Kannada NewsKarnataka NewsLatestPolitics

*ಮೋದಿ ಫೋನ್ ಟ್ಯಾಪ್ ಮಾಡುತ್ತಾರೆಂಬುದನ್ನು ನಂಬಲ್ಲ*: *ಕಾಂಗ್ರೆಸ್ ನಾಯಕ ಸ್ಯಾಮ್‌ ಪಿತ್ರೋಡಾ*

ಪ್ರಗತಿವಾಹಿನಿ ಸುದ್ದಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಫೋನ್ ಟ್ಯಾಪ್ ಮಾಡುತ್ತಿದ್ದಾರೆ ಎಂಬ ರಾಹುಲ್ ಗಾಂಧಿ ಆರೋಪ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ನೀಡಿರುವ ಹೇಳಿಕೆ ಕುತೂಹಲ ಮೂಡಿಸಿದೆ. ಪ್ರಧಾನಿ ಮೋದಿ ಇಂತಹ ಕೆಲಸ ಮಾಡುತ್ತಾರೆ ಎಂದು ತಾನು ನಂಬುವುದಿಲ್ಲ ಎಂದು ಹೇಳುವ ಮೂಲಕ ರಾಹುಲ್ ಆರೋಪದಿಂದ ಅಂತರ ಕಾಯ್ದುಕೊಂಡಿದ್ದಾರೆ.

ಇತ್ತೀಚೆಗೆ ಪ್ರಧಾನಿ ಮೋದಿಯವರಿಗೆ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದ ಪಿತ್ರೋಡಾ, ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದಾರೆ.

“ಪ್ರಧಾನಿ ಹಾಗೆ ಮಾಡುವುದಿಲ್ಲ ಎಂದು ನಾನು ನಂಬುತ್ತೇನೆ. ಪ್ರಧಾನಿ ಸ್ಕ್ರೂಡ್ರೈವರ್ ತೆಗೆದುಕೊಂಡು ಕಂಪ್ಯೂಟರ್ ಬಳಿಗೆ ಹೋಗುವುದಿಲ್ಲ” ಎಂದು ಪಿತ್ರೋಡಾ ಪ್ರತಿಕ್ರಿಯಿಸಿದ್ದಾರೆ.

ಇದೇ ವೇಳೆ ತಮ್ಮ ಫೋನ್ ಟ್ಯಾಪ್ ಆಗಿರುವ ಅನುಭವವನ್ನೂ ಪಿತ್ರೋಡಾ ಹಂಚಿಕೊಂಡಿದ್ದಾರೆ. ತಮ್ಮ ಬ್ಯಾಂಕ್ ಖಾತೆಗಳ ಮೇಲೂ ಕಣ್ಗಾವಲು ಇರಿಸಲಾಗಿತ್ತು ಎಂದು ಹೇಳಿದ್ದಾರೆ.

“ನನ್ನ ಫೋನ್ ಟ್ಯಾಪ್ ಮಾಡಲಾಗಿದೆ. ನನ್ನ ಬ್ಯಾಂಕ್ ಖಾತೆಗಳ ಮೇಲೂ ನಿಗಾ ಇಡಲಾಗಿದೆ. ಈ ಬಗ್ಗೆ ತಜ್ಞರೊಂದಿಗೆ ಸಮಾಲೋಚಿಸಿದ್ದೇನೆ. ಅವರು ನನ್ನ ಸಾಧನಗಳನ್ನು ಪರಿಶೀಲಿಸಿದ ಬಳಿಕ ಫೋನ್ ಟ್ಯಾಪಿಂಗ್ ಕುರಿತು ಎಚ್ಚರಿಕೆ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.

ಆದರೆ, ತಮ್ಮ ಫೋನ್ ಅನ್ನು ಯಾರು ಟ್ಯಾಪ್ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ಪಿತ್ರೋಡಾ ನಿರಾಕರಿಸಿದ್ದಾರೆ.

ಒಂದೆಡೆ ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ಫೋನ್ ಕದ್ದಾಲಿಕೆ ಆರೋಪ ಮಾಡುತ್ತಿದ್ದರೆ, ಮತ್ತೊಂದೆಡೆ ಅದೇ ಪಕ್ಷದ ಹಿರಿಯ ನಾಯಕ ಪಿತ್ರೋಡಾ ಪ್ರಧಾನಿ ವಿರುದ್ಧದ ಆರೋಪವನ್ನು ನಂಬುವುದಿಲ್ಲ ಎಂದು ಹೇಳಿರುವುದು ರಾಜಕೀಯ ಚರ್ಚೆಗೆ ಹೊಸ ಆಯಾಮ ನೀಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button