Breaking News -KSHDCL ಚೇರಮನ್ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಡಿ.ರೂಪಾ ಗಂಭೀರ ಆರೋಪ: ಮುಖ್ಯ ಕಾರ್ಯದರ್ಶಿಗೆ ಲಿಖಿತ ದೂರು
6 ಪುಟಗಳ ದೂರಿನಲ್ಲಿ ಇಂಚಿಂಚೂ ವಿವರಿಸಿದ ವ್ಯವಸ್ಥಾಪಕ ನಿರ್ದೇಶಕಿ
ಚೆಕ್ ಬೌನ್ಸ್ ಕೇಸ್ ನಲ್ಲಿ ಶಿರಸಿ ಪೊಲೀಸರಿಗೂ ಬೇಕಾಗಿರುವ ರಾಘವೇಂದ್ರ ಶೆಟ್ಟಿ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಚೇರಮನ್ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಹಲವಾರು ಗಂಭೀರ ಆರೋಪಗಳನ್ನು ಮಾಡಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ರೂಪಾ ಮೌದ್ಗಿಲ್, ಈ ಸಂಬಂಧ ಬುಧವಾರ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ನಿಗಮದಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ಎಸಗಿದ್ದಲ್ಲದೆ, ಅವರಿಂದಾಗಿ ನಿಗಮಕ್ಕೆ ಏನೇನೂ ಪ್ರಯೋಜನವಿಲ್ಲ ಬದಲಾಗಿ ಭಾರಿ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ ಎಂದು ಅವರು ದೂರಿದ್ದಾರೆ. ಮಹಿಳೆಯರ ಕುರಿತು ಅವರ ವರ್ತನೆಯೂ ಆಕ್ಷೇಪಾರ್ಹವಾಗಿದೆ ಎಂದು ದೂರಿರುವ ರೂಪಾ, ಚೆಕ್ ಬೌನ್ಸ್ ಕೇಸ್ ನಲ್ಲಿ ರಾಘವೇಂದ್ರ ಶೆಟ್ಟಿ ಶಿರಸಿ ಪೊಲೀಸರಿಗೂ ಬೇಕಾಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ದೂರಿನ ಪ್ರತಿಯನ್ನು ಪ್ರಧಾನ ಕಾರ್ಯದರ್ಶಿಗಳು, ಸನ್ಮಾನ್ಯ ಮುಖ್ಯ ಮಂತ್ರಿಗಳ ಕಾರ್ಯಾಲಯ,
ಕಾರ್ಯದರ್ಶಿಗಳು, ವಾಣಿಜ್ಯ ಮತ್ತು ಕೈಗಾರಿಕ ಇಲಾಖೆ, ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಆಪ್ತ ಕಾರ್ಯದರ್ಶಿಗಳಿಗೆ ಸಲ್ಲಿಸಿದ್ದು, ಸಚಿವರ ಗಮನಕ್ಕೆ ತರಲು ಕೋರಿದ್ದಾರೆ.
ರೂಪಾ ಬರೆದಿರುವ ಪತ್ರದ ಸಂಪೂರ್ಣ ವಿವರ ಇಲ್ಲಿದೆ-
ಗೆ,
ಸರ್ಕಾರದ ಮುಖ್ಯ ಕಾರ್ಯದರ್ಶಿಗಳು,
ಕರ್ನಾಟಕ ಸರ್ಕಾರ,
ವಿಧಾನ ಸೌಧ,
ಬೆಂಗಳೂರು.
ಮಾನ್ಯರೆ,
ವಿಷಯ: ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿಯವರು ನಿಗಮದಲ್ಲಿ
ಎಸಗಿರುವ ಅವ್ಯವಹಾರ, ಅಧಿಕಾರ ದುರುಪಯೋಗ, ದುರ್ನಡತೆ
ಬಗ್ಗೆ ವರದಿ.
*****
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಅರಿಕೆ ಮಾಡುವುದೇನೆಂದರೆ ಈಗಾಗಲೇ ಅನೇಕ ಬಾರಿ ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟವರಲ್ಲಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ನಡೆಸಿರುವ ಅವ್ಯವಹಾರ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ವಂಚನೆ, ದುರ್ವರ್ತನೆ ಬಗ್ಗೆ ಈಗಾಗಲೇ ವರದಿ ಸಲ್ಲಿಸಿರುತ್ತೇನೆ. ತೀರಾ ಇತ್ತೀಚಿನ ಅಂದರೆ ದಿನಾಂಕ: ೨೭.೦೫.೨೦೨೨ ರಂದು ರಾಘವೇಂದ್ರ ಶೆಟ್ಟಿಯು ನಿಗಮದ ಸಿಸಿಟಿವಿ-ಡಿವಿಆರ್ ತಿದ್ದಿ ವಿರೂಪಗೊಳಿಸಿದ ಪ್ರಕರಣ ತಮಗೆ ವರದಿ ಮಾಡುತ್ತಲೇ, ಇವರು, ೩೧.೦೫.೨೦೨೨ ರಂದು ನನ್ನ ವಿರುದ್ಧ ನಾಲಗೆ ಹರಿಬಿಟ್ಟು, ನಿರಾಧಾರ ಹೇಳಿಕೆಗಳನ್ನು ಮಾಧ್ಯಮದವರಿಗೆ ಕೊಟ್ಟು ನಿಗಮದ ಹಾಗೂ ನನ್ನ ವೈಯಕ್ತಿಕ ಇಮೇಜ್‌ಗೆ ಧಕ್ಕೆ ತರುವ ಕಾರ್ಯ ಮಾಡಿರುತ್ತಾರೆ. ಈ ಮೂಲಕ ಮತ್ತೊಮ್ಮೆ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ನಡೆಸಿರುವ ಅವ್ಯವಹಾರ, ಅಧಿಕಾರ ದುರುಪಯೋಗ, ದುರ್ನಡತೆಗಳ ಬಗ್ಗೆ ವರದಿ ಸಲ್ಲಿಸುತ್ತಿದ್ದೇನೆ. ಈ ಕೆಳಗೆ ತಿಳಿಸಿರುವ ಅನೇಕ ವಿಷಯಗಳ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಹಾಗೂ ಅಧಿಕೃತವಾಗಿ ಸಂಬಂಧಪಟ್ಟವರಲ್ಲಿ ಲಿಖಿತ ಹಾಗೂ ಮೌಖಿಕ ವರದಿ ನೀಡಿರುತ್ತೇನೆ.
