Kannada NewsKarnataka NewsLatest

*ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ರಾಜ್ಯ ಸರ್ಕಾರ*: *ಬೆಂಗಳೂರಿಗೆ ಬರಲಾಗದ ಶ್ರೀಗಳ ಬಳಿಗೇ ಬಂತು ರಾಜ್ಯೋತ್ಸವ ಪ್ರಶಸ್ತಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಬೆಂಗಳೂರಿಗೆ ಬರಬೇಕೆಂಬ ಸಂಪ್ರದಾಯಕ್ಕೆ ಈ ಬಾರಿ ಸರ್ಕಾರ ಹೊಸ ತಿರುವು ನೀಡಿದೆ. ಪ್ರಶಸ್ತಿ ಪುರಸ್ಕೃತರ ಬಳಿಗೇ ತೆರಳಿ ಗೌರವಿಸುವ ಹೊಸ ಕ್ರಮಕ್ಕೆ ಚಾಲನೆ ನೀಡಲಾಗಿದೆ. ಗದಗ ಜಿಲ್ಲೆಯ ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಶ್ರೀಗಳಿಗೆ ಅವರಿದ್ದಲ್ಲಿಯೇ 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಬೆಂಗಳೂರಿಗೆ ತೆರಳಲು ಸಾಧ್ಯವಾಗದ ಶ್ರೀಗಳಿಗಾಗಿ ಮುಂಡರಗಿಯಲ್ಲೇ ವಿಶೇಷ ಸಮಾರಂಭ ಆಯೋಜಿಸಿ ಸರ್ಕಾರ ಗೌರವ ಸಲ್ಲಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಡೆದ ಈ ಸಮಾರಂಭಕ್ಕೂ ಮುನ್ನ ಮುಂಡರಗಿ ಪಟ್ಟಣದ ಅನ್ನದಾನೀಶ್ವರ ಸಂಸ್ಥಾನಮಠದಿಂದ ಜೆ.ಎ. ಕಾಲೇಜು ಮೈದಾನದವರೆಗೆ ಭವ್ಯ ಮೆರವಣಿಗೆ ನಡೆಯಿತು. ಸಾರೋಟಿನಲ್ಲಿ ಭುವನೇಶ್ವರಿ ದೇವಿಯ ಮೂರ್ತಿ ಹಾಗೂ ಪ್ರಶಸ್ತಿ ಪುರಸ್ಕೃತ ಜಗದ್ಗುರುಗಳ ಮೆರವಣಿಗೆ ಭಕ್ತರ ಗಮನ ಸೆಳೆಯಿತು.

ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾತಂಡಗಳ ಪ್ರದರ್ಶನ ನಡೆಯಿತು. ತಾಳವಾದ್ಯಗಳ ನಿನಾದ, ವಿದ್ಯಾರ್ಥಿಗಳ ಕೈಯಲ್ಲಿ ರಾರಾಜಿಸಿದ ಕನ್ನಡ ಬಾವುಟಗಳು ಸಂಭ್ರಮವನ್ನು ಹೆಚ್ಚಿಸಿದವು. ಮಾರ್ಗದುದ್ದಕ್ಕೂ ಭುವನೇಶ್ವರಿ ದೇವಿಯ ಮೂರ್ತಿ ಹಾಗೂ ಶ್ರೀಗಳ ಮೇಲೆ ಭಕ್ತರು ಪುಷ್ಪವೃಷ್ಟಿ ಗೈದರು. ಮಹಿಳೆಯರು, ವಿದ್ಯಾರ್ಥಿಗಳು, ಗಣ್ಯರು, ನಾಗರಿಕರು ಸೇರಿದಂತೆ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಜಗದ್ಗುರುಗಳಿಗೆ ಗೌರವ ಸಲ್ಲಿಸಿದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ, ಜಗದ್ಗುರು ಅನ್ನದಾನೀಶ್ವರ ಶ್ರೀಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸರ್ಕಾರಕ್ಕೇ ಒಳ್ಳೆಯ ಹೆಸರು ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಬಸವರಾಜ ಬಳ್ಳಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆ, ಶಿಕ್ಷಣದ ಮೂಲಕ ಮೂಡಿಸಿದ ಜಾಗೃತಿ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಶ್ರೀಗಳಿಗೆ ಈ ಪ್ರಶಸ್ತಿ ಘೋಷಿಸಲಾಗಿತ್ತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಹಿಂದುಳಿದ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದೇವೆ. ನಮ್ಮ ಶಿಕ್ಷಣ ಸಂಸ್ಥೆಗಳ ಮೂಲಕ ಬಡ ಮಕ್ಕಳಿಗೆ ಶಿಕ್ಷಣ ನೀಡುವ ಕಾಯಕವನ್ನು ನಿರಂತರವಾಗಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

Related Articles

Back to top button