
ಪ್ರಗತಿವಾಹಿನಿ ಸುದ್ದಿ: ಖಾಸಗಿ ಶಾಲೆಗಳ ದುಬಾರಿ ಶುಲ್ಕದಿಂದ ಕಂಗಾಲಾಗಿರುವ ಪೋಷಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಲು ಮುಂದಾಗಿದೆ. ಸರ್ಕಾರಿ ಶಾಲೆಗಳಲ್ಲೂ ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ವಿಸ್ತರಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
ಸದ್ಯ ರಾಜ್ಯದ ಸುಮಾರು 6ರಿಂದ 7 ಸಾವಿರ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳು ನಡೆಯುತ್ತಿವೆ. ಇದೀಗ ಹೊಸದಾಗಿ ಇನ್ನೆಷ್ಟು ಶಾಲೆಗಳಲ್ಲಿ ಈ ತರಗತಿಗಳನ್ನು ಆರಂಭಿಸಬಹುದು ಎಂಬುದರ ಕುರಿತು ಸಮೀಕ್ಷೆ ನಡೆಸಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಪೋಷಕರಿಂದ ಹೆಚ್ಚಿನ ಬೇಡಿಕೆ ಇರುವ ಶಾಲೆಗಳಿಗೆ ಮೊದಲ ಆದ್ಯತೆ ನೀಡಲು ಚಿಂತಿಸಲಾಗಿದೆ. ವಿಶೇಷವೆಂದರೆ, ಕೆಲವು ಸರ್ಕಾರಿ ಶಾಲೆಗಳಲ್ಲಿ ಸರ್ಕಾರದ ಅಧಿಕೃತ ಅನುಮತಿಯಿಲ್ಲದಿದ್ದರೂ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಹಾಗೂ ಶಿಕ್ಷಕರು ಸ್ವಂತ ವೆಚ್ಚದಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಿದ್ದಾರೆ. ಹೀಗಾಗಿ ಮಕ್ಕಳ ದಾಖಲಾತಿ ಮತ್ತು SDMCಗಳ ಬೇಡಿಕೆಯನ್ನು ಆಧರಿಸಿ ಈ ವ್ಯವಸ್ಥೆಯನ್ನು ವಿಸ್ತರಿಸಲು ಇಲಾಖೆ ಮುಂದಾಗಿದೆ.
42 ದಿನಗಳಲ್ಲಿ 48 ಸಾವಿರ ಮಕ್ಕಳ ದಾಖಲಾತಿ!
ಇನ್ನು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸುವ ಮೂಲಕ ಅಂಗನವಾಡಿ ಮತ್ತು ಶಾಲೆಗಳ ನಡುವೆ ಸಮನ್ವಯ ಸಾಧಿಸಲು ಸರ್ಕಾರ ಯೋಜನೆ ರೂಪಿಸಿದೆ. ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಧಿಯಡಿ ಆರಂಭಿಸಿರುವ ಪೂರ್ವ ಪ್ರಾಥಮಿಕ ತರಗತಿಗಳಿಗೆ ಕೇವಲ 42 ದಿನಗಳಲ್ಲಿ ಬರೋಬ್ಬರಿ 48 ಸಾವಿರ ಮಕ್ಕಳು ದಾಖಲಾಗಿದ್ದಾರೆ. ಈ ಭಾರೀ ದಾಖಲಾತಿ ಹೆಚ್ಚಳವೇ ಸರ್ಕಾರಕ್ಕೆ ಹೊಸ ಭರವಸೆ ಮೂಡಿಸಿದೆ.
ಇದೇ ಮಾದರಿಯನ್ನು ರಾಜ್ಯದ ಉಳಿದ ಭಾಗಗಳಿಗೂ ವಿಸ್ತರಿಸುವ ಮೂಲಕ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಯೋಜನೆ ಜಾರಿಯಾದರೆ ಬಡ ಮತ್ತು ಮಧ್ಯಮ ವರ್ಗದ ಪೋಷಕರಿಗೆ ಖಾಸಗಿ ಶಾಲೆಗಳ ದುಬಾರಿ ಶುಲ್ಕದ ಹೊರೆಯಿಂದ ಸ್ವಲ್ಪ ಮಟ್ಟಿನ ಮುಕ್ತಿ ಸಿಗುವ ನಿರೀಕ್ಷೆಯಿದೆ.
ಒಟ್ಟಿನಲ್ಲಿ, ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚುತ್ತಿರುವ ಬೇಡಿಕೆಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಆದರೆ ಈ ಯೋಜನೆ ಯಾವಾಗ ಮತ್ತು ಎಷ್ಟು ಶಾಲೆಗಳಲ್ಲಿ ಜಾರಿಯಾಗಲಿದೆ ಎಂಬುದು ಮುಂದಿನ ನಿರ್ಧಾರಗಳ ಮೇಲೆ ಅವಲಂಬಿತವಾಗಿದೆ.




