Latest

ಹಳಿಗಳ ಮೇಲೆ ಚಲಿಸುವ ಬದುಕು

ನೀತಾ ರಾವ್           

ಭಾರತೀಯ ರೈಲ್ವೆಜಾಲ ವಿಶ್ವದಲ್ಲಿಯೇ ದೊಡ್ಡದಂತೆ. ಭಾರತದ ಮಟ್ಟಿಗೆ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿದ ಸಂಸ್ಥೆಯೂ ಅದೇ. ನಮ್ಮ ವೈವಿಧ್ಯಮಯ ದೇಶದ ಬೆಟ್ಟ-ಕಣಿವೆಗಳಲ್ಲಿ, ಬಯಲು-ಸುರಂಗಗಳಲ್ಲಿ, ಉತ್ತರದಿಂದ ದಕ್ಷಿಣದ ತುದಿಯವರೆಗೂ, ಪೂರ್ವದಿಂದ ಪಶ್ಚಿಮ ಘಟ್ಟಗಳ ವರೆಗೂ  ದಣಿವಿಲ್ಲದೇ ಧಾವಿಸುವ ಸಾವಿರಾರು ರೈಲುಗಳು ತಮ್ಮೊಳಗೊಂದು ಹೊಸ ಜಗತ್ತನ್ನೇ ಸೃಷ್ಟಿ ಮಾಡುವ ಸೋಜಿಗವನ್ನು ಮಾತ್ರ ನಾವು ನೋಡಿ ಅನುಭವಿಸಿಯೇ ತಿಳಿಯಬೇಕು. ಮತ್ತದಕ್ಕಾಗಿ ಬೇರೆ ಬೇರೆ ಸ್ಟೇಷನಗಳಿಂದ ಬೇರೆ ಬೇರೆ ಊರುಗಳಿಗೆ ತಿರುಗಾಟ ಮಾಡಬೇಕು. ಬೆಳಗಾವಿಯಲ್ಲಿ ಸಾಧಾರಣವಾಗಿ ಶಾಂತವಾಗಿಯೇ ಮಲಗಿರುವ ಸ್ಟೇಷನ್ನಿಗೆ ಕೆಲವೊಂದು ಟ್ರೇನ್ ಗಳು ಬರುವ ಸಮಯದಲ್ಲಷ್ಟೇ ಜೀವ ಬಂದುಬಿಡುತ್ತದೆ. ಮತ್ತದು ಒಮ್ಮೆಲೇ ಗಿಜಿಗಿಜಿಗುಡಲು ಪ್ರಾರಂಭಿಸುತ್ತದೆ. ಯಾಕೆಂದರೆ ರೈಲು ಹತ್ತುವವರು ಒಬ್ಬರಾದರೆ ಕಳಿಸಲು ಬಂದವರೇ ನಾಲ್ಕೈದು ಮಂದಿ ಇರುತ್ತಾರೆ.  ಹಾಗಾಗಿಯೇ ಹುದ್ಲಿಯವರಾದ  ವಿ.ಎಂ. ಇನಾಮದಾರರು ತಮ್ಮ ಕಾದಂಬರಿಯೊಂದರಲ್ಲಿ ಬೆಳಗಾವಿಯ ರೈಲ್ವೇ ಸ್ಟೇಷನ್ ನಲ್ಲಿ ಕಿಚ್ಚು ಹಾರುವವರು ಒಬ್ಬರಾದರೆ ಹರಹರ ಅನ್ನುವವರು ಹನ್ನೊಂದು ಮಂದಿ ಎಂದು ಸೊಗಸಾಗಿ ವರ್ಣಿಸಿದ್ದಾರೆ.

