Kannada NewsKarnataka NewsLatestNationalPolitics

*‘ಇದು ಬೆನ್ನಿಗೆ ಚೂರಿ ಹಾಕಿದಂತೆ ಅಲ್ಲವೇ?’*: *ಸ್ಟಾಲಿನ್ ನಿರ್ಧಾರದ ವಿರುದ್ಧ ಪ್ರಕಾಶ್ ರಾಜ್ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರದ ಕ್ಷೇತ್ರ ಮರುವಿಂಗಡಣೆ ಪ್ರಸ್ತಾವನೆ ಈಗ ತಮಿಳುನಾಡಿನ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಈ ವಿಚಾರದಲ್ಲಿ ಡಿಎಂಕೆ ತೆಗೆದುಕೊಂಡಿರುವ ನಿರ್ಧಾರಕ್ಕೆ ನಟ ಪ್ರಕಾಶ್ ರಾಜ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ನಿಲುವನ್ನು ಬದಲಿಸುವಂತೆ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ನೇರವಾಗಿಯೇ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ಈಗಿನ ನಿರ್ಧಾರ ಮುಂದಿನ ಪೀಳಿಗೆಯ ಇತಿಹಾಸದಲ್ಲಿ ಯಾವ ರೀತಿ ದಾಖಲಾಗಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿರುವ ಪ್ರಕಾಶ್ ರಾಜ್, ಕೇಂದ್ರದ ಬಿಜೆಪಿ ಸರ್ಕಾರ ತರಲು ಮುಂದಾಗಿರುವ ಕ್ಷೇತ್ರ ಮರುವಿಂಗಡಣೆ ಮಸೂದೆ ಅತ್ಯಂತ ಅಪಾಯಕಾರಿ ಎಂದು ಹೇಳಿದ್ದಾರೆ.

“ಸ್ಟಾಲಿನ್ ಅವರೇ, ದೇಶದ ಹಿತದೃಷ್ಟಿಯಿಂದ ಈ ಮಸೂದೆಗೆ ನೀಡಿರುವ ನಿಮ್ಮ ಬೆಂಬಲವನ್ನು ಮರುಪರಿಶೀಲಿಸಿ. ಧರ್ಮ, ಭಾಷೆ, ಜನಾಂಗ, ಅಲ್ಪಸಂಖ್ಯಾತರ ಹಿತಾಸಕ್ತಿ ಮತ್ತು ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಅಂಶಗಳು ಈ ಮಸೂದೆಯಲ್ಲಿವೆ” ಎಂದು ಎಚ್ಚರಿಸಿದ್ದಾರೆ.

‘ಇದು ಜನರಿಗೆ ಮಾಡಿದ ದ್ರೋಹವಲ್ಲವೇ?’

ಈ ಹಿಂದೆ ಕ್ಷೇತ್ರ ಮರುವಿಂಗಡಣೆಯ ಅಪಾಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದ ಡಿಎಂಕೆ ಈಗ ಕೋಮುವಾದಿ ಶಕ್ತಿಗಳಿಗೆ ಬೆಂಬಲ ನೀಡುತ್ತಿರುವುದು ಸರಿಯೇ ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದ್ದಾರೆ.

“ಇದು ಬೆನ್ನಿಗೆ ಚೂರಿ ಹಾಕಿದಂತೆ ಅಲ್ಲವೇ? ಸ್ವಾರ್ಥದ ನಿರ್ಧಾರದಿಂದ ಜನರಿಗೆ ದ್ರೋಹ ಮಾಡಿದಂತಾಗುವುದಿಲ್ಲವೇ? ರಾಜ್ಯಗಳ ಹಕ್ಕುಗಳಿಗಾಗಿ ಹೋರಾಡಿ ದೇಶಕ್ಕೆ ಮಾದರಿಯಾಗಿದ್ದ ಡಿಎಂಕೆ ಇಂತಹ ಐತಿಹಾಸಿಕ ತಪ್ಪು ಮಾಡಬಾರದು” ಎಂದು ಹೇಳಿದ್ದಾರೆ.

ಪಕ್ಷ ತನ್ನ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಒತ್ತಾಯಿಸಿರುವ ಅವರು, ಈಗ ತೆಗೆದುಕೊಳ್ಳುವ ನಿರ್ಧಾರ ಮುಂದಿನ ಪೀಳಿಗೆಯ ಭವಿಷ್ಯವನ್ನು ನಿರ್ಧರಿಸಲಿದೆ. ಮುಂದಿನ ಪೀಳಿಗೆ ನಿಮ್ಮನ್ನು ಹೇಗೆ ನೆನಪಿಸಿಕೊಳ್ಳಬೇಕು ಎಂಬುದನ್ನು ನೀವೇ ನಿರ್ಧರಿಸಿ ಎಂದು ಸ್ಟಾಲಿನ್‌ಗೆ ಸಂದೇಶ ನೀಡಿದ್ದಾರೆ.

ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಡಿಎಂಕೆ ಬೆಂಬಲವೇಕೆ?

ಕೇಂದ್ರ ಸರ್ಕಾರದ ಪರಿಷ್ಕೃತ ಕ್ಷೇತ್ರ ಮರುವಿಂಗಡಣೆ ಪ್ರಸ್ತಾವನೆಗೆ ಬೆಂಬಲ ನೀಡುವುದಾಗಿ ಡಿಎಂಕೆ ನವೆಂಬರ್ 28ರಂದು ಘೋಷಿಸಿತ್ತು. ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ನೇತೃತ್ವದಲ್ಲಿ ನಡೆದ ಸಂಸದರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.

ತಮಿಳುನಾಡಿನ ಲೋಕಸಭಾ ಕ್ಷೇತ್ರಗಳ ಪಾಲು ಈಗಿರುವ ಶೇ. 7.18ರಷ್ಟೇ ಮುಂದುವರಿಯಬೇಕು ಮತ್ತು 1971ರ ಜನಗಣತಿಯ ಆಧಾರದ ಮೇಲೆ ರಾಜ್ಯಗಳ ನಡುವಿನ ಸಂಸದೀಯ ಪ್ರಾತಿನಿಧ್ಯದ ಅನುಪಾತವನ್ನು ಮುಂದಿನ 25 ವರ್ಷಗಳವರೆಗೆ ಬದಲಾಯಿಸಬಾರದು ಎಂಬ ಎರಡು ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ ಎಂದು ಡಿಎಂಕೆ ತಿಳಿಸಿದೆ.

ಪರಿಷ್ಕೃತ ಪ್ರಸ್ತಾವನೆಯ ಪ್ರಕಾರ ಲೋಕಸಭೆ ಮತ್ತು ವಿಧಾನಸಭೆಗಳ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸುವ ಉದ್ದೇಶವಿದೆ. ಜೊತೆಗೆ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಜಾರಿಗೊಳಿಸುವ ಪ್ರಸ್ತಾವನೆಯೂ ಇದರಲ್ಲಿದೆ.

ನವೆಂಬರ್ 30ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ಮಸೂದೆಗಳ ಕುರಿತು ಚರ್ಚೆ ನಡೆಯಲಿದೆ. ಇಂತಹ ಸಂದರ್ಭದಲ್ಲಿ ಡಿಎಂಕೆ ಬೆಂಬಲಕ್ಕೆ ಪ್ರಕಾಶ್ ರಾಜ್ ವಿರೋಧ ವ್ಯಕ್ತಪಡಿಸಿರುವುದು ತಮಿಳುನಾಡಿನ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

Related Articles

Back to top button