Kannada NewsKarnataka NewsLatest

*ಟ್ರೆಕ್ಕಿಂಗ್‌ಗೆ ಬಂದು ದಾರಿ ತಪ್ಪಿದ ಯೂಟ್ಯೂಬರ್*: *ರೋಪ್ ಬಳಸಿ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ*

ಪ್ರಗತಿವಾಹಿನಿ ಸುದ್ದಿ: ಸಾಹಸಮಯ ಟ್ರೆಕ್ಕಿಂಗ್‌ಗೆಂದು ಬೆಟ್ಟ ಹತ್ತಿದ್ದ ಯೂಟ್ಯೂಬರ್ ಒಬ್ಬರು ದಾರಿ ಕಾಣದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅರಣ್ಯ ಪ್ರದೇಶದಲ್ಲಿ ಸಿಲುಕಿಕೊಂಡು ಕೆಳಗಿಳಿಯಲಾಗದೆ ಆತಂಕಗೊಂಡಿದ್ದಾರೆ. ಕೊನೆಗೆ ಸಮಯಪ್ರಜ್ಞೆ ಮೆರೆದು ಪೊಲೀಸರ ನೆರವು ಕೋರಿದ್ದು, ಸದ್ಯ  ಅಗ್ನಿಶಾಮಕ ಸಿಬ್ಬಂದಿ ರೋಪ್ ಬಳಸಿ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.

ರಾಮನಗರ ತಾಲೂಕಿನ ಹುಣಸನಹಳ್ಳಿ ಸಮೀಪದ ಹನುಮಂತರಾಯಸ್ವಾಮಿ ಬೆಟ್ಟಕ್ಕೆ ಯೂಟ್ಯೂಬರ್‌ ಟ್ರೆಕ್ಕಿಂಗ್‌ಗೆ ಹೋಗಿದ್ದಾರೆ. ಒಡಿಶಾ ಮೂಲದ ಬಿಸ್ವಾಜಿತ್ ನಾಥ್ ಎಂಬ ಯೂಟ್ಯೂಬರ್ ವಾರಾಂತ್ಯದ ಹಿನ್ನೆಲೆಯಲ್ಲಿ ಬೈಕ್‌ನಲ್ಲಿ ಒಬ್ಬರೇ ಬೆಟ್ಟಕ್ಕೆ ಬಂದಿದ್ದರು. ಟ್ರೆಕ್ಕಿಂಗ್ ಮಾಡುತ್ತಾ ಸುಮಾರು ಒಂದು ಕಿಲೋಮೀಟರ್ ಸಾಗಿದಾಗ ವಾಪಸ್ ಬರುವ ದಾರಿ ಕಾಣದೆ ಅರಣ್ಯ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ.

ತಕ್ಷಣವೇ ಪೊಲೀಸ್ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ತಮ್ಮ ಪರಿಸ್ಥಿತಿಯನ್ನು ತಿಳಿಸಿದ್ದಾರೆ. ಮಾಹಿತಿ ಪಡೆದ ರಾಮನಗರ ಗ್ರಾಮಾಂತರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಟ್ಟದ ತಪ್ಪಲಿಗೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ಸುಮಾರು ಒಂದು ಗಂಟೆಯ ಕಾರ್ಯಾಚರಣೆಯ ಬಳಿಕ ಬಿಸ್ವಾಜಿತ್ ನಾಥ್ ಅವರನ್ನು ಪತ್ತೆಹಚ್ಚಿದ ಸಿಬ್ಬಂದಿ, ರೋಪ್ ಸಹಾಯದಿಂದ ಸುರಕ್ಷಿತವಾಗಿ ಬೆಟ್ಟದಿಂದ ಕೆಳಗಿಳಿಸಿದ್ದಾರೆ. ಒಬ್ಬರೇ ಟ್ರೆಕ್ಕಿಂಗ್‌ಗೆ ಬರುವುದು ಅಪಾಯಕಾರಿ ಎಂದು ಪೊಲೀಸರು ಬುದ್ಧಿಮಾತು ಹೇಳಿದ್ದಾರೆ.

ರಕ್ಷಣೆ ಬಳಿಕ ಮಾತನಾಡಿದ ಬಿಸ್ವಾಜಿತ್, ಹನುಮಂತರಾಯಸ್ವಾಮಿ ಬೆಟ್ಟದಲ್ಲಿ ಟ್ರೆಕ್ಕಿಂಗ್ ಮಾಡುವಾಗ ದಾರಿ ತಪ್ಪಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದೆ. ಆ ಸ್ಥಳದಿಂದ ನಾನೇ ಹೊರಬರಲು ಪ್ರಯತ್ನಿಸಿದ್ದರೆ ಜೀವಂತವಾಗಿ ಉಳಿಯುತ್ತಿದ್ದೆನೇ ಎಂಬ ಅನುಮಾನವಿತ್ತು ಎಂದು ಹೇಳಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ನಿರಂತರವಾಗಿ ತಮ್ಮ ಸಂಪರ್ಕದಲ್ಲಿದ್ದು, ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಸಮಯಕ್ಕೆ ಸರಿಯಾಗಿ ನೆರವು ನೀಡಿದ ಕರ್ನಾಟಕ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ.

Related Articles

Back to top button