೧. ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮವು ೨೦೨೧-೨೨ ನೇ ಸಾಲಿನಲ್ಲಿ, ಕಳೆದ ವರ್ಷಕ್ಕಿಂತ, ಶೇಕಡ ೪೧%, ಅಂದರೆ, ೭.೦೬ ಕೋಟಿ ರೂಪಾಯಿ ಹೆಚ್ಚಿನ ವಹಿವಾಟನ್ನು (ಟರ್ನೊವರ್) ಸಾಧಿಸಿರುತ್ತದೆ. ೨೦೨೦- ೨೧ರಲ್ಲಿ ನಿಗಮದ ವಹಿವಾಟು (ಟರ್ನೊವರ್)
ರೂ.೧೬.೮೮ ಕೋಟಿಗಳಿದ್ದು, ೨೦೨೧-೨೨ರಲ್ಲಿ ರೂ.೨೩.೯೫ ಕೋಟಿಗಳಿಗೆ ಏರಿರುತ್ತದೆ. ಇದು ಒಂದು ರೆಕಾರ್ಡ್ ಸಾಧನೆಯಾಗಿದೆ. ೨೦೧೮ ರಲ್ಲಿ ರೂ.೨೫.೦೦ ಕೋಟಿಯಷ್ಟು ಫ್ರಾಡ್/ವಂಚನೆ ಪ್ರಕರಣ ಈ ಸಂಸ್ಥೆಯಲ್ಲಿ ನಡೆದಿದ್ದು, ಸಿಐಡಿ, ಸಿಬಿಐ ಕೇಸ್‌ಗಳು ತನಿಖೆಯಲ್ಲಿದ್ದು ಆ ನಂತರದಿಂದ ವಹಿವಾಟು ಪ್ರತಿ ವರ್ಷ ಕ್ಷೀಣಿಸುತ್ತಾ ಇತ್ತು. ಆದಾಗ್ಯೂ ೨೦೨೧-೨೨ ನೇ ಸಾಲಿನಲ್ಲಿ ಕೋವಿಡ್ ಲಾಕ್‌ಡೌನ್ ಇದ್ದಾಗ್ಯೂ ಇದು ರೂ.೭.೦೬ ಕೋಟಿಯಷ್ಟು ಹೆಚ್ಚಾಗಿದೆ. ಈ ಯಶೋಗಾಥೆಯು ಆಡಳಿತದಲ್ಲಿ ನಾನು ತೆಗೆದುಕೊಂಡ ಅನೇಕ ಕ್ರಮಗಳಿಂದ ಹಾಗೂ ಅಧಿಕಾರಿ/ಸಿಬ್ಬಂದಿ ವರ್ಗದವರ ಪರಿಶ್ರಮದಿಂದ ಸಾಧ್ಯವಾಗಿರುತ್ತದೆ.
