*ನೆಲದ ಮೇಲಿದ್ದ ಭಾರತದ ಧ್ವಜದ ಗುರುತು ಕಂಡು ಮೋದಿ ಮಾಡಿದ್ದೇನು?*: *ಟ್ರಂಪ್ ಪ್ರತಿಕ್ರಿಯೆ ವೈರಲ್*

ಪ್ರಗತಿವಾಹಿನಿ ಸುದ್ದಿ: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಡೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆಯುತ್ತಿದೆ. ಕ್ವಾಡ್ ನಾಯಕರ ಶೃಂಗಸಭೆಯ ಗ್ರೂಪ್ ಫೋಟೋ ವೇಳೆ ನೆಲದ ಮೇಲಿದ್ದ ಭಾರತದ ತ್ರಿವರ್ಣ ಧ್ವಜದ ಗುರುತನ್ನು ಕಂಡ ಮೋದಿ, ತಕ್ಷಣವೇ ಅದನ್ನು ಎತ್ತಿಕೊಂಡು ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅವರ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಫಿಲಿಪೈನ್ಸ್ನ ಮನಿಲಾದಲ್ಲಿ ನಡೆದ ಕ್ವಾಡ್ ಶೃಂಗಸಭೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಜಾಗತಿಕ ನಾಯಕರ ಗ್ರೂಪ್ ಫೋಟೋಗಾಗಿ ವೇದಿಕೆಯ ಮೇಲೆ ಪ್ರತಿಯೊಬ್ಬ ನಾಯಕರು ನಿಲ್ಲಬೇಕಾದ ಸ್ಥಳವನ್ನು ಸೂಚಿಸಲು ಆಯಾ ದೇಶಗಳ ಧ್ವಜದ ಗುರುತುಗಳನ್ನು ನೆಲದ ಮೇಲೆ ಅಂಟಿಸಲಾಗಿತ್ತು.
ವೇದಿಕೆಗೆ ಆಗಮಿಸಿದ ಪ್ರಧಾನಿ ಮೋದಿ, ತಮ್ಮ ಕಾಲಿನ ಬಳಿ ಭಾರತದ ತ್ರಿವರ್ಣ ಧ್ವಜದ ಚಿಹ್ನೆ ಇರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಕೆಳಕ್ಕೆ ಬಾಗಿ ಆ ಗುರುತಿನ ಕಾಗದವನ್ನು ಎತ್ತಿಕೊಂಡು ತಮ್ಮ ಜೇಬಿನಲ್ಲಿ ಇರಿಸಿಕೊಂಡಿದ್ದಾರೆ.
ಈ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಜಪಾನ್ ಪ್ರಧಾನಿ ಸನಾಯೆ ತಕೈಚಿ ಕೂಡ ಅಲ್ಲಿದ್ದರು. ಮೋದಿ ಅವರ ನಡೆ ಗಮನಿಸಿದ ಟ್ರಂಪ್, “ಸೇವ್ ಇಟ್” ಎಂದು ಹೇಳಿ ಬೆನ್ನು ತಟ್ಟಿದ್ದಾರೆ ಎನ್ನಲಾಗಿದೆ.
ಪ್ರಧಾನಿ ಮೋದಿ ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ರಾಷ್ಟ್ರಧ್ವಜದ ಚಿಹ್ನೆ ಕಾಲಡಿಯಲ್ಲಿ ತುಳಿಯದಂತೆ ಎಚ್ಚರಿಕೆ ವಹಿಸಿರುವುದು ದೇಶದ ಧ್ವಜದ ಬಗ್ಗೆ ಅವರಿಗಿರುವ ಗೌರವವನ್ನು ತೋರಿಸುತ್ತದೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




