ಪ್ರಗತಿವಾಹಿನಿ ಸುದ್ದಿ; ಕಾರವಾರ: ರಾಷ್ಟ್ರೀಯ ಹೆದ್ದಾರಿ 66ರ ಸ್ಥಗಿತಗೊಂಡ ಕಾಮಗಾರಿಯ ಸಂಪೂರ್ಣ ವಿವರವನ್ನು ಜಿಲ್ಲಾಡಳಿತಕ್ಕೆ ಆದಷ್ಟು ಬೇಗ ಒಪ್ಪಿಸಬೇಕು ಎಂದು ಸಂಸದ ಅನಂತ್ಕುಮಾರ್ ಹೆಗಡೆ ಹೇಳಿದರು.
ಶನಿವಾರ ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಐ ಆರ್ ಬಿ ಅಧಿಕಾರಿಗಳು ಹಾಗೂ ಕರಾವಳಿ ಭಾಗದ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಕುಂಠಿತವಾಗಿರುವ ಕುರಿತು ಹಾಗೂ ಸ್ಥಗಿತಗೊಂಡ ಪ್ರದೇಶದ ಬಗ್ಗೆ ಸಂಪೂರ್ಣ ವಿವರ ಕಲೆಹಾಕಿ ಜಿಲ್ಲಾಡಳಿತಕ್ಕೆ ಒಪ್ಪಿಸ ಬೇಕು, ಕಳೆದ ಎರಡು ವರ್ಷದಿಂದ ತಾಂತ್ರಿಕ ಕಾರಣಗಳನ್ನು ನೀಡುತ್ತಾ ಬಂದಿದ್ದು, ಇನ್ನು ಮುಂದೆ ಜಿಲ್ಲಾಡಳಿತದ ಆಡಳಿತಾತ್ಮಕ ಸಹಾಯವನ್ನು ಪಡೆದು ಸ್ಥಗಿತಗೊಂಡಂತಹ ಕಾಮಗಾರಿಯನ್ನು ಆದಷ್ಟು ಬೇಗ ಪ್ರಾರಂಭಿಸಬೇಕು ಎಂದರು.
ಹೊನ್ನಾವರ ಬಂದರು ಬೈಪಾಸ್ ವಿಚಾರವಾಗಿ ಎನ್ಎಚ್ಎ ಅಧಿಕಾರಿಗಳು ನೀಡಿದ ನೀಲ ನಕ್ಷೆಯನ್ನು ದೀರ್ಘವಾಗಿ ಪರಿಶೀಲಿಸಿದ ನಂತರ, ನಕ್ಷೆಯಲ್ಲಿ ಬರುವ ಸಮುದ್ರತೀರದ ಭಾಗದಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವಂತೆ ಹಾಗೂ ಒಂದು ವಾರದಲ್ಲಿ ತನಿಖಾ ವರದಿಯನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಬೇಕು ಎಂದು ಅಧಿಕಾರಿಗಳಿಗೆ ಸಂಸದ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಈಗಾಗಲೇ 40 ಬೋರ್ವೆಲ್ ಗಳು ಹಾಳಾಗಿವೆ. ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದ್ದು ಪುನಃ ಬೋರ್ವೆಲ್ ಗಳನ್ನು ಪರ್ಯಾಯ ಸ್ಥಳಗಳಲ್ಲಿ ಮಾಡಿಸಿಕೊಡಬೇಕು ಎಂದು ಭಟ್ಕಳ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ್ ಮನವಿ ಮಾಡಿದರು.
ಹೆದ್ದಾರಿಯಲ್ಲಿ ನಿರ್ಮಾಣ ಮಾಡಿರುವ 53 ಬಸ್ ಸ್ಟಾಪ್ ಗಳು ವ್ಯವಸ್ಥಿತವಾಗಿಲ್ಲ, ಗಾಳಿ ಬಿಸಿಲು ಮಳೆಯಿಂದ ಪ್ರಯಾಣಿಕರಿಗೆರಕ್ಷಣೆಯೂ ಇಲ್ಲವಾದಕಾರಣ ಸುಸಜ್ಜಿತವಾದ ಬಸ್ ಸ್ಟಾಂಡ್ ಗಳನ್ನು ನಿರ್ಮಿಸಿ ಕೊಡಬೇಕು ಎಂದರು.
ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕ ದಿನಕರ್ ಶೆಟ್ಟಿ ಅವರು ಮಾತನಾಡಿ ಹೆದ್ದಾರಿ ಮಧ್ಯದಲ್ಲಿ ನೀಡುವ ಸ್ಟ್ರೀಟ್ ಲೈಟ್ ವ್ಯವಸ್ಥೆಯನ್ನು ಕುಮಟಾ ನಗರ ಭಾಗದಲ್ಲಿ ನೀಡಬೇಕು ಎಂದರು.
ಉಳಿದಂತೆ ಸಭೆಯಲ್ಲಿಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ, ಕಾರವಾರ ಉಪವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ರಾಜ್ಯದಲ್ಲೂ ವಿಸ್ಟಾಡೋಮ್ ರೈಲುಗಳಲ್ಲಿ ಓಡಾಡಲು ಅವಕಾಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