*ವಸ್ತುನಿಷ್ಠ ವರದಿಗಾರಿಕೆಯಿಂದ ಬೆಳಗಾವಿಯಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಲು ಸಹಕಾರ*: *ಡಾ. ಅಲ್ಲಮಪ್ರಭು ಶ್ರೀ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಬ್ಬಗಳ ಸಂಭ್ರಮವಿರಲಿ, ರೈತರ ಹೋರಾಟದ ಸಂದರ್ಭವಿರಲಿ, ಸೂಕ್ಷ್ಮ ಪರಿಸ್ಥಿತಿಗಳಲ್ಲೂ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ಶ್ರಮಿಸಿದ್ದಾರೆ. ಇಂತಹ ಸಂದರ್ಭಗಳಲ್ಲಿ ನಡೆದ ಘಟನೆಗಳನ್ನು ಅತಿರಂಜಿತಗೊಳಿಸದೆ ವಸ್ತುನಿಷ್ಠವಾಗಿ ವರದಿ ಮಾಡಿದ ಬೆಳಗಾವಿಯ ಪತ್ರಕರ್ತರು ಕೂಡ ಜಿಲ್ಲೆಯ ಶಾಂತಿ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ನಾಗನೂರಿನ ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಳಗಾವಿ ಪತ್ರಕರ್ತರ ಸಂಘ ಹಾಗೂ ನಾಗನೂರಿನ ರುದ್ರಾಕ್ಷಿಮಠದ ಸಹಯೋಗದಲ್ಲಿ ಶಿವಬಸವನಗರದ ಎಸ್ಜಿಬಿಐಟಿ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ‘ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಬೆಳಗಾವಿ ಸೂಕ್ಷ್ಮ ಜಿಲ್ಲೆಯಾಗಿದ್ದರೂ ಕಳೆದ ಆರು ತಿಂಗಳ ಅವಧಿಯಲ್ಲಿ ರೈತರ ಹೋರಾಟಗಳು, ಹಬ್ಬ-ಹರಿದಿನಗಳು ಸೇರಿದಂತೆ ಹಲವು ಮಹತ್ವದ ಸಂದರ್ಭಗಳಲ್ಲಿ ಪೊಲೀಸರು ಸಮರ್ಥವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇಂತಹ ಅಧಿಕಾರಿಗಳ ಸೇವೆಯನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ. ಕಾನೂನು ಮತ್ತು ಸುವ್ಯವಸ್ಥೆ ಕುರಿತು ಚರ್ಚಿಸುವುದರ ಜತೆಗೆ ಅದರ ಹಿಂದೆ ಶ್ರಮಿಸುವ ಅಧಿಕಾರಿಗಳನ್ನು ಅಭಿನಂದಿಸುವ ಕೆಲಸವೂ ನಡೆಯಬೇಕು ಎಂದರು.
ಸರ್ಕಾರಿ ಅಧಿಕಾರಿಗಳಿಗೆ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು. ಕರ್ತವ್ಯದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಿದರೆ ಆಡಳಿತ ನಿರ್ವಹಣೆ ಕಷ್ಟವಾಗುತ್ತದೆ. ಬೆಳಗಾವಿಯಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಕಾರ್ಯಸ್ವಾತಂತ್ರ್ಯ ನೀಡುತ್ತಿರುವುದು, ಸಾರ್ವಜನಿಕರು ಮತ್ತು ಸಂಘಟನೆಗಳು ಸಹಕಾರ ನೀಡುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.
ಪತ್ರಕರ್ತರು ಕೂಡ ತಮ್ಮ ಜವಾಬ್ದಾರಿಯನ್ನು ಅರಿತು ವರದಿಗಾರಿಕೆ ಮಾಡಬೇಕು. ಸಣ್ಣ ಲೋಪವನ್ನೇ ದೊಡ್ಡದಾಗಿ ಬಿಂಬಿಸಿದರೆ ವಿವಾದ ಸೃಷ್ಟಿಯಾಗಬಹುದು. ಆದರೆ ಬೆಳಗಾವಿಯ ಪತ್ರಕರ್ತರು ಘಟನೆಗಳನ್ನು ಸಮತೋಲನದಿಂದ ಹಾಗೂ ವಸ್ತುನಿಷ್ಠವಾಗಿ ಜನರ ಮುಂದಿಡುತ್ತಿದ್ದಾರೆ. ಇದು ಜಿಲ್ಲೆಯ ಶಾಂತಿ ಮತ್ತು ಸೌಹಾರ್ದತೆಗೆ ಪೂರಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ. ತಂದೆ-ತಾಯಿಗಳು ತಮ್ಮ ನಡೆ-ನುಡಿಯ ಮೂಲಕ ಮಕ್ಕಳಿಗೆ ಆದರ್ಶವಾಗಬೇಕು ಎಂದು ಪತ್ರಕರ್ತರ ಕುಟುಂಬದವರಿಗೆ ಕಿವಿಮಾತು ಹೇಳಿದರು.
ಕಬ್ಬು ಬೆಳೆಗಾರರ ಹೋರಾಟದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಹಲವು ದಿನಗಳ ಕಾಲ ನಿರಂತರವಾಗಿ ಕರ್ತವ್ಯ ನಿರ್ವಹಿಸಿದ್ದರು. ಹಬ್ಬದ ದಿನಗಳಲ್ಲಿಯೂ ಮನೆಗೆ ತೆರಳದೆ ಕೆಲಸ ಮಾಡಿದ್ದ ಪೊಲೀಸರ ಶ್ರಮವನ್ನು ಮಾಧ್ಯಮಗಳು ಜನರಿಗೆ ತಲುಪಿಸಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸ್ಮರಿಸಿದರು.