೨. ನಿಗಮದ ಅಧ್ಯಕ್ಷರಾದ ಬೇಳೂರು ರಾಘವೇಂದ್ರ ಶೆಟ್ಟಿಯು, ೨೦೧೭-೧೮ ನೇ ಸಾಲಿನಲ್ಲಿ ನಿಗಮಕ್ಕೆ ರೂ.೨೫.೦೦ ಕೋಟಿ ವಂಚಿಸಿ ಸೇವೆಯಿಂದ ವಜಾ ಆದ ಅಂದಿನ ಪ್ರಧಾನ ವ್ಯವಸ್ಥಾಪಕರು (ಹಣಕಾಸು) ಜಿ.ಕಿಶೋರ್ ಕುಮಾರ್ ಎಂಬುವವರನ್ನು ಮತ್ತ್ತೆ ಬೋರ್ಡ್ ನಿರ್ಧಾರದ ಮೂಲಕ ಸೇವೆಗೆ ವಾಪಸ್ಸು ತೆಗೆದುಕೊಳ್ಳಲು ಹೊರಟಿದ್ದರು. ವಂಚನೆ ಎಸಗಿದ ಅಂದಿನ ಪ್ರಧಾನ ವ್ಯವಸ್ಥಾಪಕರು (ಹಣಕಾಸು), ಜಿ.ಕಿಶೋರ್ ಕುಮಾರ್ ಅವರು ನನ್ನ ಬಳಿ ಬಂದು ನನ್ನನ್ನು ವಾಪಸ್ಸು ಸೇವೆಯಲ್ಲಿ ತೆಗೆದುಕೊಳ್ಳುವ ಪ್ರಸ್ತಾವನೆಯನ್ನು ಬೋರ್ಡ್ ಮುಂದೆ ತನ್ನಿ, ಬೋರ್ಡ್‌ನಲ್ಲಿ ಮಾಡಿಕೊಡುತ್ತೇನೆ ಎಂದು ಅಧ್ಯಕ್ಷ ರಾಘವೇಂದ್ರ ಶೆಟ್ಟಿಯು ಭರವಸೆ ಕೊಟ್ಟಿದ್ದಾರೆ, ಎಂದು ತಿಳಿಸಿರುತ್ತಾನೆ. ಈ ನಿಗಮಕ್ಕೆ ರೂ. ೨೫.೦೦ ಕೋಟಿ ವಂಚಿಸಿ ಸೇವೆಯಿಂದ ವಜಾ ಆದ ಕಿಶೋರ್ ಕುಮಾರ್ ನನ್ನು ಮತ್ತೆ ನಿಗಮಕ್ಕೆ ವಾಪಸ್ಸು ಸೇವೆಗೆ ತೆಗೆದುಕೊಳ್ಳುವ ಈ ವಿಷಯವನ್ನು ನಾನು ಬೋರ್ಡ್ ಮುಂದೆ ತರಲು ನಿರಾಕರಿಸಿರುತ್ತೇನೆ. ಆದಾಗ್ಯೂ ತಿಳಿದುಬಂದಿದ್ದು ಏನೆಂದರೆ ಈ ಕೆಲಸಕ್ಕಾಗಿ ಅಧ್ಯಕ್ಷ ರಾಘವೇಂದ ಶೆಟ್ಟಿ ಹಾಗೂ ಕಿಶೋರ್ ಕುಮಾರ್ ನಡುವೆ ಸುಮಾರು ರೂ. ೪-೫ ಕೋಟಿ ಹಣದ ವ್ಯವಹಾರದ ಮಾತುಕತೆ ಆಗಿರುತ್ತದೆ ಎಂಬುದು ತಿಳಿದುಬಂದಿರುತ್ತದೆ. ಅವರ ಈ ನಿಯಮಬಾಹಿರ ಕೆಲಸ ನಾನು ತಡೆದ ದಿನದಿಂದ ಹತಾಶರಾಗಿ ದುರ್ವರ್ತನೆಯಿಂದ ವರ್ತಿಸುತ್ತಿದ್ದು, ಇದು ಈಗ ಮಿತಿ ಮೀರಿರುತ್ತದೆ.
೩. ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ ಡಿಡಿಪಿಆರ್ ೩೫ ಎಆರ್‌ಯು ೨೦೦೩, ದಿನಾಂಕ ೦೭.೦೫.೨೦೦೩ ದೈನಂದಿನ ಚಟುವಟಿಕೆಗಳಲ್ಲಿ ಅಧ್ಯಕ್ಷರು ಹಸ್ತಕ್ಷೇಪ ಮಾಡಬಾರದು ಎಂದು ಇದ್ದರೂ, ಪ್ರತಿ ದಿನವೂ ನಿಗಮದ ಕಛೇರಿ ಕ್ಲರ್ಕ್‌ಗಳನ್ನು ಕರೆದು ಆ ಫೈಲ್ ಕೊಡು, ಈ ಫೈಲ್ ಕೊಡು ಎಂದು ನಿಗಮದ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿಯು ಒತ್ತಾಯ ಮಾಡುತ್ತಾ ಬಂದಿರುತ್ತಾರೆ. ಇದು ಸಿಬ್ಬಂದಿಗಳಿಗೆ ಮಾನಸಿಕ ಹಿಂಸೆಯಾಗಿದೆ. ಈ ಸರ್ಕಾರ ಅಧಿಕೃತ ಜ್ಞಾಪನ ಪ್ರಕಾರ ನಾನು ಚಾಚೂ ತಪ್ಪದೆ ಪಾಲಿಸಿರುತ್ತೇನೆ ಹಾಗೂ ದೈನಂದಿನ ಚಟುವಟಿಕೆಗಳಲ್ಲಿ ಅಧ್ಯಕ್ಷರು ಹಸ್ತಕ್ಷೇಪ ಆಗಲು ಬಿಟ್ಟಿರುವುದಿಲ್ಲ. ಇದು ಅವರ ಭ್ರಮನಿರಸನಕ್ಕೆ ಕಾರಣವಾಗಿದೆ.
