ರಾಜ್ಯದಲ್ಲಿ ಒಟ್ಟು 52 ಸಾವಿರ ಕೋಟಿ ಬಂಡವಾಳ ಹೂಡಿಕೆ ಒಪ್ಪಂದಕ್ಕೆ ಸಹಿ; 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಮುಗಿಸಿ ವಾಪಸ್ ಆಗಿರುವ ಸಿಎಂ ಬಸವರಾಜ್ ಬೊಮ್ಮಾಯಿ, ದಾವೋಸ್ ನಲ್ಲಿ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಜಾಗತಿಕ ಉದ್ದಿಮೆದಾರರನ್ನು ಭೇಟಿ ಕುರಿತಾಗಿ ವಿವರಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಬೊಮ್ಮಾಯಿ, ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆ – 2022ರ ಮೇ 23 ರಿಂದ 26 ರವರೆಗೆ ಯಶಸ್ವಿಯಾಗಿ ಜರುಗಿತು. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಹಲವು ಜಾಗತಿಕ ಉದ್ದಿಮೆದಾರರನ್ನು ಭೇಟಿಯಾಗಿ ಮಾತುಕತೆ ನಡೆಸಲಾಯಿತು. ರಾಜ್ಯದಲ್ಲಿ ಒಟ್ಟು 52 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲು ಎರಡು ಸಂಸ್ಥೆಗಳೊಂದಿಗೆ ಸರ್ಕಾರ ಒಪ್ಪಂದಕ್ಕೆ ಸಹಿ ಮಾಡಿದೆ ಎಂದು ತಿಳಿಸಿದರು.
ಕರ್ನಾಟಕ ಬಂಡವಾಳ ಆಕರ್ಷಣೆಯಲ್ಲಿ ಮುಂಚೂಣಿಯಲ್ಲಿದ್ದು, ವಿಶ್ವ ಆರ್ಥಿಕ ಶೃಂಗ ಸಭೆ ಫಲಪ್ರದವಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯಕ್ಕೆ ಹರಿದು ಬರುತ್ತಿರುವ ಬಹುದೊಡ್ಡ ಮೊತ್ತದ ಬಂಡವಾಳ ಇದಾಗಿದೆ. ಈ ಹೂಡಿಕೆಗಳು ವಿಶ್ವದ ದೊಡ್ಡ ಕಂಪನಿಗಳು ಕರ್ನಾಟಕ ರಾಜ್ಯದ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸದ ದ್ಯೋತಕವಾಗಿದೆ. ರೆನ್ಯೂ ಪವರ್ ಪ್ರೈ.ಲಿ. ಕಂಪೆನಿಯು 50 ಸಾವಿರ ಕೋಟಿ ರೂ.ಗಳ ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ 7 ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ, ಬ್ಯಾಟರಿ ಸ್ಟೋರೇಜ್, ಗ್ರೀನ್ ಹೈಡ್ರೋಜನ್ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. 30 ಸಾವಿರಕ್ಕೂ ಹೆಚ್ಚು ಉದ್ಯೋಗವನ್ನು ನೀಡಲಿದೆ.
ಎರಡು ಹಂತಗಳಲ್ಲಿ ಅನುಷ್ಟಾನಗೊಳ್ಳುವ ಯೋಜನೆ ಇದಾಗಿದ್ದು, ಮೊದಲ ಹಂತದಲ್ಲಿ ಈಗಾಗಲೇ ಜಾರಿಯಲ್ಲಿರುವ ಯೋಜನೆಗಳಿಗೆ 11900 ಕೋಟಿ ರೂ.ಗಳ ಬಂಡವಾಳ ಹೂಡಿ, ಮುಂದಿನ 2 ವರ್ಷಗಳಲ್ಲಿ ಯೋಜನೆಗಳು ಕಾರ್ಯಾರಂಭ ಮಾಡಲಿವೆ. ಎರಡನೇ ಹಂತದಲ್ಲಿ ನವೀಕರಿಸಬಹುದಾದ ಇಂಧನ ಹಾಗೂ ಗ್ರೀನ್ ಹೈಡ್ರೋಜನ್ ಘಟಕಗಳನ್ನು ಮುಂದಿನ 5 ವರ್ಗಗಳಲ್ಲಿ ಸ್ಥಾಪಿಸಲು 37500 ಕೋಟಿ ರೂ.ಗಳ ಬಂಡವಾಳವನ್ನು ಹೂಡಿಕೆ ಮಾಡಲಾಗುತ್ತದೆ.
