*ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದಅಪ್ರಾಪ್ತ ಬಾಲಕಿಯ ಭೀಕರ ಕೊಲೆ ಪ್ರಕರಣ*: *ಅಪರಾಧಿಗೆ ಮರಣದಂಡನೆ*

ಪ್ರಗತಿವಾಹಿನಿ ಸುದ್ದಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಸಂಭ್ರಮ, ನಿಶ್ಚಿತಾರ್ಥದ ಸಂತಸದಲ್ಲಿದ್ದ ಬಾಲಕಿಯ ಬದುಕು ಅಂದು ದುರಂತದಲ್ಲಿ ಅಂತ್ಯಗೊಂಡಿತ್ತು. ಕತ್ತು ಸೀಳಿ, ರುಂಡ ಕತ್ತರಿಸಿ ನಡೆದಿದ್ದ ಆ ಭೀಕರ ಕೊಲೆ ಪ್ರಕರಣಕ್ಕೆ ಇದೀಗ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಸುಮಾರು ಎರಡೂವರೆ ವರ್ಷಗಳ ವಿಚಾರಣೆಯ ಬಳಿಕ ಅಪರಾಧಿಗೆ ಮರಣದಂಡನೆ ವಿಧಿಸಲಾಗಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದ ಕುಂಬಾರಗಡಿಗೆಯಲ್ಲಿ 2024ರ ಮೇ 9ರಂದು ಈ ಘಟನೆ ನಡೆದಿತ್ತು. ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯ ಏಕೈಕ ವಿದ್ಯಾರ್ಥಿನಿಯಾಗಿದ್ದ ಮೀನಾ (16), ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಳು. ಶಾಲೆಗೆ ಶೇ.100ರಷ್ಟು ಫಲಿತಾಂಶ ತಂದುಕೊಟ್ಟಿದ್ದ ಆಕೆಗೆ ಅದೇ ದಿನ ಹಮ್ಮಿಯಾಲ ಗ್ರಾಮದ ಪ್ರಕಾಶ್ ಅಲಿಯಾಸ್ ಓಂಕಾರಪ್ಪ (32) ಎಂಬಾತನೊಂದಿಗೆ ನಿಶ್ಚಿತಾರ್ಥವೂ ನಡೆದಿತ್ತು.
ಆದರೆ, ಬಾಲಕಿ ಅಪ್ರಾಪ್ತೆಯಾಗಿರುವ ವಿಚಾರ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದರು. ಬಾಲಕಿಗೆ 18 ವರ್ಷ ತುಂಬಿದ ಬಳಿಕವೇ ವಿವಾಹ ಮಾಡುವಂತೆ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡು ಮದುವೆಯನ್ನು ಮುಂದೂಡಿಸಿದ್ದರು.
ಇದರಿಂದ ಆಕ್ರೋಶಗೊಂಡ ಪ್ರಕಾಶ್ ಸಂಜೆ ಮೀನಾಳ ಮನೆಗೆ ತೆರಳಿ ಪೋಷಕರೊಂದಿಗೆ ಜಗಳವಾಡಿದ್ದಾನೆ. ಮೊದಲು ತಂದೆ ಸುಬ್ರಹ್ಮಣಿ ಅವರನ್ನು ಒದ್ದು ಕೆಡವಿದ್ದಾನೆ. ಬಳಿಕ ತಾಯಿ ಜಾನಕಿ ಮೇಲೂ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ನಂತರ ಮೀನಾಳನ್ನು ಮನೆಯಿಂದ ಸುಮಾರು 300 ಮೀಟರ್ ದೂರಕ್ಕೆ ಎಳೆದೊಯ್ದು ಮಚ್ಚಿನಿಂದ ಕತ್ತು ಕತ್ತರಿಸಿ, ರುಂಡದೊಂದಿಗೆ ಪರಾರಿಯಾಗಿದ್ದ. ಗಾಯಗೊಂಡಿದ್ದ ತಾಯಿ ಜಾನಕಿ ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದರು.
ಪ್ರಕರಣದ ವಿಚಾರಣೆ ವೇಳೆ ಪ್ರಕಾಶ್ನ ಇಬ್ಬರು ಸ್ನೇಹಿತರು ಪ್ರತಿಕೂಲ ಸಾಕ್ಷಿಗಳಾಗಿ ಬದಲಾಗಿದ್ದರು. ಆದರೂ ಘಟನೆಯನ್ನು ಕಣ್ಣಾರೆ ಕಂಡಿದ್ದ ತಾಯಿ ಜಾನಕಿ ಅವರ ಸಾಕ್ಷ್ಯ ಮತ್ತು ಕೊಲೆಗೆ ಬಳಸಿದ ಮಚ್ಚು ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯಗಳಾದವು. ಸಂತ್ರಸ್ತೆ ಮೀನಾ ಕುಟುಂಬದ ಪರವಾಗಿ ಖಾಸಗಿ ವಕೀಲೆಯಾಗಿ ವಾದ ಮಂಡಿಸಿದ್ದ ಮುಂಡಂಡ ದಿವ್ಯಾ ನಂಜಪ್ಪ, ಇದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದ್ದು, ಬಾಲಕಿಯ ಹತ್ಯೆಗೆ ನ್ಯಾಯ ಸಿಗಬೇಕಾದರೆ ಅಪರಾಧಿಗೆ ಮರಣದಂಡನೆ ವಿಧಿಸಬೇಕು ಎಂದು ಪ್ರಬಲವಾಗಿ ವಾದಿಸಿದ್ದರು.
ಇದೀಗ ಪ್ರಕರಣದ ಅಪರಾಧಿ ಓಂಕಾರಪ್ಪ ಅಲಿಯಾಸ್ ಪ್ರಕಾಶ್ಗೆ ಮಡಿಕೇರಿಯ ಮೂರನೇ ಹೆಚ್ಚುವರಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುರೇಂದ್ರ ಅವರು ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ. ಎರಡೂವರೆ ವರ್ಷಗಳ ಬಳಿಕ ಕೃತ್ಯ ಸಾಬೀತಾಗಿದ್ದು, ನ್ಯಾಯಾಲಯದ ತೀರ್ಪಿನಿಂದ ಮೃತ ಬಾಲಕಿಯ ಕುಟುಂಬಕ್ಕೆ ಸಮಾಧಾನ ದೊರೆತಿದೆ. ತ್ವರಿತವಾಗಿ ನ್ಯಾಯ ದೊರಕಿಸಿಕೊಟ್ಟ ನ್ಯಾಯಾಂಗ ವ್ಯವಸ್ಥೆ ಹಾಗೂ ವಕೀಲರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.