೪. ನಿಗಮದ ಅಧ್ಯಕ್ಷರಾದ ಬೇಳೂರು ರಾಘವೇಂದ್ರ ಶೆಟ್ಟಿಯು ವೈಯಕ್ತಿಕ ಚೆಕ್ ಬೌನ್ಸ್ ಕೇಸ್‌ನಲ್ಲಿ ಅಪರಾಧಿಯಾಗಿದ್ದು ದಿನಾಂಕ:೨೬.೦೫.೨೦೨೨ ರಂದು ಸಿರ್ಸಿ ಪೊಲೀಸ್‌ರು, ಇವರು ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿರುವ ಕಾರಣ ಸಮನ್ಸ್ ಅನ್ನು ನಿಗಮದ ಕಛೇರಿಯ ಅವರ ಕೋಣೆಯ ಬಾಗಿಲಿಗೆ ಅಂಟಿಸಿ ಮಹಜರ್ ಮಾಡಿ ಹೋಗಿರುತ್ತಾರೆ. ಇದು ಅನೇಕ ಪತ್ರಿಕೆಗಳಲ್ಲಿ ಬಂದು ನಿಗಮದ ಹೆಸರಿಗೆ ಚ್ಯುತಿ ಆಗಿರುತ್ತದೆ.
೫. ನಿಗಮದ ಅಧ್ಯಕ್ಷರಾದ ಬೇಳೂರು ರಾಘವೇಂದ್ರ ಶೆಟ್ಟಿಯು ಅನೇಕ ಬಾರಿ ಶೋರೂಂಗಳಿಂದ ಲಕ್ಷಗಟ್ಟಲೆ ಬೆಲೆಬಾಳುವ ಗಂಧದ ಹಾಗೂ ಇತರ ಸಾಮಾನುಗಳನ್ನು ಹೇಳದೆ ಕೇಳದೆ ಅನಾಮತ್ತಾಗಿ ತೆಗೆದುಕೊಂಡು ಹೋಗಿರುತ್ತಾರೆ. ಅದಕ್ಕೆ ಹಣ ಪಾವತಿಸಿರುವುದಿಲ್ಲ. ಇದರ ಬಗ್ಗೆ ಇವರಿಗೆ ಕೊಟ್ಟ ನೋಟಿಸ್ ಲಗತ್ತಿಸಿದೆ.
೬. ಪ್ರತಿ ತಿಂಗಳು ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿಯವರ ಸಂಬಳ, ಮನೆ ಬಾಡಿಗೆ ಭತ್ಯೆ, ೨ ಇನ್ನೋವ ಕ್ರಿಸ್ಟ ಗಾಡಿಗಳು, ಪೆಟ್ರೋಲ್, ೪ ಜನ ಸಿಬ್ಬಂದಿ, ವಿಮಾನ ಪ್ರಯಾಣ ವೆಚ್ಚ, ಇತರೆ ವೆಚ್ಚಗಳು ಸೇರಿ ರೂ. ೫.೦೦ ಲಕ್ಷದಷ್ಟು ಖರ್ಚು ಪ್ರತಿ ತಿಂಗಳು ಬರುತ್ತದೆ. ಇವರು ಬಂದಾಗಿನಿಂದ ಸುಮಾರು ರೂ. ೧.೦೦ ಕೋಟಿಯಷ್ಟು ನಿಗಮಕ್ಕೆ ಖರ್ಚು ತಗಲಿರುತ್ತದೆ. ಆದರೆ ಇದಕ್ಕೆ ಸರಿಸಮವಾಗಿ ಸೇವೆ (ಇನ್‌ಪುಟ್) ಆಗಲೀ ಲಾಭವಾಗಲೀ ನಿಗಮಕ್ಕೆ ದೊರಕಿಲ್ಲ.
೭. ನಿಗಮದ ಅಧ್ಯಕ್ಷರಾದ ಬೇಳೂರು ರಾಘವೇಂದ್ರ ಶೆಟ್ಟಿಯು ಪ್ರತಿ ತಿಂಗಳು ೪ ಜನ ಸಿಬ್ಬಂದಿಗೆ ಸಂಬಳ ಮಾಡಿಸಿಕೊಳ್ಳುತ್ತಾರೆ. ಆದರೆ ಈ ೪ ಜನರು ಎಂದೂ ಕೂಡ ಕಛೇರಿಯಲ್ಲಿ ಕೆಲಸ ಮಾಡಿರುವುದು ಕಂಡು ಬಂದಿಲ್ಲ. ಮಾಡದೆ ಇರುವ ಕೆಲಸಕ್ಕೆ ರಾಘವೇಂದ್ರ ಶೆಟ್ಟಿಯು ತಮ್ಮ ಸಹಿಯಲ್ಲಿಯೇ ಅವರುಗಳ ಸಂಬಳವನ್ನು ನಿಗಮದಿಂದ ಪಾವತಿ ಮಾಡಿಸಿಕೊಂಡಿರುತ್ತಾರೆ. ಇಷ್ಟಿದ್ದರೂ ಕೂಡ, ತಮ್ಮ ಕೆಲಸಗಳಿಗೆ ನಿಗಮದ ಸಿಬ್ಬಂದಿಯನ್ನೇ ಬಳಸಿಕೊಳ್ಳುತ್ತಾರೆ.
