Kannada NewsLatestNational

*ರಸಗುಲ್ಲಾ ಎಂದು ಬಾಯಿಗೆ ಹಾಕಿಕೊಳ್ಳುತ್ತಿದ್ದಂತೆ ಭೀಕರ ಸ್ಫೋಟ: ವ್ಯಕ್ತಿ ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ರಸಗುಲ್ಲಾ ಎಂದು ಭಾವಿಸಿ ಸ್ಫೋಟಕವನ್ನು ಬಾಯಿಗೆ ಹಾಕಿಕೊಳ್ಳುತ್ತಿದ್ದಂತೆ ಅದು ಸ್ಫೋಟಗೊಂಡ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ನವೆಂಬರ್ 10ರ ತಡರಾತ್ರಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ರಾಜೇಂದ್ರ ಬರೋಟಿಯಾ ಎಂದು ಗುರುತಿಸಲಾಗಿದೆ. ಅವರು ತಮ್ಮ ಮನೆಯಲ್ಲಿದ್ದಾಗ ರಾಮ್ ಭಗತ್ ಬರೋಟಿಯಾ ಎಂಬಾತ ಅಲ್ಲಿಗೆ ಬಂದಿದ್ದಾನೆ. ಆತನ ಕೈಯಲ್ಲಿದ್ದ ಬಿಳಿ ಬಣ್ಣದ ದುಂಡನೆಯ ವಸ್ತುವನ್ನು ರಾಜೇಂದ್ರ ಅವರಿಗೆ ನೀಡಿ, ಅದು ರಸಗುಲ್ಲಾ ಎಂದು ಹೇಳಿದ್ದಾನೆ ಎನ್ನಲಾಗಿದೆ.

ಸಿಹಿತಿಂಡಿ ಎಂದು ಭಾವಿಸಿದ ರಾಜೇಂದ್ರ ಬಾಯಿಗೆ ಹಾಕಿಕೊಂಡು ಕಚ್ಚಿದ್ದಾರೆ. ಆದರೆ ಅದು ರಸಗುಲ್ಲಾ ಆಗಿರಲಿಲ್ಲ, ದೇಶೀಯವಾಗಿ ತಯಾರಿಸಿದ ಸ್ಫೋಟಕವಾಗಿತ್ತು. ಬಾಯಿಗೆ ಹಾಕಿಕೊಂಡ ಕೆಲವೇ ಕ್ಷಣಗಳಲ್ಲಿ ಅದು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ರಾಜೇಂದ್ರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಮಧ್ಯಪ್ರದೇಶದ ದಿಂಡೋರಿಯಲ್ಲಿರುವ ಪದಾರಿಯಾ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಸ್ಫೋಟದ ಶಬ್ದ ಕೇಳಿದ ತಕ್ಷಣ ರಾಜೇಂದ್ರ ಅವರ ಪತ್ನಿ ಸುಶೀಲಾ ಬಾಯಿ ಕೋಣೆಯಿಂದ ಹೊರಗೆ ಬಂದು ನೋಡಿದ್ದಾರೆ. ಪತಿ ಗಾಯಗೊಂಡು ಬಿದ್ದಿರುವುದನ್ನು ಕಂಡು ನೆರೆಹೊರೆಯವರ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲೇ ಅವರು ಸಾವನ್ನಇದ್ದರು. ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ ರಾಮ್ ಭಗತ್ ಬರೋಟಿಯಾ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ರಾಮ್ ಭಗತ್, ತನಗೆ ಒಬ್ಬ ಹುಡುಗ ಬಾಂಬ್ ನೀಡಿದ್ದ ಎಂದು ಹೇಳಿದ್ದಾನೆ. ಆ ಹುಡುಗನನ್ನೂ ಪೊಲೀಸರು ಬಂಧಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಬಾಂಬ್‌ಗಳನ್ನು ಪ್ರಾಣಿಗಳನ್ನು ಕೊಲ್ಲಲು ಬಳಸಲಾಗುತ್ತಿತ್ತು ಎನ್ನಲಾಗಿದೆ. ಆರೋಪಿಗಳು ಉದ್ದೇಶಪೂರ್ವಕವಾಗಿ ರಾಜೇಂದ್ರ ಅವರಿಗೆ ಬಾಂಬ್ ನೀಡಿದ್ದರೇ ಅಥವಾ ಇದರ ಹಿಂದೆ ಬೇರೆ ಕಾರಣವಿದೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button