*ಬೆಳೆ ಉಳಿಸಲು ಹಾಕಿದ ವಿದ್ಯುತ್ ಬೇಲಿಗೆ ಕಾಡಾನೆ ಸಾವು*: *ತಂದೆ, ಮಗನ ಬಂಧನ*

ಪ್ರಗತಿವಾಹಿನಿ ಸುದ್ದಿ: ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಹಾಕಿದ ಬೇಲಿಯೇ ಕಾಡಾನೆಯೊಂದರ ಜೀವಕ್ಕೆ ಮುಳುವಾಗಿದೆ. ಭತ್ತದ ಗದ್ದೆಯ ಸುತ್ತ ಅಕ್ರಮವಾಗಿ ವಿದ್ಯುತ್ ಹರಿಸಿದ್ದರಿಂದ ಗಂಡಾನೆಯೊಂದು ಸ್ಥಳದಲ್ಲೇ ಮೃತಪಟ್ಟಿದೆ. ಘಟನೆ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆನೆಯ ಸಾವಿಗೆ ಕಾರಣರಾದ ಆರೋಪದ ಮೇಲೆ ತಂದೆ ಮತ್ತು ಮಗನನ್ನು ಬಂಧಿಸಲಾಗಿದೆ.
ಶಿರಸಿ ತಾಲೂಕಿನ ಮಳಲಗಾಂವ್ ಗ್ರಾಮದ ಮಳಲಗಾಂವ್ನ ಶಿವಪ್ಪ ನಾಯ್ಕ (76) ಮತ್ತು ನಾಗರಾಜ್ ನಾಯ್ಕ (40) ಬಂಧಿತರು. ವಿದ್ಯುತ್ ಲೈನ್ನಿಂದ ನೇರವಾಗಿ ಗದ್ದೆಯ ತಂತಿಬೇಲಿಗೆ ಸಂಪರ್ಕ ಕಲ್ಪಿಸಿದ್ದಾಗಿ ಇಬ್ಬರೂ ಒಪ್ಪಿಕೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಡಿಸಿಎಫ್ ಸಂದೀಪ್ ಹಿಂದೂರಾವ್ ಸೂರ್ಯವಂಶಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟ ಗಂಡಾನೆಯ ಮರಣೋತ್ತರ ಪರೀಕ್ಷೆಯನ್ನೂ ನಡೆಸಲಾಗಿದೆ. ಬನವಾಸಿ ವಲಯ ಅರಣ್ಯ ಇಲಾಖೆಯು ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.
ಕಾಡಾನೆಗಳ ಹಾವಳಿಯಿಂದ ರೈತರಿಗೆ ಸಂಕಷ್ಟ
ಮುಂಡಗೋಡು ಮತ್ತು ಶಿರಸಿ ಗಡಿ ಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ಕಾಡಾನೆಗಳ ಹಿಂಡು ಬೀಡುಬಿಟ್ಟಿದೆ. ಹಲವು ಕಡೆ ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಅರಣ್ಯಾಧಿಕಾರಿಗಳು ಆನೆಗಳನ್ನು ಕಾಡಿಗೆ ಅಟ್ಟಲು ಪ್ರಯತ್ನಿಸುತ್ತಿದ್ದರೂ ಅವು ಮತ್ತೆ ಕೃಷಿ ಜಮೀನುಗಳತ್ತ ಬರುತ್ತಿವೆ.



