ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ಒಂದೆಡೆ ಕೊರೊನಾ ಸೋಂಕಿನ ಭಯವಾದರೆ, ಮತ್ತೊಂದೆಡೆ ಒಳಚರಂಡಿ ಕಟ್ಟಿಕೊಂಡು ದುರ್ವಾಸನೆಯಿಂದ ಮನೆಯೊಳಗೆ ಕುಳಿತುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇಲ್ಲಿನ ವಾರ್ಡ್ ನಂಬರ್ ೪೮ರ ರಹವಾಸಿಗಳು ಒದ್ದಾಡುವಂತಾಗಿದೆ.
ಹೌದು, ಕಳೆದ ನಾಲ್ಕು ವರ್ಷಗಳಿಂದಲೂ ಇಲ್ಲಿನ ಡ್ರೈನೇಜ್ ಬಗ್ಗೆ ಯಾರೂ ತಿರುಗಿ ನೋಡದ ಕಾರಣ ಇದೀಗ ಡ್ರೈನೇಜ್ ತುಂಬಿಕೊಂಡಿದ್ದು, ಶೌಚಾಲಯದ ನೀರು ಕಟ್ಟಿಕೊಂಡು ದುರ್ವಾಸನೆಯಲ್ಲಿ ದಿನದೂಡುವಂತಾಗಿದೆ.
ಹಾಗಾಗಿ ಇದರಿಂದ ಮನನೊಂದ ಇಲ್ಲಿನ ಶಿವಾಜಿನಗರ ಮೊದಲ ಮುಖ್ಯರಸ್ತೆ ನಾಲ್ಕನೇ ಕ್ರಾಸ್‌ನ ನಿವಾಸಿಗಳು ಬುಧವಾರ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಡ್ರೈನೇಜ್ ಮೇಲೆ ಕೆಲವರು ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಿರುವ ಕಾರಣ ಈ ಡ್ರೈನೇಜ್ ಸಮಸ್ಯೆ ಉದ್ಭವವಾಗಿದೆ. ಇನ್ನು ಈ ಬಗ್ಗೆ ಸಂಬಂಧಪಟ್ಟವರು ತಕ್ಷಣ ಕ್ರಮಕ್ಕೆ ಮುಂದಾಗಬೇಕೆಂದು ಅವರು ಮನವಿ ಮಾಡಿದ್ದಾರೆ.
ಈ ಭಾಗದ ನಗರಸೇವಕರಲ್ಲಿ ಈ ಹಿಂದೆ ಹಲವು ಬಾರಿ ಈ ಬಗ್ಗೆ ಮನವಿ ಮಾಡಿಕೊಂಡಿದ್ದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ಇದೀಗ ಸಮಸ್ಯೆ ಉಲ್ಭಣಗೊಂಡಿದ್ದು, ಮನೆಯೊಳಗೆ ಕುಳಿತುಕೊಳ್ಳಲು ಸಾಧ್ಯವಾಗದಷ್ಟು ದುರ್ವಾಸನೆ ಬರುತ್ತಿದ್ದು, ತಕ್ಷಣವೇ ನಮ್ಮ ನೋವಿಗೆ ಸ್ಪಂದಿಸಬೇಕೆಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಶಿವಾಜಿನಗರದ ರಹವಾಸಿಗಳಾದ ಅರ್ಚನಾ ಪಾಟೀಲ, ಆರತಿ, ಶಶಿಕಲಾ ರಾಜಾರಾಮ ಭೋಗಣ್, ರೇಣುಕಾ ಗೋವಿಂದ ಜಾಧವ್, ಸಂಧ್ಯಾಪಾಟೀಲ, ಮನೀಷ್ ಮಾವ್ಲತ್‌ಕರ್ ಮತ್ತಿತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