          ಇನ್ನು ರೈಲು ಹತ್ತಿ ಕುಳಿತ ಮೇಲೆ ನಾವು ಬೇರೊಂದು ಲೋಕಕ್ಕೇ ಹೋಗಿರುತ್ತೇವೆ. ದೆಹಲಿಗೆ ಹೋಗುವವರಿಗಂತೂ ಪೂರ್ತಿ ಮೂವತ್ತಾರು ಗಂಟೆಗಳ ಪ್ರಯಾಣ. ನಡುನಡುವೆ ಬೇಕಾದರೆ ಬೇರೆ ರೈಲಿನ ಕ್ರಾಸಿಂಗ್ ಎಂದು ಮತ್ತಷ್ಟು ಡಿಲೆ. ಅಂತೂ ಹಝರತ್ ನಿಝಾಮುದ್ದೀನ್ ಸ್ಟೇಷನ್ನಿಗೆ ನಾವು ಹೋಗಿ ಮುಟ್ಟುವ ತನಕ ಬೆಳಗಾವಿಯಿಂದ ನಾನಾ ಭಾಷೆಗಳನ್ನಾಡುವ, ನಾನಾ ವೇಷ-ಭೂಷಣಗಳ , ಬಗೆಬಗೆಯ ತಿಂಡಿಗಳನ್ನು ತಿಂದು, ಒಮ್ಮೊಮ್ಮೆ ಸಹಪ್ರಯಾಣಿಕರಿಗೂ ಕೊಡುವ ಜನ. ರಾತ್ರಿ ಮಲಗಿ, ಹಗಲು ಎದ್ದು ಕೂತು, ಒಳಗಿನದರ ಜೊತೆಗೆ ಹೊರಗಿನ ದೃಶ್ಯಗಳನ್ನು ನೋಡುತ್ತ, ಕತ್ತಲೆಯ ಟನೆಲ್ಲಗಳನ್ನು ದಾಟುತ್ತ, ಮಧ್ಯಪ್ರದೇಶ ಬರುತ್ತಲೂ ಬಂಗಾರದ ಬಣ್ಣದ ಬೆಟ್ಟಗಳ ಕಣ್ಣತುಂಬಿಕೊಳ್ಳುತ್ತ, ಥಮ್ಸಪ್ ಬೆಟ್ಟವನ್ನು ನೋಡಿ ಆಶ್ಚರ್ಯ ಪಡುತ್ತ ಸುಸ್ತಾಗಿ, ಬೆವರಾಗಿ ದೆಹಲಿ ಮುಟ್ಟಿದಾಗ ಹುಶ್ ಅಂತ ಉದ್ಗಾರ ಬಿಡುವೆವಾದರೂ ಅದು ತೋರಿಸಿದ ಭಾರತ ದರ್ಶನದ ಅನುಭವಗಳ ಹಗುರವಾದೊಂದು ಚೀಲವನ್ನೂ ಹೊತ್ತು ಹೊರಬೀಳುವುದು ಸುಳ್ಲಲ್ಲ.

        ಸುಮಾರು ಇಪ್ಪತ್ಮೂರು ವರ್ಷಗಳ ಹಿಂದೆ ಕೆಲಸದ ಸಲುವಾಗಿ ರೈಲ್ವೆ ಪಾಸು ಮಾಡಿಸಿ ನಾನು ದಿನಾಲೂ ಹುಬ್ಬಳ್ಳಿಯಿಂದ ಗದಗಿಗೆ ಹೋಗಿಬಂದು ಮಾಡುತ್ತಿದ್ದೆ. ಹೀಗೆ ದಿನಾಲೂ ಓಡಾಡಲು ರೈಲು ಅನುಕೂಲವಾಗಿತ್ತು. ದಿನಾಲೂ ಬೆಳಿಗ್ಗೆ ಏಳು ಗಂಟೆಗೆ ಮನೆ ಬಿಟ್ಟರೆ ಏಳೂವರೆಗೆ ರೇಲ್ವೇ ನಿಲ್ದಾಣ ತಲುಪಿ ಟ್ರೇನು ಹಿಡಿಯುವುದು. ನಂತರ ಸುಮಾರು ಒಂದೂವರೆ ತಾಸು ಟ್ರೇನಿನಲ್ಲಿ ಕುಳಿತು ಗದಗ ತಲುಪಿ ಮತ್ತೆ ಅಲ್ಲಿಂದ ಹತ್ತು ನಿಮಿಷ ನಡೆದು ಬ್ಯಾಂಕು ತಲುಪುವುದು. ಈ ಪ್ರಯಾಣ ಮಾತ್ರ ತುಂಬ ಮಜವಾಗಿರುತ್ತಿತ್ತು. ರೈಲಿನ ಒಡಲಿನಲ್ಲಿ ಅನೇಕ ಸುದ್ದಿ-ಸಂಗತಿಗಳು, ಪಿಸುಮಾತುಗಳು, ಜೋರು ನಗೆ ಗದ್ದಲಗಳು