*ಕುಮಾರಧಾರಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವೇಳೆ ಮೊಸಳೆ ದಾಳಿ*: *ಪವಾಡದ ರೀತಿಯಲ್ಲಿ ಮಹಿಳೆಯನ್ನು ರಕ್ಷಿಸಿದ ಸ್ಥಳೀಯರು-ಪೊಲೀಸರು*

ಪ್ರಗತಿವಾಹಿನಿ ಸುದ್ದಿ: ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬರು ಕುಮಾರಧಾರಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವೇಳೆ ನದಿಯಲ್ಲಿ ಮೊಸಳೆ ದಾಳಿ ನಡೆಸಿದ ಘಟನೆ ನಡೆದಿದೆ.
ಪತಿಯೊಂದಿಗೆ ಜಗಳ ಮಾಡಿಕೊಂಡ ಮಹಿಳೆ ಜೀವನ ಬೇಸತ್ತು ಆತ್ಮಹತ್ಯೆ ಮಾಡಿಕೊಲ್ಲಲ್ರೆಂದು ಕುಮಾರಧಾರಾ ನಾದಿಗೆ ಹಾರಿದ್ದಾರೆ. ನದಿಗೆ ಹಾರುತ್ತಿದ್ದಂತೆ ಮೊಸಳೆಯೊಂದು ದಾಳಿ ನಡೆಸಿದೆ.
ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಭೋರ್ಗರೆಯುವ ಕುಮಾರಧಾರ ನದಿಗೆ ಹಾರಿದ ಮಹಿಳೆಯೊಬ್ಬರು, ನದಿಯಲ್ಲಿದ್ದ ಮೊಸಳೆಯ ದಾಳಿಯಿಂದ ಪರದಾಡುತ್ತಿದ್ದ ವೇಳೆ ಸ್ಥಳೀಯರು, ಪೊಲೀಸರು ಕಾಪಾಡಿದ್ದಾರೆ.
ಉಡುಪಿ ಮೂಲದ 38 ವರ್ಷದ ರೇಖಾ ರಕ್ಷಿಸಲ್ಪಟ್ಟ ಮಹಿಳೆ. ಪೊಲೀಸರು ಮತ್ತು ಸ್ಥಳೀಯರ ಪ್ರಕಾರ, ಉಡುಪಿ ಮೂಲದ ರೇಖಾ ಅವರು ಬುಧವಾರ ತಮ್ಮ ಕುಟುಂಬದ ಸದಸ್ಯರೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ದೇವರ ದರ್ಶನಕ್ಕಾಗಿ ಆಗಮಿಸಿದ್ದರು. ಬುಧವಾರ ರಾತ್ರಿ ಪತಿಯೊಂದಿಗೆ ಕೌಟುಂಬಿಕ ವಿಚಾರಕ್ಕೆ ಮನಸ್ತಾಪ ಹಾಗೂ ಗಲಾಟೆ ಮಾಡಿಕೊಂಡಿದ್ದರು. ಇದರಿಂದ ತೀವ್ರ ಮನನೊಂದ ರೇಖಾ, ಸಾಯುವ ನಿರ್ಧಾರ ಮಾಡಿ, ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯ ಸೇತುವೆಯ ಮೇಲಿಂದ ರಾತ್ರಿ ವೇಳೆ ನದಿಗೆ ಧುಮುಕಿದ್ದಾರೆ.
ನದಿಯ ನೀರಿಗೆ ಧುಮುಕುತ್ತಿದ್ದಂತೆ ಅಲ್ಲೇ ಸಾಗುತ್ತಿದ್ದ ಮೊಸಳೆಯೊಂದು ಆಕೆಯ ಮೇಲೆ ಏಕಾಏಕಿ ದಾಳಿ ನಡೆಸಿದೆ. ಸಾವು ಕಣ್ಣಮುಂದೆ ಕಾಣುತ್ತಿದ್ದಂತೆ ಆಕೆ ರಕ್ಷಣೆಗಾಗಿ ಜೋರಾಗಿ ಚೀರಾಡಲು ಪ್ರಾರಂಭಿಸಿದ್ದಾರೆ. ನದಿಯ ಹತ್ತಿರದಲ್ಲಿದ್ದ ಖಾಸಗಿ ಲಾಡ್ಜ್ ಒಂದರ ಸಿಬ್ಬಂದಿಗೆ ರಾತ್ರಿಯ ವೇಳೆಯಲ್ಲಿ ಮಹಿಳೆಯ ಆಕ್ರಂದನ ಮತ್ತು ನೀರಿನಲ್ಲಿ ಒದ್ದಾಡುತ್ತಿದ್ದ ಶಬ್ದ ಕೇಳಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸುಬ್ರಹ್ಮಣ್ಯ ಪೊಲೀಸರು ಮತ್ತು ಸ್ಥಳೀಯ ಈಜುಗಾರರು ಸ್ಥಳಕ್ಕೆ ದೌಡಾಯಿಸಿ, ಹಗ್ಗ ನೆರವಿನಿಂದ ನದಿಯಲ್ಲಿದ್ದ ಮೊಸಳೆಯನ್ನು ಹೆದರಿಸಿ ದೂರ ಅಟ್ಟಿದ್ದಾರೆ. ಬಳಿಕ ಕಾರ್ಯಾಚರಣೆ ನಡೆಸಿ ರೇಖಾ ಅವರನ್ನು ನೀರಿನಿಂದ ದಡಕ್ಕೆ ಎಳೆದು ತರುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ರೇಖಾ ಅವರಿಗೆ ಮೊಸಳೆಯ ದಾಳಿಯಿಂದ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಸುಬ್ರಹ್ಮಣ್ಯದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ.
ಚಿಕಿತ್ಸೆಯ ನಂತರ ಮಹಿಳೆಗೆ ಕೌನ್ಸೆಲಿಂಗ್ ನಡೆಸಿ, ಕುಟುಂಬಸ್ಥರೊಂದಿಗೆ ಕಳುಹಿಸಿಕೊಡಲಾಗಿದೆ. ಈ ಬಗ್ಗೆ ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿಲ್ಲ.




