*ಮೋದಿ ಎದುರೇ ಡಿಕೆಶಿ ಬೇಡಿಕೆಗಳ ಪಟ್ಟಿ*: *ಮೆಟ್ರೋದಿಂದ ಬರ ಪರಿಹಾರದವರೆಗೆ ಏನೆಲ್ಲಾ ಪ್ರಸ್ತಾಪ?*

ಪ್ರಗತಿವಾಹಿನಿ ಸುದ್ದಿ: ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರ್ನಾಟಕದ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಮೆಟ್ರೋ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯದ ಸಮಾನ ಪಾಲುದಾರಿಕೆ, ರೈತರಿಗೆ ಬರ ಪರಿಹಾರ ಹಾಗೂ ಕಬ್ಬು ಬೆಳೆಗಾರರ ನೆರವಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಪ್ರಧಾನಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನ ಐಐಎಂಬಿ ಆಡಿಟೋರಿಯಂನಲ್ಲಿ ನಡೆದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಮೆಟ್ರೋ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ ಎಂದು ಪ್ರಸ್ತಾಪಿಸಿದರು.
ಮೆಟ್ರೋ ಯೋಜನೆಯಲ್ಲಿ 50:50 ಸಹಭಾಗಿತ್ವ ನಿಗದಿಯಾಗಿದ್ದರೂ ವಾಸ್ತವದಲ್ಲಿ ಅದು ಪಾಲನೆಯಾಗುತ್ತಿಲ್ಲ. ಕೇಂದ್ರದ ಅನುದಾನ ಕಡಿಮೆಯಾಗುತ್ತಿರುವುದರಿಂದ ರಾಜ್ಯದ ಮೇಲಿನ ಆರ್ಥಿಕ ಹೊರೆ ಹೆಚ್ಚುತ್ತಿದೆ. ಯೋಜನೆಯ ಮೂಲ ವೆಚ್ಚ ಮಾತ್ರವಲ್ಲದೆ ಹೆಚ್ಚುವರಿ ವೆಚ್ಚದಲ್ಲೂ ಕೇಂದ್ರ ಸರ್ಕಾರ ಶೇ.50ರಷ್ಟು ಪಾಲು ಭರಿಸಬೇಕು ಎಂದು ಒತ್ತಾಯಿಸಿದರು.
ಮೆಟ್ರೋ ಯೋಜನೆಗೆ ಅನುಮೋದನೆ ವಿಳಂಬದ ಪ್ರಸ್ತಾಪ
ದೆಹಲಿ ಮಾದರಿಯಲ್ಲಿ ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ಮೆಟ್ರೋ ಪ್ರಮುಖ ಮಾರ್ಗವಾಗಿದೆ ಎಂದು ಸಿಎಂ ಹೇಳಿದರು. ರೆಡ್ ಲೈನ್ ಯೋಜನೆಗೆ ಅನುಮೋದನೆ ನೀಡಲು ಎರಡು ವರ್ಷ ವಿಳಂಬವಾಗಿದೆ. ಇದರಿಂದ ಹೆಚ್ಚಾದ ವೆಚ್ಚವನ್ನು ಕೇಂದ್ರವೇ ಭರಿಸಬೇಕು. ಬಾಕಿ ಇರುವ ಮೆಟ್ರೋ ಯೋಜನೆಗಳಿಗೆ ಶೀಘ್ರ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದರು.
ವಿದೇಶಿ ಸಾಲದ ಹೊರೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದೂ ಪ್ರಧಾನಿಯನ್ನು ಕೋರಿದರು.
85 ಲಕ್ಷ ಎಕರೆ ಬೆಳೆ ನಷ್ಟ: ಬರ ಪರಿಹಾರಕ್ಕೆ ಮನವಿ
ರಾಜ್ಯದ ರೈತರ ಸಂಕಷ್ಟವನ್ನೂ ಪ್ರಧಾನಿಗಳ ಗಮನಕ್ಕೆ ತಂದ ಡಿ.ಕೆ. ಶಿವಕುಮಾರ್, ಬರಗಾಲದಿಂದ ರಾಜ್ಯದಲ್ಲಿ 85 ಲಕ್ಷ ಎಕರೆ ಪ್ರದೇಶದ ಬೆಳೆ ನಷ್ಟವಾಗಿದ್ದು, ಸುಮಾರು 62 ಸಾವಿರ ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರ ಶೀಘ್ರವೇ ಬರ ಪರಿಹಾರ ಬಿಡುಗಡೆ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.
ಕಬ್ಬು ಬೆಳೆಗಾರರ ಸಮಸ್ಯೆಯನ್ನೂ ಪ್ರಸ್ತಾಪಿಸಿದ ಅವರು, ಹಲವು ವರ್ಷಗಳಿಂದ ಕಬ್ಬಿನ ಕನಿಷ್ಠ ಬೆಂಬಲ ಬೆಲೆ ಹಾಗೂ ಸಕ್ಕರೆ ದರ ಹೆಚ್ಚಳವಾಗಿಲ್ಲ. ಕೂಡಲೇ ಇವುಗಳನ್ನು ಹೆಚ್ಚಿಸಿ ಬೆಳೆಗಾರರಿಗೆ ನೆರವಾಗಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದ ಸಾಧನೆಗಳ ಉಲ್ಲೇಖ
ಇದೇ ವೇಳೆ ಕರ್ನಾಟಕ ಮತ್ತು ಬೆಂಗಳೂರಿನ ಸಾಧನೆಗಳನ್ನು ಸ್ಮರಿಸಿದ ಸಿಎಂ, 1902ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆಯಾಯಿತು. ವಿದ್ಯುತ್ ಬಳಸಿದ ದೇಶದ ಮೊದಲ ನಗರ ಬೆಂಗಳೂರು. ದೇಶದ ಮೊದಲ ಸ್ಟಾರ್ಟ್‌ಅಪ್ ನೀತಿ ಜಾರಿಯಾಗಿದ್ದು ಕರ್ನಾಟಕದಲ್ಲೇ ಎಂದು ಹೇಳಿದರು.
ಜಗತ್ತಿನ ಅತಿ ಹೆಚ್ಚು ಎಐ ಪ್ರತಿಭೆಗಳು ರಾಜ್ಯದಲ್ಲಿದ್ದು, ಚಿಪ್ ವಿನ್ಯಾಸ ಕ್ಷೇತ್ರದಲ್ಲಿ ಬೆಂಗಳೂರು ಏಷ್ಯಾದಲ್ಲೇ ಎರಡನೇ ಸ್ಥಾನದಲ್ಲಿದೆ. ರಫ್ತು ಮತ್ತು ಪ್ರತಿಭಾ ವಲಯದಲ್ಲೂ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಹೆಮ್ಮೆಯಿಂದ ವಿವರಿಸಿದರು.
ಭಗವದ್ಗೀತೆಯ “ಕರ್ಮಣ್ಯೇವಾಧಿಕಾರಸ್ತೇ…” ಶ್ಲೋಕವನ್ನು ಉಲ್ಲೇಖಿಸಿದ ಡಿ.ಕೆ. ಶಿವಕುಮಾರ್, “ನಮ್ಮದು ಕಾಯಕವೇ ಕೈಲಾಸ ಎಂಬ ಮನಸ್ಥಿತಿ. ಪ್ರಯತ್ನ ನಮ್ಮದು, ಫಲ ದೇವರದ್ದು. ವಿಶ್ವಮಾನವ ತತ್ವದಡಿ ನಾವು ಜೊತೆಗೂಡಿ ಕೆಲಸ ಮಾಡೋಣ. ನಮ್ಮ ಭಾವನೆಗಳು ಮತ್ತು ಕಷ್ಟಗಳನ್ನು ತಾವು ಅರ್ಥಮಾಡಿಕೊಳ್ಳುತ್ತೀರಿ ಎಂಬ ಭರವಸೆ ಇದೆ” ಎಂದು ಪ್ರಧಾನಿ ಮೋದಿಗೆ ತಿಳಿಸಿದರು.
ಪ್ರಧಾನಿ ಮುಂದೆ ಸಿಎಂ ಇಟ್ಟ ಪ್ರಮುಖ ಬೇಡಿಕೆಗಳು
- ಮೆಟ್ರೋ ಯೋಜನೆಯ ಬಾಕಿ ಅನುದಾನ ಬಿಡುಗಡೆ ಮಾಡಬೇಕು.
- ಹೆಚ್ಚುವರಿ ವೆಚ್ಚದಲ್ಲೂ ಕೇಂದ್ರ ಶೇ.50ರಷ್ಟು ಪಾಲು ಭರಿಸಬೇಕು.
- ಬಾಕಿ ಇರುವ ಮೆಟ್ರೋ ಯೋಜನೆಗಳಿಗೆ ಶೀಘ್ರ ಅನುಮೋದನೆ ನೀಡಬೇಕು.
- ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುವಂತೆ ವ್ಯವಸ್ಥೆ ಮಾಡಬೇಕು.
- ರಾಜ್ಯಕ್ಕೆ ಬರ ಪರಿಹಾರದ ಹಣವನ್ನು ಶೀಘ್ರ ಬಿಡುಗಡೆ ಮಾಡಬೇಕು.
- ಕಬ್ಬು ಬೆಳೆಗಾರರಿಗೆ ನೆರವು ನೀಡಿ ಸಕ್ಕರೆ ದರ ಹೆಚ್ಚಿಸಬೇಕು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