ಹುಟ್ಟಿಕೊಂಡು ಹರಡಿಕೊಳ್ಳುವ ಬಗೆಯೇ ರೋಚಕ. ದಿನಾಲೂ ಧಾರವಾಡ ಮತ್ತು ಹುಬ್ಬಳ್ಳಿಯಿಂದ ಗದಗಿಗೆ ಕೆಲಸಕ್ಕಾಗಿ ಓಡಾಡುವ ನೂರಾರು ಸರಕಾರಿ, ಬ್ಯಾಂಕ್, ಜೀವವಿಮಾ, ರೈಲ್ವೆ ಉದ್ಯೋಗಿಗಳು ಇರುತ್ತಿದ್ದರು. ಈಗಷ್ಟೇ ಕೆಲಸಕ್ಕೆ ಸೇರಿದ ಯುವಕ-ಯುವತಿಯರಿಂದ ಹಿಡಿದು ಇನ್ನೇನು ಒಂದೆರಡು ತಿಂಗಳಲ್ಲಿ ನಿವೃತ್ತರಾಗುವ ವಯಸ್ಕರೂ ಇರುತ್ತಿದ್ದರು. ದಿನಾಲೂ ಹೀಗೆ ತಿರುಗಾಟ ಮಾಡುವುದರಿಂದ ಅವರಲ್ಲಿಯೇ ಸಮಾನ ಮನಸ್ಕರ ಅಥವಾ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಬೇರೆ ಬೇರೆ ಗುಂಪುಗಳಾಗಿರುತ್ತಿದ್ದವು. ಕೆಲವರು ರೈಲು ಹತ್ತಿದ ತಕ್ಷಣ ಎದುರುಬದುರಾಗಿ ಕುಳಿತು ಇಸ್ಪೀಟಾಟ ಆರಂಭಿಸಿಬಿಡುತ್ತಿದ್ದರು. ಇಡೀ ಬೋಗಿಯೊಂದನ್ನು ಆವರಿಸಿಕೊಂಡು ಅಂತ್ಯಾಕ್ಷರಿ ಹಾಡಿಕೊಂಡು ಮೈಮರೆಯುತ್ತಿದ್ದ ದೊಡ್ಡ ಗುಂಪೇ ಇತ್ತು. ಇನ್ನು ಕೆಲವರು ಕೇವಲ ಹರಟೆ ಹೊಡೆಯುತ್ತ ರಾಜಕೀಯ-ಸಾಮಾಜಿಕ ವಿಶ್ಲೇಷಣೆ ಮಾಡುವವರು. ಒಬ್ಬ ಯುವತಿ ಯಾವಾಗಲೂ ಯುವಕನೊಬ್ಬನಿಗಾಗಿ ಕಾಯುವ ನೋಟ ಸುಂದರವಾಗಿರುತ್ತಿತ್ತು. ಅವಳ ಬಗ್ಗೆ ಸಾಕಷ್ಟು ಊಹಾಪೋಹಗಳೂ ಹುಟ್ಟಿಕೊಂಡಿದ್ದವು. ಇನ್ನು ಕೆಲವು ಕಡಿಮೆ ಮಾತಿನ ಹುಡುಗಿಯರು ಪುಸ್ತಕವೊಂದನ್ನು ಮುಖಕ್ಕೆ ಅಡ್ಡ ಹಿಡಿದು ಕುಳಿತುಬಿಟ್ಟರೆಂದರೆ ಆಗೊಮ್ಮೆ ಈಗೊಮ್ಮೆ ಮಾತ್ರ ಪುಸ್ತಕದಿಂದ ಹೊರಗೆ ಹಣಿಕಿ ಮುಖದರ್ಶನ ಮಾಡಿಸುತ್ತಿದ್ದರು. ಈ ಮಧ್ಯೆ ನನ್ನ ಪರಿಸ್ಥಿತಿ ಸ್ವಲ್ಪ ನಾಜೂಕಾಗಿತ್ತು. ನಾನು ಒಡಲಲ್ಲಿ ನನ್ನ ಮಗುವನ್ನೂ ಹೊತ್ತು ಈ ತಿರುಗಾಟ ಮಾಡಬೇಕಾಗಿತ್ತು. ಹಾಗಾಗಿ ಸಹಪ್ರಯಾಣಿಕರಿಗೆಲ್ಲ ನನ್ನ ಬಗ್ಗೆ ವಿಪರೀತ ಕಾಳಜಿ. ನಾನು ರೈಲು ಹತ್ತಿದ ತಕ್ಷಣ ನನಗೆ ಸರಿಯಾದ ಸೀಟೊಂದರ ಅರೇಂಜಮೆಂಟ್ ಮಾಡಲು ಅವರೆಲ್ಲ ಒದ್ದಾಡುತ್ತಿದ್ದರು. ಬಹಳಷ್ಟು ಸಲ ಉದ್ದಕ್ಕೆ ಇಡೀ ಸೀಟನ್ನೇ ಬಿಟ್ಟುಕೊಟ್ಟು “ನೀವು ಸ್ವಲ್ಪ ಕಾಲು ನೀಡಿ ನಿದ್ದೆ ಮಾಡಿಬಿಡಿ” ಎಂದು ಕಾಳಜಿಯಿಂದ ಹೇಳುತ್ತಿದ್ದ,  ಈಗ ಒಬ್ಬೇಒಬ್ಬರ ಮುಖದ ನೆನಪೂ ಉಳಿಯದ ಆ ಅನಾಮಿಕ ಸಹಪ್ರಯಾಣಿಕರ ಋಣವನ್ನು ನಾನೆಂದೂ  ತೀರಿಸಲು ಸಾಧ್ಯವಿಲ್ಲ.

