*ಜಿಲ್ಲೆಯಲ್ಲಿ ಬರದ ಛಾಯೆ, ಡಿಸಿ ನಿವಾಸದಲ್ಲಿ ಡಿಜೆ ಪಾರ್ಟಿ*: *ರೈತನ ಫೋನ್ ಕಾಲ್‌ಗೆ ಜಿಲ್ಲಾಧಿಕಾರಿ ಕಕ್ಕಾಬಿಕ್ಕಿ*

ಪ್ರಗತಿವಾಹಿನಿ ಸುದ್ದಿ: ಒಂದು ಕಡೆ ಮಳೆಯಿಲ್ಲದೆ ಬೆಳೆ ಕಳೆದುಕೊಂಡ ರೈತರ ಸಂಕಷ್ಟ, ಮತ್ತೊಂದೆಡೆ ಜಿಲ್ಲಾಡಳಿತದ ಮುಖ್ಯಸ್ಥರ ನಿವಾಸದಲ್ಲಿ ಸಂಭ್ರಮದ ಪಾರ್ಟಿ. ಈ ವೈರುಧ್ಯ ಇದೀಗ ಗದಗ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಜಿಲ್ಲಾಧಿಕಾರಿಗಳ ಡಿಜೆ ಪಾರ್ಟಿ ವಿಚಾರವಾಗಿ ರೈತರೊಬ್ಬರು ನೇರವಾಗಿ ಫೋನ್ ಮಾಡಿ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಇಬ್ಬರ ನಡುವಿನ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಿಲ್ಲಾಧಿಕಾರಿಗಳ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಗದಗ ಜಿಲ್ಲಾಧಿಕಾರಿ ಸಿಎನ್ ಶ್ರೀಧರ್ ನವೆಂಬರ್ 30ರಂದು ನಿವೃತ್ತರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ನಿವಾಸದಲ್ಲಿ ಬೀಳ್ಕೊಡುಗೆ ಸಂಭ್ರಮದ ಅಂಗವಾಗಿ ಡಿಜೆ ಪಾರ್ಟಿ ಆಯೋಜಿಸಲಾಗಿತ್ತು. ಜಿಲ್ಲೆಯ ರೈತರು ಬರ, ಬೆಳೆಹಾನಿ ಹಾಗೂ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಸಂದರ್ಭದಲ್ಲಿ ನಡೆದ ಈ ಕಾರ್ಯಕ್ರಮ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಡಿಸಿಗೆ ಫೋನ್ ಮಾಡಿ ರೈತನಿಂದ ತರಾಟೆ
ಶಿರಹಟ್ಟಿ ತಾಲೂಕಿನ ಒಡವಿ ಗ್ರಾಮದ ರೈತ ರಾಜೀವ್ ಅವರು ಜಿಲ್ಲಾಧಿಕಾರಿಗೆ ಕರೆ ಮಾಡಿ ಡಿಜೆ ಬುಕ್ ಮಾಡಿರುವುದಾಗಿ ಹೇಳಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿ ಏಕೆ ಎಂದು ಪ್ರಶ್ನಿಸಿದಾಗ, ನಿನ್ನೆ ನಡೆದ ಪಾರ್ಟಿ ಸಂಪೂರ್ಣವಾಗಿಲ್ಲ. ಅದಕ್ಕಾಗಿ ಇಂದು ಡಿಜೆ ತರಿಸುತ್ತೇನೆ ಎಂದು ವ್ಯಂಗ್ಯವಾಗಿ ಉತ್ತರಿಸಿದ್ದಾರೆ.
ಸಂಭಾಷಣೆ ವೇಳೆ ಜಿಲ್ಲೆಯಲ್ಲಿ ರೈತರಿಗೆ ಕುಡಿಯುವ ನೀರಿಲ್ಲ, ದನಕರುಗಳಿಗೆ ಮೇವು ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಡಿಜೆ ಹಾಕಿ ಸಂಭ್ರಮಿಸುವುದು ಸರಿಯೇ ಎಂದು ರಾಜೀವ್ ಪ್ರಶ್ನಿಸಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿ, ಸಮಸ್ಯೆಗಳಿದ್ದರೆ ಸೋಮವಾರ ಬೆಳಗ್ಗೆ 9.30ಕ್ಕೆ ಕಚೇರಿಗೆ ಬಂದು ಮಾತನಾಡುವಂತೆ ತಿಳಿಸಿದ್ದಾರೆ.
ಬೆಳೆ ವಿಮೆ ಹಣದ ಬಗ್ಗೆಯೂ ಪ್ರಶ್ನೆ
ಕರೆ ವೇಳೆ ರೈತ ಬೆಳೆ ವಿಮೆ ಹಣದ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ. ಒಂದು ವರ್ಷದಿಂದ ಮಳೆಯಾಗಿಲ್ಲ, ರೈತರು ಸಂಕಷ್ಟದಲ್ಲಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಸೋಮವಾರ ರೈತರ ಖಾತೆಗೆ ಹಣ ಬರಲಿದೆ ಎಂದು ತಿಳಿಸಿದ್ದಾರೆ.
ಸಂಭಾಷಣೆಯ ಕೊನೆಯಲ್ಲಿ ರೈತ, ಇನ್ನೂ 15 ದಿನ ಅಧಿಕಾರದಲ್ಲಿರುತ್ತೀರಿ, ಈ ಅವಧಿಯಲ್ಲಿ ರೈತರ ಸಮಸ್ಯೆಗಳಿಗೆ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇಬ್ಬರ ನಡುವಿನ ಮಾತಿನ ಚಕಮಕಿ ಇದೀಗ ವೈರಲ್ ಆಗಿದೆ.
ಡಿಸಿ ವರ್ತನೆಗೆ ಸಾರ್ವಜನಿಕರ ಆಕ್ರೋಶ
ರೈತ ರಾಜೀವ್ ಅವರ ಪ್ರಶ್ನೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಬರದ ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳಿಗೆ ಆದ್ಯತೆ ನೀಡಬೇಕಾದ ಜಿಲ್ಲಾಡಳಿತದ ಮುಖ್ಯಸ್ಥರ ನಿವಾಸದಲ್ಲಿ ಡಿಜೆ ಪಾರ್ಟಿ ನಡೆದಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ಗದಗ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.