೮. ನಿಗಮದ ಅಧ್ಯಕ್ಷರಾದ ಬೇಳೂರು ರಾಘವೇಂದ್ರ ಶೆಟ್ಟಿಯು ಒಬ್ಬ ಶ್ರೀಕಾಂತ್ ಚೌರಿ ಎಂಬುವವರನ್ನು ಕಳೆದ ೧೦ ತಿಂಗಳಿಂದ ಪಿ.ಎ. ಎಂದು ಇರಿಸಿಕೊಂಡಿದ್ದು ಆತನಿಗೆ ನಿಗಮದಿಂದ ಸಂಬಳವನ್ನು ಮಾಡಲಾಗುತ್ತಿತ್ತು. ಆತನು ಮೊನ್ನೆ ಪಿ.ಎಸ್.ಐ. ರಿಕ್ರೂಟ್‌ಮೆಂಟ್ ಸ್ಕ್ಯಾಮ್‌ನಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿರುತ್ತಾನೆ. ಇದು ನಿಗಮದ ಹೆಸರಿಗೆ ಕಪ್ಪು ಚುಕ್ಕೆಯಾಗಿದೆ. ಈ ಹಗರಣದಲ್ಲಿ ರಾಘವೇಂದ್ರ ಶೆಟ್ಟಿಯ ಪಾತ್ರವನ್ನು ತನಿಖೆ ಮಾಡಲು ಈ ಮೂಲಕ ಕೋರುತ್ತೇನೆ.
೯. ನಿಗಮದ ಅಧ್ಯಕ್ಷರಾದ ಬೇಳೂರು ರಾಘವೇಂದ್ರ ಶೆಟ್ಟಿ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ನಿಗಮದ ಹೊಚ್ಚ ಹೊಸ ಇನ್ನೋವ ಕ್ರಿಸ್ಟವನ್ನು (ವಾಹನ ಸಂಖ್ಯೆ ಕೆಎ ೦೧ ಎಂವಿ ೧೭೧೧) ಸ್ವತಃ ಚಲಾಯಿಸಿ ರಾತ್ರಿ ೮.೩೦ – ೯.೦೦ ಗಂಟೆ ಹೊತ್ತಿಗೆ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ ಹಿರಿಯೂರು ಬಳಿ ಆಕ್ಸಿಡೆಂಟ್ ಮಾಡಿರುತ್ತಾರೆ. ನಂತರ ಅದನ್ನು ಡ್ರೈವರ್ ಮಾಡಿದ್ದು ಎಂದು ತಿರುಚಿರುತ್ತಾರೆ. ಹಿರಿಯೂರು ಠಾಣೆಯಲ್ಲಿ ಕೇಸ್ ದಾಖಲಾಗಿರುತ್ತದೆ. ಈ ವಾಹನವನ್ನು ಹೊಸದಾಗಿ ಡಿಸಂಬರ್ ೨೦೧೯ ರಲ್ಲಿ ಖರೀದಿಸಿದ್ದು ಇದಕ್ಕೆ ತಗುಲಿದ ಖರೀದಿ ವೆಚ್ಚ ಸುಮಾರು ರೂ.೧೪.೦೦ ಲಕ್ಷ, ಈಗ ರಿಪೇರಿಗೆ ತಗುಲಿದ ವೆಚ್ಚ ರೂ.೧೦.೮೪ ಲಕ್ಷಗಳು. ಈ ಹಣ ಈಗಾಗಲೇ ನಿಗಮದಿಂದ ಪಾವತಿಸಲಾಗಿದೆ. ನಿಗಮಕ್ಕೆ ರೂ.೧೦.೮೪ ಲಕ್ಷದಷ್ಟು ಇವರ ಬೇಜವಾಬ್ದಾರಿ ವರ್ತನೆಯಿಂದ ವೃಥಾ ಖರ್ಚು ತಗುಲಿರುತ್ತದೆ.
೧೦. ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿಯು ದಿನಾಂಕ: ೨೭.೦೫.೨೦೨೨ ರಂದು ಅಪರಿಚಿತ ವ್ಯಕ್ತಿಯೊಬ್ಬನನ್ನು ಬೆಳಿಗ್ಗೆ ೮.೩೦ ಕ್ಕೆ ಕಛೇರಿಗೆ ಕರೆದುಕೊಂಡು ಬಂದು ಸಿಸಿಟಿವಿ ಮತ್ತು ಡಿವಿಆರ್ ಅನ್ನು ತಿದ್ದಿ ವಿರೂಪಗೊಳಿಸಿರುತ್ತಾರೆ. ಈಗಾಗಲೇ ಸರ್ಕಾರಕ್ಕೆ ಇದರ ಬಗ್ಗೆ ಅದೇ ದಿನದಂದು ವರದಿ ಸಲ್ಲಿಸಲಾಗಿದೆ. ಇದರಿಂದ ಏನೇನು ಅದರಲ್ಲಿ ಅಳಿಸಲಾಗಿದೆ ಎಂಬುದರ ಬಗ್ಗೆ ರಿಪೋರ್ಟ್ ಬರಬೇಕಿದೆ. ಇದು ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಈ ರೀತಿ ತಿದ್ದುವುದು ಅಪರಾಧವಾಗುತ್ತದೆ. ಸರ್ಕಾರದಿಂದ ಪರವಾನಗಿ ಬಂದಲ್ಲಿ ಇದರ ಬಗ್ಗೆ ಠಾಣೆಯಲ್ಲಿ ದೂರು ಸಲ್ಲಿಸಲಾಗುವುದು.
