Kannada NewsKarnataka NewsLatest

*ಬಸವಣ್ಣನ ಬಗ್ಗೆ ಆಕ್ಷೇಪಾರ್ಹ ಬರಹ*: *ಅಮೆರಿಕ ಮೂಲದ ಲೇಖಕನ ವಿರುದ್ಧ ಸಿಡಿದೆದ್ದ ಲಿಂಗಾಯತ ಮುಖಂಡರು*

ಪ್ರಗತಿವಾಹಿನಿ ಸುದ್ದಿ: ವಿಶ್ವಗುರು ಬಸವಣ್ಣನವರ ಚಾರಿತ್ರ್ಯಕ್ಕೆ ಮಸಿ ಬಳಿಯುವ ಪ್ರಯತ್ನ ನಡೆದಿದೆ ಎಂಬ ಆರೋಪ ಇದೀಗ ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಅಮೆರಿಕ ಮೂಲದ ಲೇಖಕ ರವಿ ಹಂಜ್ ಅವರು ಪುಸ್ತಕ ಮತ್ತು ವಿಡಿಯೋಗಳ ಮೂಲಕ ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಲಿಂಗಾಯತ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರವನ್ನು ಇಲ್ಲಿಗೇ ಬಿಡುವುದಿಲ್ಲ, ಕಾನೂನು ಹೋರಾಟ ನಡೆಸುತ್ತೇವೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ನಗರದ ಬಸವೇಶ್ವರ ವೃತ್ತದಲ್ಲಿರುವ ಬಸವ ಸಮಿತಿಯಲ್ಲಿ ಸಚಿವರಾದ ಎಂ.ಬಿ. ಪಾಟೀಲ್, ಡಾ. ಶರಣಪ್ರಕಾಶ ಪಾಟೀಲ್, ಶಾಸಕ ಬಿ.ಆರ್. ಪಾಟೀಲ್, ಅರವಿಂದ ಜತ್ತಿ ಹಾಗೂ ಡಾ. ನೀರಜ್ ಪಾಟೀಲ್ ಸೇರಿದಂತೆ ಹಲವು ಪ್ರಮುಖರು ಜಂಟಿ ಸುದ್ದಿಗೋಷ್ಠಿ ನಡೆಸಿ ಆಕ್ಷೇಪ ವ್ಯಕ್ತಪಡಿಸಿದರು. ಲೇಖಕ ರವಿ ಹಂಜ್ ವಿರುದ್ಧ ಪೊಲೀಸ್ ದೂರು ದಾಖಲಿಸುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, ಜಗತ್ತಿಗೆ ಸಮಾನತೆಯ ಸಂದೇಶ ನೀಡಿದ ಹಾಗೂ ಅನುಭವ ಮಂಟಪದ ಪರಿಕಲ್ಪನೆ ಕೊಟ್ಟ ಬಸವಣ್ಣನವರು ಮಹಿಳಾ ಸಬಲೀಕರಣ ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಮಹಾನ್ ಚೇತನ ಎಂದು ಹೇಳಿದರು.

ಆದರೆ ರವಿ ಹಂಜ್ ಅವರು ಬಸವಣ್ಣನವರನ್ನು ಕೊಲೆಗಡುಕ, ದರೋಡೆಕೋರ ಮತ್ತು ಲೂಟಿಕೋರ ಎಂಬಂತೆ ಬಿಂಬಿಸಿ ಲೇಖನ ಹಾಗೂ ಪುಸ್ತಕ ಬರೆದಿದ್ದಾರೆ ಎಂದು ಆರೋಪಿಸಿದರು. ಈ ಬರಹಗಳ ಹಿಂದೆ ಯಾರಿದ್ದಾರೆ ಎಂಬುದನ್ನೂ ಪತ್ತೆಹಚ್ಚುವುದಾಗಿ ತಿಳಿಸಿದರು.

ಬಸವಣ್ಣನವರನ್ನು ಅವಮಾನಿಸುವ ಯೂಟ್ಯೂಬ್ ಸಂದರ್ಶನದಲ್ಲಿ ಶಂಕರ್ ಬಿದರಿ ಮತ್ತು ಮನು ಬಳಿಗಾರ್ ಅವರಂತಹವರು ಭಾಗವಹಿಸಿ ಚಪ್ಪಾಳೆ ತಟ್ಟಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಮುಂದೆ ಬಸವ ಧರ್ಮ ಮತ್ತು ವಚನಗಳ ಮೇಲೆ ಇಂತಹ ದಾಳಿ ನಡೆದರೆ ಸಹಿಸುವುದಿಲ್ಲ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಡಾ. ನೀರಜ್ ಪಾಟೀಲ್ ಮಾತನಾಡಿ, ಲಂಡನ್‌ನ ಬ್ರಿಟಿಷ್ ಪಾರ್ಲಿಮೆಂಟ್ ಆವರಣದಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪಿಸುವ ಸಂದರ್ಭದಲ್ಲಿ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಜಗತ್ತಿಗೆ ಬಸವಣ್ಣನವರ ಇತಿಹಾಸ ಮತ್ತು ವ್ಯಕ್ತಿತ್ವದ ಅರಿವಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮಹಾಪುರುಷರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಅಧಿಕಾರ ಯಾರಿಗೂ ಇಲ್ಲ ಎಂದು ಹೇಳಿದರು.

ಈ ಲೇಖನ ಮತ್ತು ವಿಡಿಯೋಗಳ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗುವುದು. ಇದರ ಹಿಂದೆ ಇರುವ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಶಾಸಕ ಬಿ.ಆರ್. ಪಾಟೀಲ್ ಕೂಡ ಆಕ್ರೋಶ ವ್ಯಕ್ತಪಡಿಸಿ, ಬಸವಣ್ಣನವರ ವಿಚಾರಧಾರೆಯ ಬೆಳಕು ಜಗತ್ತಿನಾದ್ಯಂತ ಹರಡುತ್ತಿದೆ. ಈ ಬೆಳವಣಿಗೆಯನ್ನು ಸಹಿಸದವರು ಇಂತಹ ಕೃತ್ಯಗಳಿಗೆ ಮುಂದಾಗುತ್ತಿದ್ದಾರೆ ಎಂದು ಟೀಕಿಸಿದರು. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ನೇತೃತ್ವದಲ್ಲಿ ಪೊಲೀಸ್ ದೂರು ದಾಖಲಿಸಿ, ಇದರ ಹಿಂದಿರುವ ಕಾಣದ ಕೈಗಳನ್ನು ಬಯಲಿಗೆಳೆಯಲಾಗುವುದು. ಕ್ಷಮೆ ಕೇಳುವ ನಾಟಕದಿಂದ ಪ್ರಯೋಜನವಿಲ್ಲ, ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

ಬಸವಣ್ಣನವರ ಕುರಿತ ಬರಹ ಮತ್ತು ವಿಡಿಯೋಗಳ ಸುತ್ತ ಎದ್ದಿರುವ ಈ ವಿವಾದ ಇದೀಗ ಕಾನೂನು ಹೋರಾಟದ ಹಂತಕ್ಕೆ ತಲುಪುವ ಸಾಧ್ಯತೆಯಿದ್ದು, ಮುಂದಿನ ಬೆಳವಣಿಗೆಗಳ ಮೇಲೆ ಎಲ್ಲರ ಗಮನ ನೆಟ್ಟಿದೆ.

Related Articles

Back to top button