ಓಟ್ ಮಾಡೋಣ ಬನ್ನಿ
ಸ್ವಾತಂತ್ರ್ಯ ಸಿಕ್ಕು ೭೦ ವರ್ಷಗಳೇ ಕಳೆದವು. ಆದರೆ ಚುನಾವಣೆ ನಡೆಸುವಾಗ ಮತದಾನ ಕಡ್ಡಾಯ ಮಾಡದಿರುವುದು ಖೇದದ ವಿಷಯ. ಪ್ರತಿಶತ ೩೦ ರಿಂದ ೬೦ ರಷ್ಟು ಸರಾಸರಿ ಮತದಾನ ವಾಗುವುದನ್ನು ಕಾಣುತ್ತ ಬಂದಿದ್ದೇವೆ. ಪ್ರತಿಶತ ೩೦ ರಷ್ಟು ಮತದಾರರು ೭೦ರಷ್ಟು ಜನರ ಮೇಲೆ ಅಧಿಕಾರ ಚಲಾಯಿಸುತ್ತಾರೆ. ರಜೆ ಇದ್ದರೂ ಮತಗಟ್ಟೆಗಳಿಗೆ ಹೋಗಿ ಮತಹಾಕಲಾರದಷ್ಟು ಆಸಕ್ತಿ ಕಳೆದುಕೊಂಡಿದ್ದೇವೆ. ಯಾರು ಆಯ್ಕೆಯಾದರೇನು, ನಮಗೆ ದುಡಿಯುವುದು ತಪ್ಪುವುದೇ ಎನ್ನುವ ಮನೋಧರ್ಮ ನಮ್ಮದಾಗಿದೆ. ಚುನಾವಣೆಗಳಲ್ಲಿ ಅಭ್ಯರ್ಥಿಗಳು ಮತದಾರರನ್ನು ಮತಗಟ್ಟೆಗಳಿಗೆ ಕರೆದೊಯ್ಯಲು ವಾಹನ ಒದಗಿಸುವ ವ್ಯವಸ್ಥೆ ಮಾಡುತ್ತಾರೆ. ಅವರು ಬಂದು ಕರೆದುಕೊಂಡು ಹೋಗಿ, ಅಲ್ಲಿಯೆ ’ಚಹಾ-ಪಾನಿ’ ವ್ಯವಸ್ಥೆ ಮಾಡಿ ಮರಳಿ ಮನೆಗೆ ತಂದು ಬಿಟ್ಟರೆ ಮಾತ್ರ ನಾವು ಮತಗಟ್ಟೆಗೆ ಹೋಗುವವರು. ಇದೆಲ್ಲ ಬದಲಾಗಬೇಕು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿದರೆ ಚುನಾವಣೆಯ ಫಲಿತಾಂಶ ಬೇರೇನೆ ಬರಬಹುದು. ಮತದಾರರಿದ್ದಂತೆ ಜನಪ್ರತಿನಿಧಿಗಳು, ಜನಪ್ರತಿನಿಧಿಗಳಿದ್ದಂತೆ ಸರಕಾರ, ಸರಕಾರವಿದ್ದಂತೆ ದೇಶ!
ದೇಶ ಬದಲಾಗಬೇಕೆ ಹಾಗಿದ್ದರೆ ಕಡ್ಡಾಯವಾಗಿ ಮತಹಾಕಿ ಬನ್ನಿ ಅದೇ ನಿಜವಾದ ನಿಮ್ಮ ದೇಶ ಸೇವೆ.
ಮತದಾರ ಮಾರಾಟಗೊಳ್ಳುವ ವಸ್ತುವಾಗಬಾರದು: ಮುಂದಿನ ತಿಂಗಳು ಜರುಗಲಿರುವ ಲೋಕಸಭೆ-ಚುನಾವಣೆ ನವಭಾರತದ ನಿರ್ಮಾಣಕ್ಕೆ ಭದ್ರ ಬುನಾದಿಯಾಗಲು ಸಾಧ್ಯವಿದೆ. ಆದರೆ ಮತದಾರರು ೫೦೦ ರೂ ಅಥವಾ ೧,೦೦೦ ರೂ ಗಳಿಗೆ ಮಾರಾಟಗೊಳ್ಳುವ ವಸ್ತುವಾಗಬಾರದು. ಒಂದು ಪ್ರಾಣಿಯನ್ನು ಕೊಂಡುಕೊಳ್ಳಬೇಕೆಂದರೂ ೨,೦೦೦ ೩,೦೦೦ ರೂ ತರಬೇಕಾಗುತ್ತದೆ. ಆ ಪ್ರಾಣಿಗಳಿಗಿಂತಲು ಕಡಿಮೆ ಬೆಲೆಗೆ ಮಾರಿಕೊಳ್ಳದೆ ಮತದಾರ ಈಗಲಾದರೂ ಪ್ರಬುದ್ಧತೆ ಮೆರೆಯಬೇಕು. ಮತದಾರರು ಅಭ್ಯರ್ಥಿಗಳು ನೀಡುವ ಆಶೆ, ಆಮಿಷಗಳಿಗೆ ಧಿಕ್ಕಾರ ಹೇಳಬೇಕು. ಮತದಾನ ದಿನ ಊಟ-ನಿದ್ರೆ ಎಲ್ಲ ಬಿಟ್ಟು ಮತಗಟ್ಟೆಗೆ ಹೋಗಿ ಮತ ಚಲಾಯಿಸಬೇಕು. ಜಾತಿ, ಮತ, ಪಂಥ ನೋಡದೆ ದೇಶದ ಸುರಕ್ಷತೆ ಹಾಗೂ ಅಭಿವೃದ್ದಿಗೆ ಶ್ರಮಿಸಬಲ್ಲ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ನಗರ ಪ್ರದೇಶಗಳಲ್ಲಿ ವಿದ್ಯಾವಂತ ಮತದಾರರೇ ಮತದಾನಕ್ಕೆ ಬರುವದಿಲ್ಲ. ಇದರಿಂದ ಚುನಾವಣಾ ಫಲಿತಾಂಶಗಳು ಉಲ್ಟಾ-ಪಲ್ಟಾ ಆಗಬಹುದು, ಬೇಕಾದವರಿಗೆ ಓಟ್ ಹಾಕಿ, ಆದರೆ ಓಟ್ ಹಾಕುವುದನ್ನು ಬಿಡಬೇಡಿ. ದುಡ್ಡಿಗೆ ಕೈ ಒಡ್ಡಬೇಡಿ ದಡ್ಡರಿಗೆ ಮತ ಹಾಕಬೇಡಿ.
-ಪ್ರಿ.ಬಿ.ಎಸ್.ಗವಿಮಠ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