CrimeKannada NewsKarnataka NewsLatest

*ಪತ್ನಿ ತವರು ಮನೆಗೆ ಹೋದಳೆಂದು ಸರಣಿ ಅಗ್ನಿಸ್ಪರ್ಶ*: *ಸ್ಕ್ರಾಪ್ ಗೋಡೌನ್‌ನಲ್ಲಿ ಮಲಗಿದ್ದ ವ್ಯಕ್ತಿ ಸಾವು*

ಪ್ರಗತಿವಾಹಿನಿ ಸುದ್ದಿ: ಕೌಟುಂಬಿಕ ಕಲಹದ ಸಿಟ್ಟು ಅಮಾಯಕ ವ್ಯಕ್ತಿಯೊಬ್ಬನ ಪ್ರಾಣಕ್ಕೆ ಕುತ್ತು ತಂದಿದೆ. ಪತ್ನಿ ಮುನಿಸಿಕೊಂಡು ತವರು ಮನೆಗೆ ಹೋದಳೆಂಬ ಆಕ್ರೋಶಕ್ಕೆ ವ್ಯಕ್ತಿಯೊಬ್ಬ ಸರಣಿ ಅಗ್ನಿಸ್ಪರ್ಶ ನಡೆಸಿದ್ದಾನೆ. ಸಾಲು ಸಾಲು ಸ್ಕ್ರಾಪ್ ಗೋಡೌನ್‌ಗಳಿಗೆ ಬೆಂಕಿ ಹಚ್ಚಿ ಆತಂಕ ಸೃಷ್ಟಿಸಿದ್ದಾನೆ. ಈ ಕೃತ್ಯದಲ್ಲಿ ಗೋಡೌನ್‌ನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಬೆಂಗಳೂರು ಹೊರವಲಯದ ಅತ್ತಿಬೆಲೆ, ಆನೇಕಲ್ ಹಾಗೂ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆಗಳು ನಡೆದಿವೆ. ತಮಿಳುನಾಡಿನ ಡೆಂಕಣಿಕೋಟೆ ಮೂಲದ ಜೀವನ್ ರಾಜ್ ಆರೋಪಿಯಾಗಿದ್ದು, ಕಳೆದ ಕೆಲ ವರ್ಷಗಳಿಂದ ಸುದ್ದುಗುಂಟೆಪಾಳ್ಯದಲ್ಲಿ ವಾಸವಿದ್ದ. ಈರುಳ್ಳಿ ವ್ಯಾಪಾರ ಮಾಡುತ್ತಿದ್ದ ಈತ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದು, ಪತ್ನಿ ಹಾಗೂ ಮಗನೊಂದಿಗೆ ಜೀವನ ನಡೆಸುತ್ತಿದ್ದ.

ಇತ್ತೀಚೆಗೆ ದಂಪತಿ ನಡುವೆ ಗಲಾಟೆ ನಡೆದಿದ್ದು, ಪತ್ನಿ ಮಗನೊಂದಿಗೆ ತವರು ಮನೆಗೆ ತೆರಳಿದ್ದಳು. ಇದರಿಂದ ಕೋಪಗೊಂಡ ಜೀವನ್ ರಾಜ್, ಕಳೆದ ತಿಂಗಳ 22ರಂದು ಹಲವು ಸ್ಕ್ರಾಪ್ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾನೆ. ಏಳೆಂಟು ಗೋಡೌನ್‌ಗಳು ಈತನ ಕೃತ್ಯಕ್ಕೆ ಆಹುತಿಯಾಗಿದ್ದವು ಎಂದು ತಿಳಿದುಬಂದಿದೆ.

ಬೆಂಕಿ ಹಚ್ಚಿದ ಬಳಿಕ ಸ್ಥಳದಿಂದ ಪರಾರಿಯಾಗದೆ, ಬೆಂಕಿ ಹೊತ್ತಿ ಉರಿಯುವುದನ್ನು ನಿಂತು ನೋಡುತ್ತಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ, ತನ್ನ ಕೃತ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದ.

ಸ್ಕ್ರಾಪ್ ಗೋಡೌನ್‌ನಲ್ಲಿ ಮಲಗಿದ್ದ ಮಣಿಕಂಠ ಎಂಬಾತ ಬೆಂಕಿಯಿಂದ ಆವರಿಸಿದ ಹೊಗೆಯಲ್ಲಿ ಸಿಲುಕಿ ಉಸಿರಾಡಲು ಸಾಧ್ಯವಾಗದೆ ನರಳಾಡಿದ್ದಾನೆ. ಸ್ಥಳೀಯರು ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಆರಂಭದಲ್ಲಿ ಸರಣಿ ಅಗ್ನಿ ಅವಘಡಗಳನ್ನು ಆಕಸ್ಮಿಕ ಘಟನೆಗಳೆಂದು ಭಾವಿಸಲಾಗಿತ್ತು. ಆದರೆ ಒಂದೇ ರೀತಿಯಲ್ಲಿ ಹಲವು ಕಡೆ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೊಲೀಸರಿಗೆ ಅನುಮಾನ ಮೂಡಿತ್ತು. ಅತ್ತಿಬೆಲೆ ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ತನಿಖೆ ಆರಂಭಿಸಿತ್ತು.

ಆರೋಪಿಯ ಪತ್ತೆಗಾಗಿ ಪೊಲೀಸರು 200ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದ್ದರು. ಸ್ಕ್ರಾಪ್ ಅಂಗಡಿಗಳ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯ ದೃಶ್ಯ ಸಿಕ್ಕಿತ್ತು. ಆಸ್ಪತ್ರೆ ಬಳಿ ಜರ್ಕಿನ್ ಬದಲಾಯಿಸಿಕೊಂಡು ಹೋಗುತ್ತಿದ್ದ ದೃಶ್ಯವೂ ಪೊಲೀಸರಿಗೆ ಲಭ್ಯವಾಗಿತ್ತು. ಸಿಟಿ-100 ಬೈಕ್‌ನಲ್ಲಿ ಓಡಾಡುತ್ತಿದ್ದ ವ್ಯಕ್ತಿಯ ಸುಳಿವು ಆಧರಿಸಿ ತನಿಖೆ ಮುಂದುವರಿಸಿದ್ದರು.

ಕಳೆದ 15 ದಿನಗಳಿಂದ ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕೊನೆಗೂ ಜೀವನ್ ರಾಜ್‌ನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಪತ್ನಿ ತವರು ಮನೆಗೆ ಹೋದ ಕೋಪಕ್ಕೆ ಸ್ಕ್ರಾಪ್ ಗೋಡೌನ್‌ಗಳಿಗೆ ಬೆಂಕಿ ಹಚ್ಚಿದ್ದಾಗಿ ಆರೋಫಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

Related Articles

Back to top button