Latest
ಜಮೀನಿನಲ್ಲಿ ಪತ್ತೆಯಾಯ್ತು ನವಜಾತ ಶಿಶು

ಪ್ರಗತಿವಾಹಿನಿ ಸುದ್ದಿ; ರಾಯಚೂರು: ನವಜಾತ ಹೆಣ್ಣು ಶಿಶುವನ್ನು ಜಮೀನಿನಲ್ಲಿ ಬಿಸಾಕಿ ಹೋಗಿರುವ ಘಟನೆ ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ.
ಆಗತಾನೇ ಹುಟ್ಟಿದ ಒಂದು ದಿನದ ಮಗುವನ್ನು ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಬಿಸಾಡಿದ್ದಾರೆ ಅದೃಷ್ಟವಶಾತ್ ಶಿಶು ಪ್ರಾಣಾಪಾಯದಿಂದ ಪಾರಾಗಿದೆ.
ಹೆಣ್ಣು ಮಗು ಎಂಬ ಕಾರಣಕ್ಕೆ ಶಿಶುವನ್ನು ಹೀಗೆ ಬಿಸಾಡಿರಬಹುದೆಂಬ ಅನಮಾನ ವ್ಯಕ್ತವಾಗಿದೆ. ಗ್ರಾಮದ ಕುಮಾರಗೌಡ ಎಂಬುವವರ ಜಮೀನಿನಲ್ಲಿ ಈ ಹೆಣ್ಣು ಶಿಶು ಪತ್ತೆಯಾಗಿದೆ. ಹಸಿವಿನಿಂದ ಅಳುತ್ತಿದ್ದ ಮಗುವನ್ನು ಬಹಿರ್ದೆಸೆಗೆ ತೆರಳಿದ ಮಲ್ಲಿಕಾರ್ಜುನ ಹಾಗೂ ಕಿರಣ್ ಎಂಬುವವರು ಗಮನಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಮಗುವನ್ನು ರಕ್ಷಿಸಿದ್ದಾರೆ. ಮಾಹಿತಿ ಮೇರೆಗೆ ಬಂದ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಶಿಶು ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶಿಶುವನ್ನು ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.