ಇಂಥದ್ದರಲ್ಲಿ ಒಂದು ಗುಂಪಿಗೆ ನಾಯಕಿಯಂತಿದ್ದ ಹಿರಿಯ ಮಹಿಳೆಯೊಬ್ಬರಿಗೆ ಅವರ ಮನೆ ಇರುವ ಧಾರವಾಡಕ್ಕೇ ವರ್ಗವಾಯಿತು. ಅವರಿಗೆ ಆ ಬಗ್ಗೆ ಸಂತೋಷವಾದರೂ ರೈಲಿನ ಸ್ನೇಹಿತರೆಲ್ಲರ ಜೊತೆ ಬಿಟ್ಟು ಹೋಗುವುದೆಂದು ಅತಿಶಯ ಬೇಜಾರು ಮಾಡಿಕೊಂಡರು. ರೈಲಿನಲ್ಲಿಯೇ ಅವರ ಬೀಳ್ಕೊಡುಗೆ ಸಮಾರಂಭವೂ ಜರುಗಿತು.

            ಮುಂಬೈನ ಲೋಕಲ್ ಗಳ ಸಂಭ್ರಮವು ನೀವು ಅದರಲ್ಲಿ ಹತ್ತಿ ಇಳಿದ ಮೇಲೆಯೇ ನಿಮ್ಮ ಮೈಮನಗಳನ್ನು ಕುಲುಕಿಸುವುದು. ಸಾಕಷ್ಟು ಸಾಹಿತಿಗಳ ಪುಟಗಳನ್ನು ತುಂಬಿಸಲು, ಚಿತ್ರ ನಿರ್ದೇಶಕರ ಕಥೆಗಳನ್ನು ರಂಗೇರಿಸಲು ಈ ಲೋಕಲ್ ಈಗಾಗಲೇ ಒದಗಿಬಂದದ್ದು ಗತಕಾಲದ ವೈಭವ ಹೌದಾದರೂ ಇವತ್ತು ನೀವು ಹೋಗಿ ಅದನ್ನು ಏರಿದರೂ ಅನೇಕ ಕಥೆಗಳನ್ನು ಹೇಳುವಷ್ಟು ಮುಗಿಯದ ಭಂಡಾರ ಅದರ ಒಡಲೊಳಗೆ ಇದೆ, ಅಥವಾ ಅಂಥ ಕಥೆಗಳನ್ನು ದಿನದಿನವೂ ಓಡಾಡುವ ಅದರ ಪ್ರವಾಸಿಗರು ಮರುಪೂರಣ ಮಾಡುತ್ತಲೇ ಇರುತ್ತಾರೆ. ಇದೀಗ ಈ ಲೋಕಲ್ ಟ್ರೇನುಗಳು ತುಸು ಆಧುನಿಕಗೊಂಡು ಪ್ರತಿ ಸ್ಟೇಷನ್ ಬರುವುದಕ್ಕೂ ಮುನ್ನ ಅನೌನ್ಸ್ ಮಾಡುವ, ಸಾಗುವ ಸಾಲುಗಳನ್ನು ತೋರಿಸುವ ಡಿಜಿಟಲ್ ವ್ಯವಸ್ಥೆಯನ್ನು ಮಾಡಿದೆಯಾದರೂ, ಹೊಟ್ಟೆಪಡಿಗಾಗಿ ದುಡಿಯುತ್ತಿದ್ದ ಮಧ್ಯಮ ವರ್ಗದ ಹೆಣ್ಣು ಮಕ್ಕಳೀಗ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಒಳ್ಳೊಳ್ಳೆ ಕೆಲಸಗಳನ್ನು ನಿಭಾಯಿಸುತ್ತಿರುವುದೂ ಸತ್ಯವಾದರೂ, ಅವರನ್ನೂ ಇವರನ್ನೂ ಹೊತ್ತುಸಾಗುತ್ತಿರುವ ಲೋಕಲಗಳ ಧಡಧಡ ಶಬ್ದ, ಝುಕುಬುಕು ರಾಗ ಬದಲಾಗಿಲ್ಲ.