೧೧. ನಿಗಮದ ಅಧ್ಯಕ್ಷರಾದ ಬೇಳೂರು ರಾಘವೇಂದ್ರ ಶೆಟ್ಟಿಯು ನಾನು ವ್ಯವಸ್ಥಾಪಕ ನಿರ್ದೇಶಕರಾಗಿ ಬರುವುದಕ್ಕಿಂತ ಮುಂಚೆ ಹಾಗೂ ಬಂದ ಹೊಸದರಲ್ಲಿ ಕಛೇರಿಯ ಪಕ್ಕದಲ್ಲೇ ಇರುವ ನಾಗಾರ್ಜುನ ಹೋಟೆಲ್‌ನಿಂದ ದಿನ ಕನಿಷ್ಟ ಅಂದರೆ ೧೫ ಊಟವನ್ನು ವೆಜ್ ಮತ್ತು ನಾನ್ ವೆಜ್ ಅನ್ನು ತಂದು ನಮ್ಮ ನಿಗಮದ ಪ್ರಧಾನ ವ್ಯವಸ್ಥಾಪಕರುಗಳಿಂದ ಅದನ್ನು ಪಾವತಿ ಮಾಡಿಸಿಕೊಳ್ಳುತ್ತಿದ್ದರು. ನಂತರ ಪ್ರಧಾನ ವ್ಯವಸ್ಥಾಪಕರುಗಳು ಈ ವಿಷಯವನ್ನು ನನಗೆ ತಿಳಿಸಿ ಇದನ್ನು ಮರುಪಾವತಿ ಮಾಡಿಸಿ ಈ ಮೊತ್ತವನ್ನು ತಮಗೆ ಕೊಡಬೇಕೆಂದು ಹೇಳಿದಾಗ ನಾನು ಆ ರೀತಿ ಹಣ ಕೊಡಲು ಅವಕಾಶವಿರುವುದಿಲ್ಲ ಎಂದು ಇದನ್ನು ನಿಲ್ಲಿಸಿರುತ್ತೇನೆ.
೧೨. ನಾನು ಬಂದ ಹೊಸದರಲ್ಲಿ ನನಗೆ ಬಂದ ವರದಿಯ ಪ್ರಕಾರ ಅಧ್ಯಕ್ಷ ರಾಘವೇಂದ್ರ ಶೆಟ್ಟಿಯು ತಮಗೆ ಪಿ.ಎ. ಬೇಕೆಂದು, ಪಿ.ಎ. ಸ್ತ್ರೀಯೇ ಬೇಕೆಂದು ಮಾನ್‌ಪವರ್ ಏಜೆನ್ಸಿಗೆ ಇವರು ಒತ್ತಾಯ ಮಾಡುತ್ತಿದ್ದರು. ನಂತರ ಈ ವಿಷಯ ನನಗೆ ತಿಳಿದಿದೆ ಎಂದು ರಾಘವೇಂದ್ರ ಶೆಟ್ಟಿಯವರಿಗೆ ಗೊತ್ತಾಗಿ ಕೇಳುವುದನ್ನು ನಿಲ್ಲಿಸಿರುತ್ತಾರೆ.
೧೩. ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಹಿಂದೆ ತಿಳಿಸಿರುವಂತೆ ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಒಮ್ಮೆ ಸಾಯಂಕಾಲ ೬.೩೦ ಆದರೂ ಕೂಡ ಕಛೇರಿಯ ಎಲ್ಲಾ ಮಹಿಳಾ ಸಿಬ್ಬಂದಿಗಳನ್ನು ಮನೆಗೆ ಹೋಗದಂತೆ ಹಾಗೂ ಕಾಯುವಂತೆ ತಿಳಿಸಿರುತ್ತಾರೆ. ನಾನು ಎಲ್ಲಾ ಮಹಿಳಾ ಸಿಬ್ಬಂದಿಗಳು ಅಧ್ಯಕ್ಷರ ಕೊಠಡಿ ಬಳಿ ನಿಂತಿದ್ದು ಕಂಡು, ಯಾಕೆ ನಿಂತಿದ್ದೀರಿ ಎಂದು ವಿಚಾರಿಸಲು, ಅಧ್ಯಕ್ಷರು ತಿಳಿಸಿರುತ್ತಾರೆ ಎಂದು ತಿಳಿಸಿದರು. ಅದಕ್ಕೆ ನಾನು ಅಧ್ಯಕ್ಷರ ಚೇಂಬರ್‌ಗೆ ಹೋಗಿ ಕಾಯಲು ಕಾರಣ ಕೇಳಲು, ಅವರು ನಾನು ಹಾಗೆ ಹೇಳಲೇ ಇಲ್ಲ ಎಂದು ತಿರುಚಿದರು. ಸ್ತ್ರೀಯರ ಬಗ್ಗೆ ಅವರ ವರ್ತನೆ ಈ ರೀತಿ ಇರುತ್ತದೆ.
