*ಹೊಸ ವರ್ಷದಿಂದ ವಾಹನ ಸವಾರರಿಗೆ ಟಫ್ ರೂಲ್ಸ್, ತಪ್ಪಿದ್ರೆ ದಂಡ*: *ಬೈಕ್ ಸೀಜ್*

ಪ್ರಗತಿವಾಹಿನಿ ಸುದ್ದಿ: ವಾಹನ ಸವಾರರ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದೆ. ಹೊಸ ವರ್ಷದಿಂದ ಕಠಿಣ ನಿಯಮಗಳು ಜಾರಿಗೆ ಬರಲಿವೆ.
ಫುಟ್‌ಪಾತ್ ಮೇಲೆ ಬೈಕ್ ಅಥವಾ ಇತರ ವಾಹನಗಳನ್ನು ಚಲಾಯಿಸುವವರಿಗೆ ವಿಧಿಸುವ ದಂಡದ ಮೊತ್ತವನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಸಾರಿಗೆ ಸಚಿವ ಬೈರತಿ ಸುರೇಶ್ ಮಾಹಿತಿ ನ್ಮೀಡಿದ್ದಾರೆ.
ಫುಟ್‌ಪಾತ್ ಮೇಲೆ ಬೈಕ್ ಅಥವಾ ಇತರ ವಾಹನಗಳನ್ನು ಚಲಾಯಿಸುವವರಿಗೆ ಈವರೆಗೆ 1,000 ರೂ. ಇದ್ದ ದಂಡವನ್ನು 5,000 ರೂ.ಗೆ ಹೆಚ್ಚಿಸುವ ಪ್ರಸ್ತಾವನೆ ಇದೆ. ಹೊಸ ನಿಯಮದ ಪ್ರಕಾರ, ಮೊದಲ ಬಾರಿಗೆ ಫುಟ್‌ಪಾತ್ ಮೇಲೆ ವಾಹನ ಚಲಾಯಿಸಿ ಸಿಕ್ಕಿಬಿದ್ದರೆ 5,000 ರೂ. ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ನಿಯಮ ಉಲ್ಲಂಘಿಸಿದರೆ 10,000 ರೂ. ದಂಡ ವಿಧಿಸಲು ಉದ್ದೇಶಿಸಲಾಗಿದೆ. ಮೂರನೇ ಅಥವಾ ನಾಲ್ಕನೇ ಬಾರಿಯೂ ಇದೇ ತಪ್ಪು ಮಾಡಿದರೆ ವಾಹನವನ್ನು ಜಪ್ತಿ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೀಟರ್ ಕಡ್ಡಾಯ:
ಬೆಂಗಳೂರಿನಲ್ಲಿ ಸಂಚರಿಸುವ ಓಲಾ, ಉಬರ್, ನಮ್ಮ ಯಾತ್ರಿ ಕ್ಯಾಬ್‌ಗಳಿಗೂ ಇನ್ಮುಂದೆ ಮೀಟರ್ ಕಡ್ಡಾಯವಾಗಲಿದೆ. ಮೀಟರ್ ಅಳವಡಿಸದೆ ಕ್ಯಾಬ್ ಅಥವಾ ಆಟೋ ಓಡಿಸುವಂತಿಲ್ಲ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.
ಇದೇ ವೇಳೆ, ಹೊಸ ವರ್ಷದಿಂದ ರಾಜ್ಯಾದ್ಯಂತ ವಾಹನ ಸವಾರರಿಗೆ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ. ಫುಟ್‌ಪಾತ್ ಮೇಲೆ ವಾಹನ ಚಲಾಯಿಸಿದರೆ ಭಾರಿ ದಂಡ ವಿಧಿಸುವುದರ ಜತೆಗೆ ಪದೇ ಪದೆ ನಿಯಮ ಉಲ್ಲಂಘಿಸಿದರೆ ಬೈಕ್ ಸೀಜ್ ಮಾಡಲು ನಿರ್ಧರಿಸಲಾಗಿದೆ. ಅಲ್ಲದೆ, ಹಾಫ್ ಹೆಲ್ಮೆಟ್ ಬಳಕೆಗೂ ನಿಷೇಧ ಹೇರಲು ಸರ್ಕಾರ ಮುಂದಾಗಿದೆ.
ಆಟೋಗಳಂತೆ ಓಲಾ, ಉಬರ್ ಹಾಗೂ ನಮ್ಮ ಯಾತ್ರಿ ಕ್ಯಾಬ್‌ಗಳಿಗೂ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು ಎಂದು ಹೇಳಿದ್ದಾರೆ. ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚರಿಸುವ ಕ್ಯಾಬ್‌ಗಳಿಗೂ ಈ ನಿಯಮ ಅನ್ವಯವಾಗಲಿದೆ. ವಿಯೆಟ್ನಾಂ ಮೂಲದ ಗ್ರೀನ್ ಎಸ್‌ಎಂ ಕಂಪನಿಯ ಕ್ಯಾಬ್‌ಗಳಿಗೂ ಮೀಟರ್ ಕಡ್ಡಾಯಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಕಾಯ್ದೆ ಜಾರಿಗೆ ತರಲು ಅಗತ್ಯವಿರುವ ಕಾನೂನು ಅಂಶಗಳ ಪರಿಶೀಲನೆ ಬಹುತೇಕ ಪೂರ್ಣಗೊಂಡಿದೆ ಎಂದು ಸಚಿವರು ಹೇಳಿದ್ದಾರೆ. ಹೊಸ ವರ್ಷದಿಂದಲೇ ಈ ನಿಯಮಗಳನ್ನು ಕಾಯ್ದೆಯ ರೂಪದಲ್ಲಿ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ ಎಂದರು.



