Kannada NewsKarnataka NewsLatestPolitics

*“ನಾನು ಮಹಿಳೆಯೂ ಅಲ್ಲ, ಪುರುಷನೂ ಅಲ್ಲ”*: *ಚರ್ಚೆ ಹುಟ್ಟುಹಾಕಿದ ವಿದ್ಯಾರ್ಥಿ ನಾಯಕಿ ನೇಹಾ ಹೇಳಿಕೆ*

ಪ್ರಗತಿವಾಹಿನಿ ಸುದ್ದಿ: ಲಿಂಗತ್ವ ಮತ್ತು ವೈಯಕ್ತಿಕ ಗುರುತಿನ ವಿಚಾರ ಮತ್ತೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ವಿದ್ಯಾರ್ಥಿ ಸಂಘಟನೆಯ ನಾಯಕಿಯೊಬ್ಬರು ತಮ್ಮ ಲಿಂಗ ಗುರುತಿನ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು, ಸಾಂಪ್ರದಾಯಿಕ ಲಿಂಗ ಚೌಕಟ್ಟನ್ನು ನಿರಾಕರಿಸಿದ್ದಾರೆ. “ನಾನು ಗಂಡೂ ಅಲ್ಲ, ಹೆಣ್ಣೂ ಅಲ್ಲ. ನನ್ನನ್ನು ಮಹಿಳೆ ಎಂದು ಗುರುತಿಸಿಕೊಳ್ಳುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ನವದೆಹಲಿಯಲ್ಲಿ ವಿದ್ಯಾರ್ಥಿ ಹೋರಾಟಗಳ ಮೂಲಕ ಗುರುತಿಸಿಕೊಂಡಿರುವ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ಅಧ್ಯಕ್ಷೆ ನೇಹಾ ಬೋರಾ ಈ ಹೇಳಿಕೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮ್ಮನ್ನು ನಾನ್-ಬೈನರಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

‘ನಾನ್-ಬೈನರಿ’ ಗುರುತಿನ ಬಗ್ಗೆ ಸ್ಪಷ್ಟನೆ

ಮಾಧ್ಯಮಗಳು ತಮ್ಮನ್ನು ಸಾಮಾನ್ಯವಾಗಿ ‘ಅವಳು’ ಎಂದು ಸಂಬೋಧಿಸುತ್ತವೆ. ಆದರೆ ತಾನು ಸ್ತ್ರೀಯೂ ಅಲ್ಲ, ಪುರುಷನೂ ಅಲ್ಲ ಎಂದು ನೇಹಾ ಹೇಳಿದ್ದಾರೆ. ಮಹಿಳೆಯಾಗಿ ನೋಡದೆ, ಸ್ವತಂತ್ರ ವ್ಯಕ್ತಿಯಾಗಿ ಗುರುತಿಸಬೇಕು ಎಂದು ಮನವಿ ಮಾಡಿದ್ದಾರೆ. ನಾನ್-ಬೈನರಿ ಎಂದರೆ ಸ್ತ್ರೀ ಅಥವಾ ಪುರುಷ ಎಂಬ ಸಾಂಪ್ರದಾಯಿಕ ಎರಡು ಲಿಂಗ ಚೌಕಟ್ಟುಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳದ ವ್ಯಕ್ತಿಗಳು.

ಸಂದರ್ಶನದಲ್ಲಿ ಸರ್ವನಾಮಗಳ ಬಳಕೆಯ ಮಹತ್ವವನ್ನೂ ಅವರು ಪ್ರಸ್ತಾಪಿಸಿದ್ದಾರೆ. ನಾನ್-ಬೈನರಿ ವ್ಯಕ್ತಿಗಳನ್ನು ಅವರು ಬಯಸುವ ಸರಿಯಾದ ಸರ್ವನಾಮಗಳಿಂದ ಸಂಬೋಧಿಸುವುದು ಕೇವಲ ಭಾಷೆಯ ವಿಚಾರವಲ್ಲ, ಅದೊಂದು ರಾಜಕೀಯ ನಿಲುವು ಎಂದು ಹೇಳಿದ್ದಾರೆ.

ಚುನಾವಣಾ ಆಯೋಗದ ಅಧಿಕಾರಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ವಿಚಾರ ತಮ್ಮ ಪಾಲಿಗೆ ಎಷ್ಟು ರಾಜಕೀಯ ಮಹತ್ವ ಹೊಂದಿದೆಯೋ, ತಮ್ಮನ್ನು ಸರಿಯಾದ ಸರ್ವನಾಮಗಳಿಂದ ಗುರುತಿಸುವುದೂ ಅಷ್ಟೇ ರಾಜಕೀಯ ಮಹತ್ವ ಹೊಂದಿದೆ ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ.

ಪ್ರತಿಯೊಬ್ಬ ವ್ಯಕ್ತಿಯ ಅಸ್ತಿತ್ವ ಮತ್ತು ಅವರು ತಮ್ಮನ್ನು ಹೇಗೆ ಗುರುತಿಸಿಕೊಳ್ಳಲು ಬಯಸುತ್ತಾರೆ ಎಂಬುದನ್ನು ಸಮಾಜ ಗೌರವಿಸಬೇಕು ಎಂಬುದು ನೇಹಾ ಬೋರಾ ಅವರ ಆಶಯವಾಗಿದೆ. ಅವರ ಈ ಹೇಳಿಕೆ ಲಿಂಗತ್ವದ ಗುರುತು ಮತ್ತು ವೈಯಕ್ತಿಕ ಹಕ್ಕುಗಳ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.

Related Articles

Back to top button