೧೪. ಹೈದರಾಬಾದ್ ನಲ್ಲಿ ಶೋರೂಂ ಉದ್ಘಾಟನೆಯ ನಂತರ ಅದರ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಬಂದಾಗ ಅಧ್ಯಕ್ಷ ರಾಘವೇಂದ್ರ ಶೆಟ್ಟಿಯು ತಮ್ಮ ಹೆಸರ ಮುಂದೆ ಡಾಕ್ಟರ್ ಎಂದು ಬರಲಿಲ್ಲ ಎಂದು ಹೇಳಿ ಆವಹೇಳನಕಾರಿ ವರ್ತನೆ ಮಾಡಿರುತ್ತೀರಿ ಎಂದು ನನಗೆ ಪತ್ರ ಬರೆದಿರುತ್ತಾರೆ. ಅಲ್ಲದೆ ಪಬ್ಲಿಸಿಟಿ ಕಾರ್ಯವನ್ನು ಕೊಟ್ಟ ಸರ್ಕಾರದ ನಿಗಮವಾದ ಒಅ & ಂ ಗೆ ಫೋನಾಯಿಸಿ ಈ ಕೆಲಸವನ್ನು ಮಾಡಿದ ಶ್ರೀಮತಿ ದಿವ್ಯ ಆರ್. ಎಂಬುವವರ ನಂಬರ್ ತೆಗೆದುಕೊಂಡು ಅವರಿಗೆ ಫೋನು ಮಾಡಿ ಅಗೌರವಪೂರ್ವಕವಾಗಿ ಏಕವಚನದಲ್ಲಿ ಕೆಟ್ಟ ರೀತಿಯಲ್ಲಿ ಬೈದಿರುತ್ತಾರೆ. ಸಾರ್ವಜನಿಕ ಸೇವೆಗೆ ಸ್ವಯಂ ಬರುವವರು ಈ ರೀತಿ ಡಾಕ್ಟರ್ ಎಂದು ತಮ್ಮ ಹೆಸರ ಮುಂದೆ ಬರಲಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಇತರರಿಗೆ ಬೈದು ಸ್ವಾರ್ಥತೆ ಸಾಧಿಸುವ ಇವರ ವಿರುದ್ಧ ಹಾಗೂ ಇವರು ಯಾವ ಡಾಕ್ಟರ್, ಎಲ್ಲಿಂದ ಪದವಿ ಪಡೆದಿರುತ್ತಾರೆ ಎಂಬುದನ್ನು ತನಿಖೆ ನಡೆಸಲು ಈ ಮೂಲಕ ಕೋರುತ್ತಿದ್ದೇನೆ.
೧೫. ನಾನು ಬಂದ ಹೊಸದರಲ್ಲಿ ಕೆಲವು ಟೆಂಡರ್‌ಗಳಲ್ಲಿ ನಿಯಮಗಳನ್ನು ಮೀರಿ ತಮಗೆ ಗುರುತು ಪರಿಚಯ ಇರುವವರಿಗೆ ಕೊಡಲು ಹೇಳುತ್ತಿದ್ದರು. ಅದನ್ನು ನಾನು ಮಾಡಿರುವುದಿಲ್ಲ. ಒಮ್ಮೆ ಪ್ರಾರಂಭದಲ್ಲಿ ನನಗೆ, ತಾನು ದೊಡ್ಡಬಳ್ಳಾಪುರದ ಕ್ಷೇತ್ರದ ಒಐಂ ಟಿಕೇಟ್ ಗಾಗಿ ತಯಾರಿ ನಡೆಸಿದ್ದೇನೆ ಎಂದು, ಅದಕ್ಕೆ ಹೆಚ್ಚು ಹಣ ಬೇಕಿರುವ ಕಾರಣ ನಿಗಮದ ಕೆಲಸದಲ್ಲಿ ಅಡ್ಜಸ್ಟ್ ಮಾಡಿಕೊಂಡು ಹೋಗಬೇಕೆಂದೂ ಕೋರಿರುತ್ತಾರೆ. ನಾನು ಒಪ್ಪದೇ ಇದ್ದದ್ದರಿಂದ ಹತಾಶರಾಗಿರುತ್ತಾರೆ.
೧೬. ಅಧ್ಯಕ್ಷ ರಾಘವೇಂದ್ರ ಶೆಟ್ಟಿಯವರು ೩೦೨ ನೇ ಹಾಗೂ ೩೦೩ ನೇ ಬೋರ್ಡ್ ಮೀಟಿಂಗ್‌ಗಳ ನಡೆದ ನಡವಳಿಗಳನ್ನು ವಿನಾ ಕಾರಣ ಸಹಿ ಮಾಡಿರುವುದಿಲ್ಲ. ಕಾರಣವಿಲ್ಲದೇ ಬೋರ್ಡ್ ಮೀಟಿಂಗ್ ಹಾಗೂ ವಾರ್ಷಿಕ ಸಾಮಾನ್ಯ ಸಭೆಗಳಲ್ಲಿ ಅಸಂಬದ್ಧ ವಿಷಯಗಳ ಬಗ್ಗೆ ಕೂಗಾಡಿ ಸಮಯ ವ್ಯರ್ಥ ಮಾಡುವುದು, ಮೇಲಿನ ಮೀಟಿಂಗ್‌ಗಳಲ್ಲಿ ಜೋರಾಗಿ ಕೂಗುತ್ತಾ ಅಶಾಂತ ವಾತಾವರಣ ಉಂಟು ಮಾಡಿ ಕೆಲಸಕ್ಕೆ ಧಕ್ಕೆ ಉಂಟು ಮಾಡಿರುವುದು ಇವುಗಳನ್ನು ಪದೇ ಪದೇ ಮಾಡುತ್ತಾ ಬಂದಿದ್ದಾರೆ. ದಿನಾಂಕ: ೨೭.೦೫.೨೦೨೨ ರಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಒಂದು ಗಂಟೆವರೆಗೆ ಸಭೆ ನಡೆಸಲು ಬಿಡದೆ, ಕೂಗಾಡುತ್ತಾ, ತಾನು ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡರೆ ರೂಪಾರವರು ಕಾರಣ ಎಂದು ೫-೬ ಬಾರಿ ಕೂಗಿ ಕೂಗಿ ಹೇಳಿ ಒತ್ತಡ ಹೇರುವ ಪ್ರಯತ್ನ ಮಾಡಿರುತ್ತಾರೆ. ಇವರ ಕಳೆದ ೧೮ ತಿಂಗಳ ವರ್ತನೆ ಅತಿ ಉಗ್ರ ಹಾಗೂ ಆಕ್ರಮಣಕಾರಿ ವರ್ತನೆ ಇರುತ್ತದೆ. ಆದರೂ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಬೆದರಿಕೆ ಹಾಗೂ ಒತ್ತಡ ಹೇರುವ ಕೆಲಸ ಮಾಡಿದ್ದಾರೆ. ಇದರ ಬಗ್ಗೆ ಆತ್ಮಹತ್ಯೆಯ ಯತ್ನದ ಬೆದರಿಕೆಯ ದೂರು ಠಾಣೆಯಲ್ಲಿ ದಾಖಲಿಸುವ ಸಂಬಂಧ ಪರವಾನಗಿ ಈ ಮೂಲಕ ಕೋರಲಾಗಿದೆ.
