*ತೆರಿಗೆ ಹಣ ಕಟ್ಟಿದ ಜನರಿಗೆ ನಕಲಿ ರಸೀದಿ*: *ಜಿಬಿಎಯಲ್ಲಿ ನಡೆದಿದ್ದ ವಂಚನೆಯ ಅಸಲಿ ಕತೆ ಬಯಲು*

ಪ್ರಗತಿವಾಹಿನಿ ಸುದ್ದಿ: ಸಾರ್ವಜನಿಕರು ಕಷ್ಟಪಟ್ಟು ಕಟ್ಟಿದ ಆಸ್ತಿ ತೆರಿಗೆ ಹಣದಲ್ಲೇ ವಂಚನೆ ನಡೆದಿರುವ ಪ್ರಕರಣಕ್ಕೆ ಕೊನೆಗೂ ಮಹತ್ವದ ತಿರುವು ಸಿಕ್ಕಿದೆ. ನಕಲಿ ತೆರಿಗೆ ಪಾವತಿ ರಸೀದಿಗಳನ್ನು ನೀಡಿ ನಾಗರಿಕರಿಗೆ ವಂಚಿಸಿದ ಆರೋಪ ಎದುರಿಸುತ್ತಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಇಬ್ಬರು ಕಂದಾಯ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ. 17ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದ್ದು, ಪಾಲಿಕೆಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿರುವ ಆರೋಪ ಕೇಳಿಬಂದಿದೆ.
ಬನಶಂಕರಿ ಉಪವಿಭಾಗದ ಕಂದಾಯ ಪರಿವೀಕ್ಷಕ ಹೆಚ್. ರಾಮಯ್ಯ ಮತ್ತು ಕಂದಾಯ ವಸೂಲಿಗಾರ ಸಿ. ಶ್ರೀನಿವಾಸ್ ಸೇವೆಯಿಂದ ವಜಾಗೊಂಡವರು. ಜಿಬಿಎ ಮುಖ್ಯ ಆಯುಕ್ತರ ಆದೇಶದಂತೆ ಜಂಟಿ ಆಯುಕ್ತರು (ಆಡಳಿತ) ರವೀಂದ್ರ ಕರಲಿಂಗಣ್ಣನವರ್ ಅವರು 2026ರ ನವೆಂಬರ್ 9ರಂದು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.
ವಂಚನೆ ನಡೆದಿದ್ದು ಹೇಗೆ?
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ನಾಗರಿಕರನ್ನು ಗುರಿಯಾಗಿಸಿಕೊಂಡಿದ್ದ ಇಬ್ಬರು ಸಿಬ್ಬಂದಿ, ಬಡ್ಡಿ ಮನ್ನಾ ಮಾಡಿಸಿಕೊಡುವುದಾಗಿ ನಂಬಿಸಿದ್ದರು. ತೆರಿಗೆ ಪಾವತಿಗಾಗಿ ಜನರಿಂದ ಲಕ್ಷಾಂತರ ರೂಪಾಯಿ ನಗದು ಸಂಗ್ರಹಿಸಿ, ಅದನ್ನು ಪಾಲಿಕೆಯ ಖಾತೆಗೆ ಜಮೆ ಮಾಡದೆ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪವಿದೆ. ಹಣ ಪಡೆದ ಬಳಿಕ ನಾಗರಿಕರಿಗೆ ನಕಲಿ ಆಸ್ತಿ ತೆರಿಗೆ ಪಾವತಿ ರಸೀದಿಗಳನ್ನು ನೀಡಿದ್ದರು ಎನ್ನಲಾಗಿದೆ.
ಈ ಸಂಬಂಧ 17ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದ್ದು, ಪಾಲಿಕೆಗೆ ಕೋಟ್ಯಂತರ ರೂಪಾಯಿ ಆರ್ಥಿಕ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
ದೂರು ಮತ್ತು ಪೊಲೀಸ್ ತನಿಖೆ
ವಂಚನೆಗೊಳಗಾದ ನಾಗರಿಕರು ಜಯನಗರ ಮತ್ತು ಬನಶಂಕರಿ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದರು. ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಕೂಡ ದಾಖಲೆಗಳ ಸಮೇತ ಪೊಲೀಸ್ ಠಾಣೆ ಹಾಗೂ ಪಾಲಿಕೆ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿಯೂ ದಾಖಲೆಗಳನ್ನು ಮಂಡಿಸಲಾಗಿತ್ತು.
ಇಲಾಖಾ ವಿಚಾರಣೆಯಲ್ಲಿ ಆರೋಪ ಸಾಬೀತು
ಕರ್ತವ್ಯ ಲೋಪ ಮತ್ತು ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ಇಬ್ಬರನ್ನೂ 2019 ಹಾಗೂ 2020ರಲ್ಲಿ ಅಮಾನತುಗೊಳಿಸಲಾಗಿತ್ತು. 2021ರಲ್ಲಿ ಆರೋಪಪಟ್ಟಿ ಜಾರಿಗೊಳಿಸಿ ಇಲಾಖಾ ವಿಚಾರಣೆ ಆರಂಭಿಸಲಾಗಿತ್ತು. ಬಳಿಕ ಬೇರೆ ಕಚೇರಿಗಳಿಗೆ ನಿಯೋಜಿಸಲಾಗಿತ್ತು.
2024ರ ಮಾರ್ಚ್ 20ರಂದು ವಿಚಾರಣಾಧಿಕಾರಿಗಳು ಸಲ್ಲಿಸಿದ ವರದಿಯಲ್ಲಿ ಇಬ್ಬರ ವಿರುದ್ಧದ ಆರೋಪಗಳು ರುಜುವಾತಾಗಿವೆ ಎಂದು ತಿಳಿಸಲಾಗಿತ್ತು. ಅದೇ ವರ್ಷದ ಮೇ 17ರಂದು ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಆರೋಪಿತ ಸಿಬ್ಬಂದಿ ಸಲ್ಲಿಸಿದ್ದ ಸಮಜಾಯಿಷಿಯನ್ನು ಪ್ರಾಧಿಕಾರ ತಿರಸ್ಕರಿಸಿತ್ತು.
ಅಂತಿಮವಾಗಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 8(7) ಮತ್ತು 8(8)ರ ಅಡಿಯಲ್ಲಿ ಇಬ್ಬರನ್ನೂ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ.