        ಗಂಟೆಗಳಿಗೇ ಅಷ್ಟೇನೂ ಕಿಮ್ಮತ್ತು ಕೊಡದ ನಮ್ಮಂಥವರಿಗೆ ಅಲ್ಲಿನ ಟ್ರೇನ್ ಟೈಮಗಳನ್ನು ನೋಡಿ  ಆಶ್ಚರ್ಯದಿಂದ ಹುಬ್ಬೇರುತ್ತವೆ. ಎಂಟು ಗಂಟೆ ಏಳು ನಿಮಿಷ, ಹತ್ತು ಗಂಟೆ ನಲವತ್ತೆರಡು ನಿಮಿಷ ಹೀಗೆ ನಮಗೆ ಆಡ್ ಎನಿಸುವ ನಿಮಿಷಗಳ ಲೆಕ್ಕಾಚಾರದಲ್ಲಿ ಇಲೆಕ್ಟ್ರಿಕ್ ಟ್ರೇನುಗಳು ಒಂದರ ಹಿಂದೊಂದರಂತೆ ಬಂದುಹೋಗಿ ಮಾಡುವ ಕೌತುಕವನ್ನು ನೋಡಲೆಂದೇ ಮುಂಬೈ ನೋಡಲು ಹೋಗುವ ಜನ ರೈಲು ಏರುತ್ತಾರೆ. ಹೆಣ್ಣುಮಕ್ಕಳಿಗಾಗಿಯೇ ಇರುವ ಪ್ರತ್ಯೇಕ ಬೋಗಿಗಳ ನೂಕುನುಗ್ಗಲಿನಲ್ಲಿ ಹೇಗೆ ಹುಷಾರಾಗಿ ಹತ್ತಬೇಕೆಂಬುದು ಅಲ್ಲಿನ ಉದ್ಯೋಗಸ್ತ ಸ್ತ್ರೀಯರಿಗೆ ಅಭ್ಯಾಸವಾಗಿ ಹೋಗಿರುತ್ತದೆ. ಹತ್ತಿದ ತಕ್ಷಣ ಕುಳಿತವರ ಹತ್ತಿರ ಸರಿದು ಅವರು ಯಾವ ಸ್ಟೇಷನ್ನಿಗೆ ಇಳಿಯುತ್ತಾರೆ ಎನ್ನುವುದನ್ನು ಕೇಳಿಕೊಂಡು ತಮ್ಮ ಸೀಟನ್ನು ಅನ್-ಆಫಿಷಿಯಲ್ಲಾಗಿ ಕಾಯ್ದಿರಿಸಿಕೊಳ್ಳುತ್ತಾರೆ.  ಕುಳಿತವರೂ  ನಿಂತವರನ್ನು ತಾವೇ ಕರೆದು ನಾನು ಮುಂದಿನ ಸ್ಟೇಷನ್ನಿಗೆ ಇಳಿಯುತ್ತೇನೆ, ಇಲ್ಲೇ ನಿಂತಿರಿ ಎಂದು ಹೇಳಿ ಸಹಕರಿಸುತ್ತಾರೆ. ಯಾವ ಸ್ಟೇಷನ್ ನ ಪ್ಲ್ಯಾಟಫಾರ್ಮ ಯಾವ ಕಡೆ ಬರುತ್ತದೆ ( ಈಸ್ಟ್ ಅಥವಾ ವೆಸ್ಟ್) ಎನ್ನುವುದೂ ಅವರಿಗೆ ಯಾವಾಗಲೂ ಜ್ಞಾಪಕದಲ್ಲಿರುತ್ತದೆ. ಹಾಗಾಗಿಯೇ  ತಮ್ಮ ಸ್ಟೇಷನ್  ಬರುವುದಕ್ಕೂ ಮೊದಲೇ ಆ ಕಡೆಯ ಡೋರಿಗೆ ಹೋಗಿ ನಿಂತುಬಿಡುತ್ತಾರೆ. ಈ ಗಡಿಬಿಡಿಯ ಚಟುವಟಿಕೆಗೆ ಯುವತಿಯರು, ಆಂಟಿಗಳು ಎಂಬ ಭೇದವೇ ಇಲ್ಲ. ಎಲ್ಲರೂ ಅಷ್ಟೊಂದು ಚುರುಕು. ಇನ್ನು ಅವರು ಕುಳಿತಲ್ಲಿಯೇ ಮಾಡಿಮುಗಿಸುವ ವ್ಯಾಪಾರದ ಗಮ್ಮತ್ತೂ ಮಜವೇ! ಯಾವುದೋ ನಿಲ್ದಾಣದಲ್ಲಿ ಗುಂಡನೇಯ ವರ್ತುಲಕ್ಕೆ ಸಿಕ್ಕಿಸಿದ ಹತ್ತಾರು ಬಗೆಯ ದಿನನಿತ್ಯದ ಸಾಮಾನುಗಳನ್ನು ಹಿಡಿದು ಹೆಣ್ಣುಮಗಳೊಬ್ಬಳು ಎಂಟ್ರಿ ಕೊಡುತ್ತಾಳೆ. ನಿಂತವರು ಆಧಾರಕ್ಕೆ ಹಿಡಿದುಕೊಳ್ಳಲು ಇರುವ ಹ್ಯಾಂಡಲ್ ಬಾರಕ್ಕೆ ತನ್ನ ಈ ವರ್ತುಲದ ಕೊಕ್ಕೆಯನ್ನು ಸಿಕ್ಕಿಸುತ್ತಾಳೆ. ಇದರಲ್ಲಿ ಹೆಣ್ಣುಮಕ್ಕಳು, ಕೆಲಸದ ವೇಳೆ ಸಾಕು ಎಂದು ಹಾಕಿಕೊಳ್ಳುವ ಮೆಟಲ್, ಕಟ್ಟಿಗೆ ಮುಂತಾದವುಗಳಿಂದ ತಯಾರಿಸಿದ ಹಳದಿ, ಹಸಿರು, ಕೆಂಪು ಬಣ್ಣದ ವಿವಿಧ ಸೈಜಿನ ಬಳೆಗಳು, ಪ್ರಯಾಣದಲ್ಲಿ ಗಾಳಿಗೆ ಸಿಕ್ಕಿ ಸೊಕ್ಕಿ ಅಂಕೆಯಿಲ್ಲದೇ ಹಾರಾಡುವ ಕೂದಲಿನ ಸ್ವಾತಂತ್ರ್ಯವನ್ನು ಮೊಟಕು ಗೊಳಿಸಲು ತಯಾರಾಗಿರುವ  ಹೇರ್ ಪಿನ್ನುಗಳು, ರಬ್ಬರ್ ಬ್ಯಾಂಡುಗಳು, ಟ್ರೇನಿನ ಗದ್ದಲದಲ್ಲಿ ಸೀರೆಯ ಸೆರಗನ್ನು ಜೋಪಾನವಾಗಿಡುವ ಸೇಫ್ಟಿ ಪಿನ್ನುಗಳು, ಏನುಂಟು, ಏನಿಲ್ಲ! ಅವುಗಳಲ್ಲಿ ಒಂದೆರಡು ಸ್ಯಾಂಪಲ್ ಗಳನ್ನಷ್ಟೇ ಕೈಯಲ್ಲಿ ಹಿಡಿದು ಅವಳು ಬೋಗಿಯೆಲ್ಲ ತಿರುಗಾಡುತ್ತಾಳೆ. ನೇತುಹಾಕಿದ ತನ್ನ ಉಳಿದ ಸಾಮಾನುಗಳ ಚಿಂತೆ ಅವಳಿಗೆ ಬಿಲಕುಲ್ ಇಲ್ಲ. ಅಷ್ಟೊಂದು ನಂಬಿಕೆ ಅವಳಿಗೆ ದಿನನಿತ್ಯದ ಈ ಪ್ರಯಾಣಿಕ ಬಂಧುಗಳಲ್ಲಿ, ಮತ್ತವರು ಇರುವುದೂ ಹಾಗೆಯೇ. ಅತ್ಯಂತ ನಂಬಿಕೆಗೆ ಅರ್ಹರು. ಅವಳ ಪತಿ ಇನ್ಯಾವ ಟ್ರೇನ್ ಏರಿ ಇನ್ನೇನು ಮಾರಾಟ ಮಾಡುತ್ತಿರುವನೋ? ಅವಳ ಮಕ್ಕಳು ಅದ್ಯಾವ ಕೊಳೆಗೇರಿಯ ಕಿರಿದಾದ ಓಣಿಗಳಲ್ಲಿ ಆಟವಾಡುತ್ತಿರುವರೋ! ಇವಳಂತೂ ನಿಶ್ಚಿಂತೆಯಿಂದ ತನ್ನ ವ್ಯಾಪಾರದ ಕಡೆಗೇ ಗಮನವಿಟ್ಟಿರುತ್ತಾಳೆ. ಹಾಗೆ ಅವಳಿಗೆ ದಿನಾಲೂ ಒಂದಿಷ್ಟು ವ್ಯಾಪಾರವನ್ನು ಕೊಟ್ಟೇಕೊಡುತ್ತಾರೆ ಈ ದುಡಿಯುವ ಹೆಂಗಸರು. ಹಿಂದೆ ಇಪ್ಪತು-ಇಪ್ಪತೈದು ವರ್ಷಗಳ ಹಿಂದೆ ಹೆಣ್ಣುಮಕ್ಕಳು ಸೀಟು ಸಿಕ್ಕ ತಕ್ಷಣ ತಾವು ಕೊಂಡು ತಂದ ತರಕಾರಿಗಳನ್ನು ಟ್ರೇನಿನಲ್ಲಿಯೇ ಹೆಚ್ಚಿಟ್ಟುಕೊಂಡುಬಿಡುತ್ತಿದ್ದರು. ಕೆಲವರು ಸ್ವೆಟರ್   ಹೆಣೆಯುತ್ತ ಕುಳಿತುಕೊಳ್ಳುತ್ತಿದ್ದರು. ಈಗಿನ ಹುಡಿಗಿಯರು ಎರಡೂ ಕಿವಿಗಳಿಗೆ ಇಯರ್ ಫೋನ್ ಹಾಕಿಕೊಂಡು ಹಾಡು ಕೇಳುತ್ತಿರುತ್ತಾರೆ, ಇಲ್ಲವೇ ಮೆದು ದನಿಯಲ್ಲಿ ಬಾಯ್ ಫ್ರೆಂಡ್ ಜೊತೆಗೆ ಸರಸ ಸಂಭಾ಼ಣೆಗೆ ಇಳಿದಿರುತ್ತಾರೆ. ಆಗಲೂ ಈಗಲೂ ಈ ಹೆಣ್ಣುಮಕ್ಕಳು ಸದಾ ಬೀಝಿ, ಚಟುವಟಿಕೆಯವರು.   

        ಹೀಗೆ ಸದಾ ಎಲ್ಲಿಂದಲೋ ಬಂದು ಯಾವುದೋ ಗಮ್ಯವನ್ನು ಸೇರಲು ತವಕಿಸುವ ಈ ಉಗಿಬಂಡಿಗಳ ಆಕರ್ಷಣೆ ಚಿಕ್ಕದಲ್ಲ. ಇಡೀ ದೇಶದ ಜನತೆಯನ್ನು ಎಲ್ಲಿಂದ ಎಲ್ಲಿಗೆ ಬೇಕಾದರೂ ಸಾಗಿಸಲು ರೆಡಿಯಿರುವ, ಬಡವ-ಬಲ್ಲಿದರೆಲ್ಲರ ಅಚ್ಚುಮೆಚ್ಚಿನ ಈ ಭಾರತೀಯ ರೈಲುಗಳು ನಮ್ಮ ದೇಶದ ಜೀವನರೇಖೆ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ, ಅಲ್ವೇ?

                      

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button