ಲುಲು ಗ್ರೂಪ್ ರಾಜ್ಯದಲ್ಲಿ ಸುಮಾರು 2 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದ್ದು,4 ಶಾಪಿಂಗ್ ಮಾಲ್ ಮತ್ತು ಹೈಪರ್ ಮಾರ್ಕೆಟ್ ಹಾಗೂ ರಫ್ತು ಆಧಾರಿತ ಆಹಾರ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಆಗಲಿವೆ. ಈ ಒಪ್ಪಂದಗಳು ಕೈಗಾರಿಕೆ ಹಾಗೂ ಇಂಧನ ವಲಯದ ಅಭಿವೃದ್ಧಿಗೆ ಪೂರಕವಾಗಿದ್ದು, 40 ಸಾವಿರಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಗೆ ಅವಕಾಶವಾಗಲಿದೆ.
ಇದಲ್ಲದೇ ಹಲವಾರು ಕಂಪನಿಗಳು ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿದೆ. ಜ್ಯೂಬಿಲಿಯಂಟ್ ಗ್ರೂಪ್, ಹಿಟಾಚಿ ಎನರ್ಜಿ, ಸೀಮೆನ್ಸ್, ಅಬ್ ಇನ್ಬೇವ್, ದಸ್ಸಾಲ್ಟ್ ಸಿಸ್ಟಂ, ನಸ್ಟ್ಲೆ, ಆರ್ಸೆಲಾರ್ ಮಿತ್ತಲ್ ಸಂಸ್ಥೆ ಭಾರ್ತಿ ಎಂಟರ್ ಪ್ರೈಸಸ್, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಂಡವಾಳ ಹೂಡುವ ಭರವಸೆ ನೀಡಿವೆ.
ಜ್ಯೂಬಿಲಿಯಂಟ್ ಗ್ರೂಪ್:- ಜ್ಯೂಬಿಲಿಯಂಟ್ ಫುಡ್ ವರ್ಕ್ಸ್ ನೂತನ ಕೇಂದ್ರೀಕೃತ ಪಾಕಶಾಲೆ ಪ್ರಾರಂಭಿಸಲು ಹಾಗೂ ಜ್ಯೂಬಿಲಿಯಂಟ್ ಬಯೋಸಿಸ್ ರಾಜ್ಯ ದೇವನಹಳ್ಳಿಯಲ್ಲಿ ಎಕರೆ ಪ್ರದೇಶದಲ್ಲಿ ನೂತನವಾಗಿ ಆರ್ ಅಂಡ್ ಡಿ ಸೆಂಟರ್ ಸ್ಥಾಪಿಸಲು ತೀರ್ಮಾನಿಸಿದೆ. ಪ್ರಸ್ತುತ ರಾಜ್ಯದಲ್ಲಿ 9,000 ಜನರು ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಕರ್ನಾಟಕದಲ್ಲಿ ಫಾರ್ಮಾ ಮತ್ತು ಎಫ್.ಎಂ.ಸಿ.ಜಿ ವಲಯದಲ್ಲಿ ಹೂಡಿಕೆಯ ಅವಕಾಶಗಳ ಅನ್ವೇಷಣೆ ಹಾಗೂ ಧಾರವಾಡದಲ್ಲಿ ಎಫ್.ಎಂ.ಸಿ.ಜಿ ವಲಯದಲ್ಲಿ ಹೂಡಿಕೆಗೆ ವಿಶೇಷ ಪ್ರೋತ್ಸಾಹಕ ಪ್ಯಾಕೇಜ್‌ನ್ನು ಸಹ ಪರಿಗಣಿಸಬಹುದಾಗಿದೆ ಎಂದು ತಿಳಿಸಲಾಗಿದೆ.
ಹಿಟಾಚಿ ಎನರ್ಜಿ:- ಇ.ವಿ.ಚಾಜಿಂಗ್‌ಗಾಗಿ ಮೂಲಸೌಕರ್ಯ ಘಟಕ ಸ್ಥಾಪನೆ, ನವೀಕರಿಸಬಹುದಾದ ಇಂಧನ ಮತ್ತು ಡಿಜಿಟಲೀಕರಣದ ಅವಕಾಶಗಳ ಬಗ್ಗೆ ಆಸಕ್ತಿ ತೋರಿದೆ. ಸೀಮೆನ್ಸ್ ಹೆಲ್ದೀನಿಯರ್ಸ್:- ಬೆಂಗಳೂರಿನಲ್ಲಿ ಮ್ಯಾಗ್ನೆಟಿಕ್ ಇಮೇಜಿಂಗ್ ಮತ್ತು ಡಯಾಗ್ನಾಸ್ಟಿಕ್ಸ್ ಕೇಂದ್ರೀಕೃತವಾದ ಆರ್‌ಅಂಡ್‌ಡಿ ಆರೋಗ್ಯ ಯೋಜನೆಯನ್ನು 1600 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಿದೆ.
