*ಯಲ್ಲಮ್ಮನ ಹುಂಡಿಯಲ್ಲಿ ₹2.69 ಕೋಟಿ ಕಾಣಿಕೆ ಸಂಗ್ರಹ: ತಿಗಣೆಗಳ ಕಾಟದಿಂದ ಮುಕ್ತಿ ಕೋರಿ ಭಕ್ತನ ವಿಚಿತ್ರ ಪತ್ರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಉತ್ತರ ಕರ್ನಾಟಕದ ಆರಾಧ್ಯ ದೇವತೆ ಸವದತ್ತಿ ಯಲ್ಲಮ್ಮ ದೇವಿಯ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯದಲ್ಲಿ ಬರೋಬ್ಬರಿ 2 ಕೋಟಿ 69 ಲಕ್ಷ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ನಗದು, ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳ ರೂಪದಲ್ಲಿ ಭಕ್ತರು ತಮ್ಮ ಕಾಣಿಕೆಯನ್ನು ಸಮರ್ಪಿಸಿದ್ದಾರೆ.
ಹುಂಡಿ ಎಣಿಕೆ ವೇಳೆ 2 ಕೋಟಿ 34 ಲಕ್ಷ ರೂಪಾಯಿ ನಗದು, 26.95 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 7.32 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳು ಸಂಗ್ರಹವಾಗಿವೆ.
ಇನ್ನು ಹುಂಡಿ ಎಣಿಕೆ ವೇಳೆ ಭಕ್ತನೊಬ್ಬ ಬರೆದಿರುವ ವಿಚಿತ್ರ ಬೇಡಿಕೆಯ ಪತ್ರವೊಂದು ಎಲ್ಲರ ಗಮನ ಸೆಳೆದಿದೆ. ‘ಅಮ್ಮ, ನಮ್ಮ ಮನೆಯಿಂದ ತಿಗಣೆಗಳು ತೊಲಗಲಿ. ಮನೆಯಲ್ಲಿರುವ ಎಲ್ಲ ತಿಗಣೆಗಳು ನಾಶವಾಗಲಿ. ನಿನ್ನ ದೇವಸ್ಥಾನಕ್ಕೆ ಬಂದು ಹಣ್ಣು-ಕಾಯಿ ಒಡೆದು ಹರಕೆ ತೀರಿಸುತ್ತೇನೆ’ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಸಾಮಾನ್ಯವಾಗಿ ಭಕ್ತರು ಉದ್ಯೋಗ, ಆರೋಗ್ಯ, ಮದುವೆ, ಕುಟುಂಬದ ನೆಮ್ಮದಿ ಸೇರಿದಂತೆ ಹಲವು ಬೇಡಿಕೆಗಳನ್ನು ದೇವಿಯ ಮುಂದಿಡುತ್ತಾರೆ. ಆದರೆ ಮನೆಯಲ್ಲಿನ ತಿಗಣೆಗಳ ಕಾಟದಿಂದ ಮುಕ್ತಿ ನೀಡುವಂತೆ ಭಕ್ತನೊಬ್ಬ ಯಲ್ಲಮ್ಮ ದೇವಿಗೆ ಬರೆದಿರುವ ಈ ವಿಶೇಷ ಪತ್ರ ಇದೀಗ ವೈರಲ್ ಆಗಿದ್ದು, ಜನರಲ್ಲಿ ಕುತೂಹಲ ಮೂಡಿಸಿದೆ.



