*ಬೆಳಗಾವಿಯಲ್ಲಿ ಆ್ಯಂಟಿ ಸ್ಟ್ಯಾಬಿಂಗ್ ತಂಡದ ಕಾರ್ಯಾಚರಣೆ*: *ಚಾಕು ಸಹಿತ ಓರ್ವನ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದಲ್ಲಿ ಚಾಕು ಇರಿತ ಪ್ರಕರಣಗಳನ್ನು ತಡೆಗಟ್ಟುವ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮಾರ್ಕೆಟ್ ಪೊಲೀಸ್ ಠಾಣೆಯ ಆ್ಯಂಟಿ ಸ್ಟ್ಯಾಬಿಂಗ್ ಸ್ವಾಡ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಹರಿತವಾದ ಚಾಕು ಹೊಂದಿದ್ದ ಓರ್ವನನ್ನು ಬಂಧಿಸಲಾಗಿದೆ.
ನ. 24ರಂದು ಮುಂಜಾಗ್ರತಾ ಕ್ರಮವಾಗಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆ್ಯಂಟಿ ಸ್ಟ್ಯಾಬಿಂಗ್ ಸ್ವಾಡ್ ತಂಡ ಪರಿಶೀಲನೆ ನಡೆಸುತ್ತಿತ್ತು. ಈ ವೇಳೆ ನಗರದ ಕೇಂದ್ರ ಬಸ್ ನಿಲ್ದಾಣದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮಯೂರ ಸುಭಾಷ ರಾವುತ (32), ಮಹಾದ್ವಾರ ರಸ್ತೆ ನಿವಾಸಿ ಎಂಬಾತನನ್ನು ತಪಾಸಣೆಗೊಳಪಡಿಸಿದಾಗ ಆತನ ಬಳಿ ಹರಿತವಾದ ಚಾಕು ಪತ್ತೆಯಾಗಿದೆ.
ಯಾವುದೋ ಅಪರಾಧಿಕ ಕೃತ್ಯ ಎಸಗುವ ಉದ್ದೇಶದಿಂದ ಅಕ್ರಮವಾಗಿ ಚಾಕು ಹೊಂದಿದ್ದ ಆರೋಪದ ಮೇಲೆ ಮಾರ್ಕೆಟ್ ಪೊಲೀಸ್ ಠಾಣೆಯ ಪಿಎಸ್ಐ ಪಿ.ಜಿ. ಗಂಡವ್ವಗೊಳ ಹಾಗೂ ಸಿಬ್ಬಂದಿ ಆರೋಪಿಯನ್ನು ಚಾಕು ಸಮೇತ ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 260/2026ರ ಅಡಿಯಲ್ಲಿ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ 1959ರ ಕಲಂ 27(1) ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 97ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.



