ್ದಿತ್ತು.

ಸುಮಾರು 30 ಗ್ರಾಂ ತೂಕದ, 3 ಲಕ್ಷ ರೂಪಾಯಿ ಮೌಲ್ಯದ ಬಳೆ ಕಳೆದುಹೋಗಿರುವುದು ತಿಳಿಯುತ್ತಿದ್ದಂತೆ ರಮ್ಯಾ ದೇವಾಲಯದ ಆವರಣದಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ, ಎಲ್ಲಿಯೂ ಬಳೆ ಪತ್ತೆಯಾಗಿರಲಿಲ್ಲ. ಇದೇ ವೇಳೆ ಕಂದಾಯ ಇಲಾಖೆ ಸಿಬ್ಬಂದಿಗೆ ಚಿನ್ನದ ಬಳೆ ಸಿಕ್ಕಿತ್ತು. ಅದನ್ನು ತಮ್ಮ ಬಳಿಯೇ ಇಟ್ಟುಕೊಳ್ಳದೆ, ದೇವಾಲಯದಲ್ಲಿ ಮೈಕ್ ಮೂಲಕ ಪ್ರಕಟಣೆ ಮಾಡುತ್ತಿದ್ದ ಲಕ್ಷ್ಮೀನಾರಾಯಣ ಅವರಿಗೆ ಹಸ್ತಾಂತರಿಸಿದ್ದಾರೆ.

ಬಳಿಕ ಮೈಕ್‌ನಲ್ಲಿ ಚಿನ್ನದ ಬಳೆ ಸಿಕ್ಕಿರುವ ಬಗ್ಗೆ ಘೋಷಣೆ ಮಾಡುತ್ತಿದ್ದಂತೆ ರಮ್ಯಾ ಸ್ಥಳಕ್ಕೆ ಧಾವಿಸಿದ್ದಾರೆ. ತಮ್ಮ ಬಳೆಯನ್ನು ಗುರುತಿಸಿ ವಾಪಸ್ ಪಡೆದುಕೊಂಡಿದ್ದಾರೆ. ಕಳೆದುಕೊಂಡಿದ್ದ ಬೆಲೆಬಾಳುವ ಆಭರಣ ಮರಳಿ ಸಿಕ್ಕಿದ್ದರಿಂದ ಸಂತಸಗೊಂಡಿದ್ದಾರೆ.

ಒಟ್ಟಿನಲ್ಲಿ, 3 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬಳೆಯನ್ನು ಸುರಕ್ಷಿತವಾಗಿ ಮಾಲೀಕರಿಗೆ ತಲುಪಿಸಿದ ಕಂದಾಯ ಇಲಾಖೆ ಸಿಬ್ಬಂದಿಯ ಪ್ರಾಮಾಣಿಕತೆ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Related Articles

Back to top button