ಹೋರಾಟದ ವಿದ್ಯಮಾನಗಳ ವರದಿಯ ಜತೆಗೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಪರಿಶ್ರಮಕ್ಕೂ ಪತ್ರಕರ್ತರು ತಮ್ಮ ವರದಿಗಳಲ್ಲಿ ಆದ್ಯತೆ ನೀಡಿದ್ದರು. ಇದರಿಂದ ಪೊಲೀಸ್ ಸಿಬ್ಬಂದಿಯ ಕೆಲಸವನ್ನು ಜನರು ಗುರುತಿಸುವಂತಾಯಿತು. ಪತ್ರಕರ್ತರ ವೃತ್ತಿಪರತೆ ಶ್ಲಾಘನೀಯ ಎಂದರು.
ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕ ಸಂದೀಪ ಪಾಟೀಲ ಮಾತನಾಡಿ, ಬೆಳಗಾವಿಯ ಮಾಧ್ಯಮಗಳ ಸಹಕಾರವನ್ನು ಶ್ಲಾಘಿಸಿದರು. ಸಾಮಾನ್ಯವಾಗಿ ಸುದ್ದಿಗೋಷ್ಠಿ ಹಾಗೂ ಕರ್ತವ್ಯದ ಸಂದರ್ಭಗಳಲ್ಲಿ ಪತ್ರಕರ್ತರನ್ನು ಭೇಟಿಯಾಗುತ್ತಿದ್ದೆವು. ಆದರೆ ಈ ಕಾರ್ಯಕ್ರಮದಲ್ಲಿ ಅವರ ಕುಟುಂಬದವರನ್ನೂ ಭೇಟಿಯಾಗುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದರು.
ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕ್ಕಂ ಮಾತನಾಡಿ, ಹಿಂದೆ ಪತ್ರಿಕೆಗಳೇ ಜಿಲ್ಲೆ ಹಾಗೂ ರಾಜ್ಯದ ವಿದ್ಯಮಾನಗಳನ್ನು ತಿಳಿದುಕೊಳ್ಳಲು ಪ್ರಮುಖ ಮಾಧ್ಯಮಗಳಾಗಿದ್ದವು. ಡಿಜಿಟಲ್ ಮಾಧ್ಯಮಗಳ ಬೆಳವಣಿಗೆಯೊಂದಿಗೆ ಸುದ್ದಿ ತಲುಪುವ ವಿಧಾನ ಮತ್ತು ಓದುವ ಅಭ್ಯಾಸದಲ್ಲೂ ಸಾಕಷ್ಟು ಬದಲಾವಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ವಿಲಾಸ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರ ವೃತ್ತಿಜೀವನದ ಒತ್ತಡ ಮತ್ತು ಸಮಯದ ಅನಿಶ್ಚಿತತೆಯ ನಡುವೆಯೂ ಕುಟುಂಬಗಳು ನೀಡುವ ಬೆಂಬಲವನ್ನು ಗೌರವಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು. ಪತ್ರಕರ್ತರ ಕುಟುಂಬದ ಸದಸ್ಯರಲ್ಲಿರುವ ಗಾಯನ ಹಾಗೂ ಇತರ ಕಲಾಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲಾಯಿತು.
ರಾಷ್ಟ್ರೀಯ ಪತ್ರಿಕಾ ದಿನದ ಶುಭಾಶಯ ಕೋರಿ ಸನ್ಮಾನಿತರನ್ನು ಅಭಿನಂದಿಸಲಾಯಿತು. ಸಹಯೋಗ ನೀಡಿದ ನಾಗನೂರಿನ ರುದ್ರಾಕ್ಷಿಮಠಕ್ಕೆ ಕೃತಜ್ಞತೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರ ಪದಕ ಪುರಸ್ಕೃತ ಮಾಳಮಾರುತಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಿ.ಆರ್. ಗಡ್ಡೇಕರ ಅವರನ್ನು ಸನ್ಮಾನಿಸಲಾಯಿತು.
ಜಿಪಂ ಸಿಇಒ ರಾಹುಲ ಶಿಂಧೆ, ಡಿಸಿಪಿ ಎನ್.ವಿ. ಬರಮನಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಂತೋಷ ಚಿನಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಶೇಖರ ಪಾಟೀಲ ನಿರೂಪಿಸಿದರು. ಸುನೀತಾ ದೇಸಾಯಿ ಸ್ವಾಗತಿಸಿದರು. ಸುರೇಶ ನೇರ್ಲಿ ವಂದಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರು ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದರು. ಸನ್ಮಾನ ಕಾರ್ಯಕ್ರಮದ ಬಳಿಕ ನಡೆದ ಸಂಗೀತ ಸಂಜೆಯಲ್ಲಿ ಪತ್ರಕರ್ತರ ಕುಟುಂಬದ ಸದಸ್ಯರು ತಮ್ಮ ಗಾಯನ ಹಾಗೂ ವಿವಿಧ ಕಲಾಪ್ರತಿಭೆಗಳನ್ನು ಪ್ರದರ್ಶಿಸಿದರು.