ಆಧುನಿಕ ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಸಂಬಂಧಿಸಿದಂತೆ ವಿಶೇಷ ಪ್ರೋತ್ಸಾಹಕಗಳನ್ನು ಕರ್ನಾಟಕ ಸರ್ಕಾರ ಒದಗಿಸುವ ಭರವಸೆ ನೀಡಿದೆ. ಬಿಯಾಂಡ್ ಬೆಂಗಳೂರು ಯೋಜನೆಯಡಿ ತುಮಕೂರು, ಹುಬ್ಬಳ್ಳಿ-ಧಾರವಾಡ ಮತ್ತು ಮೈಸೂರು ನಗರಗಳಲ್ಲಿಯೂ ಹೂಡಿಕೆ ಮಾಡುವ ಕುರಿತು ರಾಜ್ಯ ಸರ್ಕಾರ ಸೀಮನ್ಸ್ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿತು.
ಅಬ್ ಇನ್ಬೇವ್ ಸಂಸ್ಥೆ:- ಕರ್ನಾಟಕದಲ್ಲಿ ಬೇಡಿಕೆಯಲ್ಲಿರುವ ನಾನ್ ಆಲ್ಕೋಹಾಲಿಕ್ ಪಾನೀಯಗಳ ಉತ್ಪಾದನಾ ಘಟಕವನ್ನು ೫೦ ಕೋಟಿ ರೂ. ಬಂಡವಾಳದಲ್ಲಿ ಸ್ಥಾಪಿಸಲು ಯೋಜಿಸಿದೆ. ನೆಸ್ಟ್ಲೆ ಸಂಸ್ಥೆ:- ನಂಜನಗೂಡಿನಲ್ಲಿ ನೆಸ್ಟ್ಲೆ ಇನ್ಸೆಂಟ್ ಕಾಫಿ ಕಾರ್ಖಾನೆಯನ್ನು ನವೀಕರಣ ಹಾಗೂ ವಿಸ್ತರಣಾ ಕಾರ್ಯಕ್ಕೆ 700 ಕೋಟಿ ರೂ.ಗಳ ಬಂಡವಾಳ ಹೂಡಲು ಸಂಸ್ಥೆ ಮುಂದಾಗಿದೆ.
ದಸ್ಸಾಲ್ಸ್ ಸಿಸ್ಟಮ್ಸ್:- ರಾಜ್ಯದಲ್ಲಿ ವಿದ್ಯುತ್ ವಾಹನಗಳು ಮತ್ತು ಕೇಂದ್ರ ಉತ್ಪಾದನಾ ತಾಂತ್ರಿಕ ಸಂಸ್ಥೆಯ ಸಹಯೋಗದಲ್ಲಿ ಆಧುನಿಕ ಉತ್ಪಾದನೆ ಕ್ಷೇತ್ರ, ವಿದ್ಯಾರ್ಥಿಗಳಿಗೆ ಕೈಗಾರಿಕೆ 4.0, ಡಿಜಿಟಲ್ ತಂತ್ರಜ್ಞಾನದ ಬಗ್ಗೆ ತರಬೇತಿ, ರಾಜ್ಯದ ಸ್ಮಾರ್ಟ್‌ಸಿಟಿ ಯೋಜನೆಗಳಲ್ಲಿ ಒಟ್ಟು ೩೦೦ ಕೋಟಿ ರೂ.ಗಳ ಹೂಡಿಕೆ ಮಾಡಲು ಸಂಸ್ಥೆ ಉತ್ಸುಕತೆ ತೋರಿದೆ.
Schneider Electric ಸಂಸ್ಥೆ ಈಗಾಗಲೇ ಅತ್ತಿಬೆಲೆಯಲ್ಲಿದ್ದು, 5-6 ಸೇವೆಗಳನ್ನು ನೀಡುವ ದೊಡ್ಡ ಘಟಕವನ್ನು ಜಿಗಣಿಯಲ್ಲಿ 300 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲು ಯೋಜಿಸಿದೆ. ಆರ್ಸೆಲಾರ್ ಮಿತ್ತಲ್ ಸಂಸ್ಥೆ:- ಸೌರ ಹಾಗೂ ಪವನಶಕ್ತಿಯ ಹೈಬ್ರಿಡ್ ಯೋಜನೆಗೆ 6,000 ಕೋಟಿ ರೂ.ಗಳ ಬಂಡವಾಳವನ್ನು ಕರ್ನಾಟಕದಲ್ಲಿ ಹೂಡಲು ಆಸಕ್ತಿ ತೋರಿದೆ. ಭಾರ್ತಿ ಎಂಟರ್ ಪ್ರೈಸಸ್:- ರಾಜ್ಯದಲ್ಲಿ ಇನ್ನೊಂದು ಮೆಗಾ ಡಾಟಾ ಸೆಂಟರ್ ಸ್ಥಾಪಿಸಲು ಆಸಕ್ತಿ ವಹಿಸಿದ್ದು, ರಾಜ್ಯ ಸರ್ಕಾರವು ಎಲ್ಲ ಅಗತ್ಯ ಬೆಂಬಲ ನೀಡುವುದಾಗಿ ತಿಳಿಸಲಾಗಿದೆ.
ಇದಲ್ಲದೆ ಅದಾನಿ ಗ್ರೂಪ್, ದಾಲ್ಮಿಯಾ ಸಿಮೆಂಟ್, ಜಾನ್ಸ್‌ನ್ ಕಂಟ್ರೋಲ್ಸ್, ಹನಿವೆಲ್, ಐಬಿಎಂ, ಐಕಿಯ ಸ್ಟೋರ್ಸ್, ಪೇಪಾಲ್, ಆಕ್ಸಿಸ್ ಬ್ಯಾಂಕ್ ಸಂಸ್ಥೆಗಳು ರಾಜ್ಯದ ವಿವಿಧ ವಲಯಗಳಲ್ಲಿ ಹೂಡಿಕೆ ಅವಕಾಶ ಬಗ್ಗೆ ಚರ್ಚಿಸಿದವು. ಈ ಸಂದರ್ಭದಲ್ಲಿ ಆಯೋಜಿಸಿದ್ದ ಬೆಳಗಿನ ಉಪಾಹಾರದ ಸಭೆಯಲ್ಲಿ ವಿವಿಧ ಕಂಪನಿಗಳ ಮುಖ್ಯಸ್ಥರು ಹಾಗೂ ಅನಿವಾಸಿ ಭಾರಾತೀಯ ಉದ್ಯಮಿಗಳು ಭಾಗವಹಿಸಿದ್ದರು. ಅಮೆರಿಕಾದ ಇಂಡಿಯಾಸ್ಪೊರಾ, ಸಿಂಗಾಪುರದ ಇಂಡೊರಮಾ, ಹಿಟಾಚಿ ಜಪಾನ್, ವಿ.ಪಿ.ಎಸ್. ಹೆಲ್ತ್‌ಕೇರ್ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರಮುಖರೊಂದಿಗೆ ಚರ್ಚೆ ನಡೆಸಲಾಯಿತು.
ಈ ಸಂಸ್ಥೆಗಳು ಬಿಜಾಪುರ / ಗುಲ್ಬರ್ಗಾ ದಲ್ಲಿ ಮೆಗಾ ಜವಳಿ ಪಾರ್ಕ್, ಮೆಟ್ರೋ ಟ್ರೈನ್ ಕೋಚ್ ನಿರ್ಮಾಣ ಘಟಕ, ಫಾರ್ಮಾ ಕ್ಷೇತ್ರಗಳಲ್ಲಿ ಹೂಡಿಕೆ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಈಶಾ ಫೌಂಢೇಷನ್ ಸಂಸ್ಥಾಪಕ ಸದ್ಗುರು ವಾಸುದೇವ ಅವರೊಂದಿಗೆ ಪರಿಸರ ಸಂರಕ್ಷಣೆ ಹಾಗೂ ಮಣ್ಣಿನ ಸಾವಯವ ಅಂಶ, ಫಲವತ್ತತೆಗಳ ಬಗ್ಗೆ ರಾಜ್ಯದಲ್ಲಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ದಾವೋಸ್‌ನ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಒಟ್ಟು 59,350 ಕೋಟಿ ರೂ.ಗಳ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂದು ವಿವರಿಸಿದರು.
ಬೆಳಗಾವಿ ಧಾಮನೆ ಗ್ರಾಮದಲ್ಲಿ ಎಂಇಎಸ್ ಪುಂಡಾಟ; 10 ಜನರು ಪೊಲೀಸ್ ವಶಕ್ಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