*ಅನಿರುದ್ಧ್–ಕಾವ್ಯಾ ಮಾರನ್ ಆರತಕ್ಷತೆಗೆ ಪ್ರತ್ಯೇಕವಾಗಿ ಹಾಜರಾದ ಸಿಎಂ ವಿಜಯ್, ಸಂಗೀತಾ*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನ ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಒಂದೇ ವೇದಿಕೆಯಲ್ಲಿ ಸೇರಿದ್ದ ಅದ್ದೂರಿ ಸಮಾರಂಭವೊಂದು ಇದೀಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದೆ. ನವದಂಪತಿಗೆ ಶುಭ ಹಾರೈಸಲು ಬಂದ ಗಣ್ಯರ ನಡುವೆ ಒಂದು ಆಗಮನ ಮಾತ್ರ ಎಲ್ಲರ ಗಮನ ಸೆಳೆದಿದೆ. ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಪತ್ನಿ ಸಂಗೀತಾ ಪ್ರತ್ಯೇಕವಾಗಿ ಕಾಣಿಸಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ಅವರ ಆರತಕ್ಷತೆ ನವೆಂಬರ್ 21ರಂದು ಚೆನ್ನೈನಲ್ಲಿ ನಡೆಯಿತು. ಸೂಪರ್ಸ್ಟಾರ್ ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಸಂಗೀತಾ ಹಳದಿ ಬಣ್ಣದ ಚೂಡಿದಾರ್ ಧರಿಸಿ ಸಮಾರಂಭಕ್ಕೆ ಆಗಮಿಸಿ, ನವದಂಪತಿಗೆ ಶುಭ ಹಾರೈಸಿದರು. ಆದರೆ ವಿಜಯ್ ಮತ್ತು ಸಂಗೀತಾ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ.
ಸಂಗೀತಾ ಅವರಿಗಿಂತ ಮೊದಲೇ ಆಗಮಿಸಿದ್ದ ಮುಖ್ಯಮಂತ್ರಿ ವಿಜಯ್, ಅನಿರುದ್ಧ್ ಮತ್ತು ಕಾವ್ಯಾ ಅವರಿಗೆ ಹೂಗುಚ್ಛ ನೀಡಿ ಶುಭ ಕೋರಿದರು. ಇದೇ ಸಂದರ್ಭದಲ್ಲಿ ರಜನಿಕಾಂತ್ ಮತ್ತು ಎಂ.ಕೆ. ಸ್ಟಾಲಿನ್ ಅವರನ್ನೂ ಭೇಟಿಯಾದರು. ಸಂಗೀತಾ ಅವರ ಪ್ರತ್ಯೇಕ ಆಗಮನದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.
2026ರ ಫೆಬ್ರವರಿಯಲ್ಲಿ ಸಂಗೀತಾ ಅವರು ವಿಶೇಷ ವಿವಾಹ ಕಾಯ್ದೆಯಡಿ ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ಆಗಸ್ಟ್ನಲ್ಲಿ ಅರ್ಜಿಯನ್ನು ಹಿಂಪಡೆದ ಕಾರಣ ಪ್ರಕರಣ ಮುಕ್ತಾಯಗೊಂಡಿತ್ತು. 1998ರಲ್ಲಿ ಲಂಡನ್ನಲ್ಲಿ ವಿಜಯ್ ಅವರೊಂದಿಗೆ ನೋಂದಾಯಿತ ವಿವಾಹವಾಗಿದ್ದ ಸಂಗೀತಾ, 1999ರಲ್ಲಿ ಚೆನ್ನೈನಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದರು. ಈ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ.
ಇನ್ನು ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಅವರ ಸಂಬಂಧದ ಬಗ್ಗೆ 2025ರಿಂದಲೇ ವದಂತಿಗಳು ಹರಿದಾಡುತ್ತಿದ್ದವು. ಆರಂಭದಲ್ಲಿ ಅನಿರುದ್ಧ್ ಈ ಸುದ್ದಿಗಳನ್ನು ತಳ್ಳಿಹಾಕಿದ್ದರೂ, ಇತ್ತೀಚಿನ ದಿನಗಳಲ್ಲಿ ಇಬ್ಬರೂ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೀಗ ಅದ್ದೂರಿ ಆರತಕ್ಷತೆಯೊಂದಿಗೆ ತಮ್ಮ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.




