*ಕೊನೆಗೂ ಹಸೆಮಣೆ ಏರಲು ಸಜ್ಜಾದ ನಟ ರಾಕೇಶ್ ಅಡಿಗ*: *ಹುಡುಗಿ ಯಾರು ಗೊತ್ತಾ?*

ಪ್ರಗತಿವಾಹಿನಿ ಸುದ್ದಿ: ಬಿಗ್ಬಾಸ್ ಖ್ಯಾತಿಯ ನಟ ರಾಕೇಶ್ ಅಡಿಗ ಕೊನೆಗೂ ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ. ಹಲವು ವರ್ಷಗಳಿಂದ ಸಿಂಗಲ್ ಆಗಿದ್ದ ರಾಕೇಶ್ ಇದೀಗ ಮಾಧುರಿ ಸಿಂಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಎಂಗೇಜ್ಮೆಂಟ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಬಿಗ್ಬಾಸ್ ಮನೆಯಲ್ಲಿ ಇದ್ದಾಗಿನಿಂದಲೂ ರಾಕೇಶ್ ಮದುವೆ ಯಾವಾಗ ಎಂಬ ಪ್ರಶ್ನೆ ಅಭಿಮಾನಿಗಳು ಮತ್ತು ಸಹ ಸ್ಪರ್ಧಿಗಳಿಂದ ಕೇಳಿಬರುತ್ತಿತ್ತು. ಆದರೆ ಈ ಬಗ್ಗೆ ಅವರು ಯಾವುದೇ ಸ್ಪಷ್ಟ ಉತ್ತರ ನೀಡಿರಲಿಲ್ಲ. ಇದೀಗ ಮಾಧುರಿ ಸಿಂಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಮದುವೆಯ ದಿನಾಂಕ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ.
ರಾಕೇಶ್ ಅವರದ್ದು ಪ್ರೇಮ ವಿವಾಹ ಎನ್ನಲಾಗಿದ್ದು, ಮಾಧುರಿ ಅವರಿಗೆ ಬೀಚ್ ಸಮೀಪ ಮದುವೆಯ ಪ್ರಸ್ತಾಪ ಮಾಡಿರುವ ವಿಡಿಯೋ ಕೂಡ ವೈರಲ್ ಆಗಿದೆ. ‘Will You Marry Me’ ಎಂಬ ಫಲಕದೊಂದಿಗೆ ವಿಶೇಷವಾಗಿ ವ್ಯವಸ್ಥೆ ಮಾಡಿದ್ದ ರಾಕೇಶ್, ಮಾಧುರಿ ಅವರಿಗೆ ಹೂವು ನೀಡಿ ಪ್ರಪೋಸ್ ಮಾಡಿದ್ದಾರೆ. ಈ ಸುಂದರ ಕ್ಷಣದ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
2009ರಲ್ಲಿ ಬಿಡುಗಡೆಯಾದ ‘ಜೋಶ್’ ಸಿನಿಮಾ ಮೂಲಕ ರಾಕೇಶ್ ಅಡಿಗ ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ‘ಅರ್ಬಲ್ ಲ್ಯಾಡ್ಸ್’ ತಂಡದ ಮೂಲಕ ಕನ್ನಡ ರ್ಯಾಪ್ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡರು. ಹಲವು ಸಿನಿಮಾಗಳಲ್ಲಿ ನಟಿಸಿರುವ ಅವರು, ಬಿಗ್ಬಾಸ್ ಒಟಿಟಿ ಮತ್ತು ಕನ್ನಡದ 10ನೇ ಸೀಸನ್ ಎರಡರಲ್ಲೂ ಭಾಗವಹಿಸಿ ಫಿನಾಲೆ ತಲುಪಿದ್ದರು.
ಬಿಗ್ಬಾಸ್ ಮನೆಯಲ್ಲಿ ಯಾರೊಂದಿಗೂ ಅನಗತ್ಯ ಜಗಳ ಮಾಡಿಕೊಳ್ಳದೆ, ಪ್ರೀತಿ ಮತ್ತು ಸ್ನೇಹದಿಂದಲೇ ಗಮನ ಸೆಳೆದಿದ್ದ ರಾಕೇಶ್ ಅವರ ವೈಯಕ್ತಿಕ ಜೀವನದ ಈ ಹೊಸ ಬೆಳವಣಿಗೆಗೆ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.




