
ಪ್ರಗತಿವಾಹಿನಿ ಸುದ್ದಿ: ದೀಪಾವಳಿ ಹಬ್ಬಕ್ಕೂ ಮುನ್ನ ರಾಜ್ಯದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಬಾಕಿ ಉಳಿದಿದ್ದ ಹಣ ಬಿಡುಗಡೆಗೆ ಆದೇಶ ನೀಡಲಾಗಿದೆ.
ಮೂರು ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಒಟ್ಟಿಗೆ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆದೇಶಿಸಿದ್ದಾರೆ. 34, 35 ಮತ್ತು 36ನೇ ಕಂತುಗಳ ಒಟ್ಟು 6 ಸಾವಿರ ರೂಪಾಯಿಗಳನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಯರಿಗೆ ಪ್ರತಿ ತಿಂಗಳು 2,000 ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತಿದೆ. ಆದರೆ ಕಳೆದ ಕೆಲವು ತಿಂಗಳಿಂದ ಹಲವು ಫಲಾನುಭವಿಗಳಿಗೆ ಹಣ ಜಮೆಯಾಗದೆ ಬಾಕಿ ಉಳಿದಿತ್ತು. ಇದರಿಂದಾಗಿ ಮಹಿಳೆಯರು ಮುಂದಿನ ಕಂತಿನ ಹಣಕ್ಕಾಗಿ ಕಾಯುತ್ತಿದ್ದರು.
ಇದೀಗ ಮೂರು ಕಂತುಗಳ ಹಣವನ್ನು ಒಟ್ಟಿಗೆ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿರುವುದು ಫಲಾನುಭವಿಗಳಲ್ಲಿ ಸಂತಸ ಮೂಡಿಸಿದೆ.
ಮಾಹಿತಿ ಪ್ರಕಾರ, ಗೃಹಲಕ್ಷ್ಮಿ ಯೋಜನೆಯಡಿ 34, 35 ಮತ್ತು 36ನೇ ಕಂತುಗಳಿಗೆ ಸಂಬಂಧಿಸಿದಂತೆ ಒಟ್ಟು 7,405.86 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಆದೇಶಿಸಲಾಗಿದೆ.
ಮೂರು ಕಂತುಗಳ ಹಣ ಬಿಡುಗಡೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೂಚನೆ ನೀಡಿದ್ದಾರೆ. ಪ್ರತಿ ಫಲಾನುಭವಿಗೆ ಮೂರು ತಿಂಗಳ ತಲಾ 2,000 ರೂಪಾಯಿಗಳಂತೆ ಒಟ್ಟು 6,000 ರೂಪಾಯಿ ದೊರೆಯಲಿದೆ.
ಇಲ್ಲಿಯವರೆಗೆ ರಾಜ್ಯ ಸರ್ಕಾರ 33 ಕಂತಿನವರೆಗೆ ಹಣವನ್ನು ಪಾವತಿ ಮಾಡಿತ್ತು. ಇದೀಗ 34, 35 ಮತ್ತು 36ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ ವರೆಗೆ ರಾಜ್ಯದ 1.24 ಕೋಟಿ ಮಹಿಳೆಯರಿಗೆ ಇದರ ಲಾಭ ಆಗಿದೆ.
ಇಲ್ಲಿಯವರೆಗೆ ಸರ್ಕಾರ ಈ ಯೋಜನೆಗಾಗಿ ಬರೋಬ್ಬರಿ 86,838.36 ಕೋಟಿ ರೂಪಾಯಿ ಹಣ ವಿನಿಯೋಗಿಸಿದೆ. ಅಂದರೆ ಪ್ರತಿ ಮನೆಯ ಯಜಮಾನಿಗೆ ತಲಾ 72,000 ರೂಪಾಯಿ ಹಣ ಜಮೆ ಆಗಿದೆ. ಈಗ 34ನೇ ಕಂತಿನ 2500 ಕೋಟಿ ರೂ., 35ನೇ ಕಂತಿನ 2452.93 ಕೋಟಿ ರೂ. ಮತ್ತು 36ನೇ ಕಂತಿನ 2452.93 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ.




