CrimeKannada NewsKarnataka NewsLatestNational

*ಶರಣಾಗಲು ಕೊನೆಯ ಅವಕಾಶ ನೀಡಿದರೂ ಒಪ್ಪಲಿಲ್ಲ*: *ಎನ್‌ಕೌಂಟರ್‌ನಲ್ಲಿ ಲಷ್ಕರ್ ಕಮಾಂಡರ್ ಲತೀಫ್ ಭಟ್ ಸಾವು*

ಪ್ರಗತಿವಾಹಿನಿ ಸುದ್ದಿ: ಭದ್ರತಾ ಪಡೆಗಳ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ ಲಷ್ಕರ್‌-ಎ-ತೊಯ್ಬಾ ಸಂಘಟನೆಯ ಉನ್ನತ ಕಮಾಂಡರ್‌ನ ಬೇಟೆ ಕೊನೆಗೂ ಅಂತ್ಯಗೊಂಡಿದೆ. ಶರಣಾಗಲು ಕೊನೆಯ ಅವಕಾಶ ನೀಡಿದರೂ ಆತ ಒಪ್ಪಲಿಲ್ಲ. ಬದಲಾಗಿ, ಸಾವಿನ ಬಗ್ಗೆ ಮಾತನಾಡುತ್ತಾ ಭದ್ರತಾ ಸಿಬ್ಬಂದಿಗೆ ಉತ್ತರ ನೀಡಿದ್ದಾನೆ. ಈ ಕಾರ್ಯಾಚರಣೆಯಲ್ಲಿ ಉಗ್ರ ಕಮಾಂಡರ್ ಲತೀಫ್ ಭಟ್ ಹತನಾಗಿದ್ದಾನೆ.

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಜಂಗಲ್‌ಪೋರಾ ಗ್ರಾಮದಲ್ಲಿ ಕಾರ್ಯಾಚರಣೆಯ ವೇಳೆ ಪೊಲೀಸರು ಮತ್ತು ಸೇನಾ ಅಧಿಕಾರಿಗಳು ವಿಡಿಯೋ ಕರೆ ಮೂಲಕ ಆತನನ್ನು ಸಂಪರ್ಕಿಸಿ ಶಸ್ತ್ರಾಸ್ತ್ರ ಕೆಳಗಿಟ್ಟು ಶರಣಾಗುವಂತೆ ಮನವಿ ಮಾಡಿದ್ದರು. “ನಾವು ನಿಮ್ಮೊಂದಿಗಿದ್ದೇವೆ, ಈ ಮಾರ್ಗವನ್ನು ಏಕೆ ಆರಿಸಿಕೊಂಡಿದ್ದೀರಿ? ಶರಣಾಗಿ” ಎಂದು ಅಧಿಕಾರಿಗಳು ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ “ನಾನು ಅಲ್ಲಾಹನನ್ನು ಭೇಟಿಯಾಗಲು ಹೊರಟಿದ್ದೇನೆ. ನನಗೆ ಅಲ್ಲಾಹನೇ ಸಾಕು” ಎಂದು ಉತ್ತರಿಸಿ ಶರಣಾಗಲು ನಿರಾಕರಿಸಿದ್ದಾನೆ ಎನ್ನಲಾಗಿದೆ.

ನವೆಂಬರ್ 16ರಂದು ಕುಲ್ಗಾಮ್‌ನ ಲಾರೂ ಬೈಪಾಸ್ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಉಮರ್ ನಿಸಾರ್ ದಾರ್ ಹತನಾಗಿದ್ದ. ಆದರೆ ಆತನ ಸಹಚರ ಎನ್ನಲಾದ ಲತೀಫ್ ಭಟ್ ಭದ್ರತಾ ಪಡೆಗಳ ಸುತ್ತುವರಿಕೆಯಿಂದ ತಪ್ಪಿಸಿಕೊಂಡಿದ್ದ. ಅಂದಿನಿಂದ ಆತನಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿತ್ತು. ಪೊಲೀಸರ ಪ್ರಕಾರ, ಉಮರ್ ದಾರ್ ಸುಮಾರು ಆರು ತಿಂಗಳ ಕಾಲ ಲತೀಫ್ ಭಟ್‌ಗೆ ಆಶ್ರಯ ಮತ್ತು ಇತರ ನೆರವು ನೀಡಿದ್ದ.

ನವೆಂಬರ್ 11ರಂದು ಕುಲ್ಗಾಮ್‌ನ ಅಖ್ರಾನ್ ಪ್ರದೇಶದಲ್ಲಿರುವ ಸಿಆರ್‌ಪಿಎಫ್ ಚೆಕ್‌ಪೋಸ್ಟ್ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಿಬ್ಬಂದಿ ಗಾಯಗೊಂಡಿದ್ದರು. ಈ ದಾಳಿಗೂ ಮುನ್ನ ಲತೀಫ್ ಭಟ್ ಮತ್ತು ಉಮರ್ ದಾರ್ ಹಲವು ಪ್ರದೇಶಗಳಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೀರ್ ಬಜಾರ್, ಅಖ್ರಾನ್, ಹಬ್ಲಿಶ್ ಮತ್ತು ಕಿಲಾಮ್ ಪ್ರದೇಶಗಳ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರ ಚಲನವಲನಗಳು ಸೆರೆಯಾಗಿವೆ. ಈ ದೃಶ್ಯಗಳನ್ನು ಆಧರಿಸಿ ತನಿಖೆ ಮುಂದುವರಿದಿದ್ದು, ನವೆಂಬರ್ 11ರ ದಾಳಿಯ ತನಿಖೆಯ ಭಾಗವಾಗಿಯೇ ಭದ್ರತಾ ಪಡೆಗಳು ಈ ಕಾರ್ಯಾಚರಣೆ ನಡೆಸಿವೆ.

Related Articles

Back to top button