ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಕೊರೋನಾ ಆರಂಭವಾದಾಗಿನಿಂದಲೂ ಶಾಲೆಗಳನ್ನು ನಡೆಸುವ ಕುರಿತು ನಡೆದಿರುವ ಗೊಂದಲ ಇನ್ನೂ ಮುಂದುವರಿದಿದೆ. ಈಗ ಆರೋಗ್ಯ ಇಲಾಖೆ ಕೂಡ ಈ ವಿಷಯದಲ್ಲಿ ಮಧ್ಯಪ್ರವೇಶಿಸಿದೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನಾ ಅಟ್ಟಹಾಸ ಶಾಲೆಗಳು ಆರಂಭವಾದಲ್ಲಿ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಕ್ಕಳು ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳುವುದು ಅಸಾಧ್ಯದ ಮಾತು. ಹಾಗಾಗಿ ಒಂದು ಮಗುವಿಗೆ ಸೋಂಕು ತಗುಲಿದರೆ ಅದು ಶರವೇಗದಲ್ಲಿ ಇಡೀ ಶಾಲೆಗೆ ಹರಡುವುದರಲ್ಲಿ ಎರಡು ಮಾತಿಲ್ಲ. ಜೊತೆಗೆ ಶಾಲೆ ಹೋಗುವ ಮಗುವಿನ ಪಾಲಕರು ನಿತ್ಯವೂ ಆತಂಕದಲ್ಲೇ ದಿನದೂಡುವಂತಾಗುತ್ತದೆ.
ಈ ಹಿನ್ನೆಲೆಯಲ್ಲಿ ಶಾಲೆಗಳನ್ನು ಸಧ್ಯಕ್ಕೆ ಆರಂಭಿಸಬಾರದು. ಇದೊಂದು ಶೈಕ್ಷಣಿಕ ವರ್ಷ ಹಾಗೆಯೇ ಕಳೆದುಹೋದರೂ ಚಿಂತೆಯಿಲ್ಲ, ಮಕ್ಕಳ ಜೀವ ಮುಖ್ಯ ಎನ್ನುವ ಅಭಿಪ್ರಾಯ ಪಾಲಕರ ವಲಯದಲ್ಲಿದೆ. ಆದರೆ ಸಿಬ್ಬಂದಿಗೆ ಸಂಬಳ ಪಾವತಿಸಲಾಗದೆ ಖಾಸಗಿ ಶಾಲೆಗಳು ತೀವ್ರ ಪರದಾಟ ನಡೆಸುತ್ತಿದ್ದು, ಅವು ಶಾಲೆ ಆರಂಭಕ್ಕೆ ಸರಕಾರದ ಮೇಲೆ ಒತ್ತಡ ಹೇರುತ್ತಿವೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ನಿನ್ನ ಆರೋಗ್ಯ ಇಲಾಖೆ ಈ ಸಂಬಂಧ ಅವಲೋಕನ ನಡೆಸಲು ಸಭೆ ನಡೆಸಿದೆ. ಆದರೆ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಶಿಕ್ಷಣ ಸಚಿವ ಸುರೇಶ ಕುಮಾರ ಕೊರೋನಾ ಸೋಂಕಿಗೆ ತುತ್ತಾಗಿರುವುದರಿಂದ ಯಾವುದೇ ಸಭೆ ನಡೆಸಲು ಸಾಧ್ಯವಿಲ್ಲ.
ಕೇಂದ್ರ ಸರಕಾರ ಶಾಲೆಗಳನ್ನು ಆರಂಭಿಸಲು ಅನುಮತಿ ನೀಡಿದೆ. ಇದು ಅನುಮತಿಯೇ ವಿನಃ ಆದೇಶವಲ್ಲ. ರಾಜ್ಯಗಳು ತಮ್ಮಲ್ಲಿಯ ಸ್ಥಿತಿಗತಿಗಳನ್ನು ನೋಡಿ ನಿರ್ಧಾರ ತೆಗೆದುಕೊಳ್ಳಬಹುದು. ಸಧ್ಯದ ಪರಿಸ್ಥಿತಿ ನೋಡಿದರೆ ಅಕ್ಟೋಬರ್ ಅಂತ್ಯದವರೆಗೂ ಶಾಲೆಗಳು ಆರಂಭವಾಗುವ ಸಾಧ್ಯತೆ ಕಾಣಿಸುತ್ತಿಲ್ಲ. ಆದರೆ ನವೆಂಬರ್ 1ರಿಂದ ಆರಂಭಿಸಬೇಕೋ ಬೇಡವೋ ಎನ್ನುವ ನಿರ್ಧಾರಕ್ಕೆ ಬರಲಾಗುತ್ತಿಲ್ಲ. ಶಿಕ್ಷಣ ಇಲಾಖೆ ಈ ವಿಷಯದಲ್ಲಿ ಗೊಂದಲದಲ್ಲಿಯೇ ಇದೆ.
ವಿಪರ್ಯಾಸವೆಂದರೆ ಶಿಕ್ಷಕರು ಮಾತ್ರ ಕೊರೋನಾಪಾಯವನ್ನೂ ಲೆಕ್ಕಿಸದೆ ಜೂನ್ ತಿಂಗಳಿನಿಂದಲೂ ಶಾಲೆಗೆ ಹೋಗುತ್ತಿದ್ದಾರೆ. ವಿದ್ಯಾಗಮ ಸೇರಿದಂತೆ ಇಲಾಖೆಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಆದರೂ ಅವರಿಗೆ ಅಕ್ಟೋಬರ್ ಮಧ್ಯಂತರ ರಜೆಯನ್ನು ರದ್ದುಗೊಳಿಸಲಾಗಿದೆ. ವಿದ್ಯಾರ್ಥಿಗಳು ಬಾರದಿರುವುದರಿಂದ ಶಿಕ್ಷಕರಿಗೆ ಮಧ್ಯಂತರ ರಜೆ ನೀಡುವುದರಿಂದ ಯಾವುದೇ ನಷ್ಟವಿಲ್ಲ ಎನ್ನುವುದು ಶಿಕ್ಷಕರ ಸಂಘಗಳ ಅಭಿಪ್ರಾಯ.
ಒಟ್ಟಾರೆ ಶಿಕ್ಷಣ ಇಲಾಖೆ ಈ ವರ್ಷ ಯಾವುದೇ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗದೆ ತೀವ್ರ ಗೊಂದಲದಲ್ಲಿರುವುದಂತೂ ನಿಜ.
(ಪ್ರತಿಕ್ರಿಯೆಗಳಿಗೆ ಸ್ವಾಗತ [email protected])
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