CrimeFilm & EntertainmentKannada NewsKarnataka NewsLatest

*ಜೈಲಿನ ರಾಜಾತಿಥ್ಯ ವಿಡಿಯೋ ವೈರಲ್ ಪ್ರಕರಣ*: *ನಟ ಧನ್ವೀರ್‌ಗೆ ಮತ್ತಷ್ಟು ಸಂಕಷ್ಟ*

ಪ್ರಗತಿವಾಹಿನಿ ಸುದ್ದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿದ ವಿಡಿಯೋ ವೈರಲ್ ಪ್ರಕರಣಕ್ಕೆ ಇದೀಗ ಮತ್ತೊಂದು ತಿರುವು ಸಿಕ್ಕಿದೆ. ಈ ವಿಡಿಯೋ ಪ್ರಸಾರದಲ್ಲಿ ನಟ ಧನ್ವೀರ್ ಅವರ ಮೊಬೈಲ್ ಬಳಕೆಯಾಗಿದೆ ಎಂಬುದಕ್ಕೆ ಸಾಕ್ಷ್ಯ ಲಭ್ಯವಾಗಿದೆ. ಮೊಬೈಲ್‌ನಿಂದ ಅಳಿಸಲಾದ ಮಾಹಿತಿಯನ್ನು ಮರುಪಡೆಯಲು ನಡೆಸಿದ್ದ ಪರಿಶೀಲನೆಯ ವರದಿ ಇದೀಗ ಸಿಸಿಬಿ ಪೊಲೀಸರ ಕೈ ಸೇರಿದೆ.

ಈ ಹಿಂದೆ ವಿಡಿಯೋ ವೈರಲ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಧನ್ವೀರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಅವರ ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಯಾವುದೇ ವಿಡಿಯೋಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಮೊಬೈಲ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ, ಅಳಿಸಲಾದ ಡೇಟಾವನ್ನು ಮರುಪಡೆಯಲು ಪೊಲೀಸರು ಮುಂದಾಗಿದ್ದರು. ಇದೀಗ ಈ ಪ್ರಕರಣ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನ ವಿಡಿಯೋಗಳಿಗೆ ಸಂಬಂಧಿಸಿದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಕಂಡಿದೆ.

ಮೊಬೈಲ್ ರಿಟ್ರೀವ್ ವರದಿಯಲ್ಲಿ ಧನ್ವೀರ್ ಅವರ ಫೋನ್‌ನಿಂದಲೇ ವಿಡಿಯೋ ವೈರಲ್ ಆಗಿರುವುದಕ್ಕೆ ಸಾಕ್ಷ್ಯ ಸಿಕ್ಕಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ, ಬಂಧನ ವಾರಂಟ್ ಪಡೆಯಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.

2026ರ ನವೆಂಬರ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಂಕಿತ ಉಗ್ರ ಜುಹಾದ್ ಹಮೀದ್, ಅತ್ಯಾಚಾರ ಪ್ರಕರಣದ ಅಪರಾಧಿ ಉಮೇಶ್ ರೆಡ್ಡಿ ಹಾಗೂ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ತರಣ್ ಮೊಬೈಲ್ ಬಳಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದರು.

ತನಿಖೆಯ ವೇಳೆ ನಟ ಧನ್ವೀರ್ ವಿಡಿಯೋ ವೈರಲ್ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ದೇವನಹಳ್ಳಿ ವಿಮಾನ ನಿಲ್ದಾಣದ ಬಳಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಇದೀಗ ಮೊಬೈಲ್ ರಿಟ್ರೀವ್ ವರದಿಯಲ್ಲಿ ಸಾಕ್ಷ್ಯ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.

Related Articles

Back to top button