
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಕಳವಾಗಿದ್ದ ಬೊಲೆರೊ ಕ್ಯಾಂಪರ್ ವಾಹನವನ್ನು ಕುಡಚಿ ಪೊಲೀಸರು ಪತ್ತೆಹಚ್ಚಿದ್ದು, ಅಂತರರಾಜ್ಯ ವಾಹನ ಕಳ್ಳನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚಿಂಚಲಿ ಗ್ರಾಮದ ವ್ಯಾಪಾರಿಯಾದ ಅರುಣ ಸಿದಲಿಂಗ ಕುಂಬಾರ (46) ಎಂಬುವವರು ತಮ್ಮ ಗೋಡೌನ್ ಮುಂದೆ ಮಹೀಂದ್ರಾ ಕಂಪನಿಯ ಬೊಲೆರೊ ಕ್ಯಾಂಪರ್ ವಾಹನವನ್ನು ನಿಲ್ಲಿಸಿದ್ದರು. ಅಕ್ಟೋಬರ್ 26ರ ರಾತ್ರಿ 9.30ರಿಂದ ಅಕ್ಟೋಬರ್ 27ರ ಬೆಳಗ್ಗೆ 8 ಗಂಟೆಯ ನಡುವಿನ ಅವಧಿಯಲ್ಲಿ ಸುಮಾರು ₹2.04 ಲಕ್ಷ ಮೌಲ್ಯದ ವಾಹನವನ್ನು ಕಳ್ಳರು ಕಳವು ಮಾಡಿದ್ದರು.
ಈ ಕುರಿತು ಅಕ್ಟೋಬರ್ 27ರಂದು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ನವೆಂಬರ್ 10ರಂದು ಅಂತರರಾಜ್ಯ ವಾಹನ ಕಳ್ಳತನದಲ್ಲಿ ಭಾಗಿಯಾಗಿದ್ದ ಸೀತಾರಾಮ ಲಕ್ಷ್ಮಣ ಎಡಗೆ (36) ಎಂಬಾತನನ್ನು ಬಂಧಿಸಿದ್ದಾರೆ. ಈತ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಮಾಳಶಿರಸ್ ತಾಲೂಕಿನ ಪಾನಿವ್ ಗ್ರಾಮದ ನಿವಾಸಿಯಾಗಿದ್ದು, ಪ್ರಸ್ತುತ ವೇಳಾಪುರದಲ್ಲಿ ವಾಸವಾಗಿದ್ದನು.
ಆರೋಪಿತನ ವಶದಲ್ಲಿದ್ದ ಚಿಂಚಲಿಯಲ್ಲಿ ಕಳವಾಗಿದ್ದ ₹2.04 ಲಕ್ಷ ಮೌಲ್ಯದ ಮಹೀಂದ್ರಾ ಬೊಲೆರೊ ಕ್ಯಾಂಪರ್ ವಾಹನದ ಜೊತೆಗೆ, ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಟೆಂಬೂರ್ಣಿ ಪೊಲೀಸ್ ಠಾಣೆ ವ್ಯಾಪ್ತಿಯ ಮೊಡನೀಮ್ ಗ್ರಾಮದಲ್ಲಿ ಕಳವು ಮಾಡಿದ್ದ ₹80 ಸಾವಿರ ಮೌಲ್ಯದ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಒಟ್ಟು ₹2.84 ಲಕ್ಷ ಮೌಲ್ಯದ ಎರಡು ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ. ಬಸರಗಿ, ಅಥಣಿ ಡಿವೈಎಸ್ಪಿ ಪಿ. ವೀರೇಂದ್ರ ಕುಮಾರ್ ಹಾಗೂ ಹಾರೂಗೇರಿ ಸಿಪಿಐ ರತನಕುಮಾರ ಜಿರಗ್ಯಾಳ ಅವರ ಮಾರ್ಗದರ್ಶನದಲ್ಲಿ ಕುಡಚಿ ಠಾಣೆಯ ಪಿಎಸ್ಐ ಸುರೇಶ ಮಂಟೂರ, ಪಿಎಸ್ಐ ಪಿ.ಎ. ಮಾನೆ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವಾಹನ ಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.