ನಾನು ಎಂದಿನಿಂದಲೂ ಸರ್ಕಾರವು ವರ್ಗಾಯಿಸಿದಲ್ಲಿ ಚಕಾರವೆತ್ತದೆ ಹೋಗಿ, ಪ್ರಾಮಾಣಿಕ ಕೆಲಸ ಮಾಡಿರುತ್ತೇನೆ. ಐ.ಪಿ.ಎಸ್. ಅಧಿಕಾರಿಯಾದರೂ ಪ್ರಥಮ ಬಾರಿಗೆ ಕಂಪನಿಯೊಂದನ್ನು ನಿರ್ವಹಿಸುತ್ತಾ ಕೆಳಮುಖವಾಗಿ ಕ್ಷೀಣಿಸುತ್ತಿದ್ದ ನಿಗಮವನ್ನು ಅನೇಕ ಕ್ರಮಗಳ ಮೂಲಕ ಲಾಭದೆಡೆಗೆ ತಿರುಗಿಸುತ್ತಾ ಒಂದು ವರ್ಷದಲ್ಲಿ ೪೧ ಶೇಕಡ ದಷ್ಟು ಅಧಿಕ ವಹಿವಾಟು ಮಾಡುವ ಮೂಲಕ (ಲಾಕ್‌ಡೌನ್ ಇದ್ದರೂ ಕೂಡ), ನಿಗಮವನ್ನು ಊರ್ಧ್ವಮುಖವಾಗಿ ತಿರುಗಿಸಿದ್ದೇನೆ. ಇದು ಒಂದು ರೆಕಾರ್ಡ್ ಸಾಧನೆಯೇ ಆಗಿದೆ. ರಾಜ್ಯದಲ್ಲಿ ಹಾಗೂ ಹೊರಗಿನ ರಾಜ್ಯಗಳಲ್ಲಿರುವ ನಿಗಮದ ೧೨ ಮಳಿಗೆಗಳು ಹಾಗೂ ೧೩ ಕಲಾ ಸಂಕೀರ್ಣಗಳಿಗೆ ಸತತ ಹಾಗೂ ಅನಿರೀಕ್ಷಿತ ಭೇಟಿ ಹಾಗೂ ಪರಿವೀಕ್ಷಣೆ ನಡೆಸಿ, ಅನೇಕ ಬಾರಿ ದೆಹಲಿಗೆ ಭೇಟಿ ಕೊಟ್ಟು ಕೇಂದ್ರ ಸರ್ಕಾರದಿಂದ ಅನೇಕ ಯೋಜನೆಗಳನ್ನು ಮಂಜೂರು ಮಾಡಿಸಿ ತಂದಿರುತ್ತೇನೆ.
ಅಧ್ಯಕ್ಷ ರಾಘವೇಂದ್ರ ಶೆಟ್ಟಿಯು ನಿಗಮದ ಹಣ ಕೊಳ್ಳೆ ಹೊಡೆಯಲು, ದುರುಪಯೋಗಪಡಿಸಿಕೊಳ್ಳಲು ಅಥವಾ ಅಕ್ರಮ ಲಾಭ ಪಡೆಯಲು ಬಿಡದೆ, ಸರ್ಕಾರದ ಅಂದರೆ ಸಾರ್ವಜನಿಕ ಹಣವನ್ನು ನಿಷ್ಠೆಯಿಂದ ಕಾಪಾಡಿದ್ದೇನೆ. ಕಳೆದ ಒಂದೂವರೆ ವರ್ಷದಿಂದ ಸರ್ಕಾರಕ್ಕೆ ಮುಜುಗರ ಉಂಟುಮಾಡಬಾರದೆಂದು ಇವರು ಮಾಡಿದ್ದನ್ನೆಲ್ಲಾ ಸಹಿಸಿಕೊಂಡು ಎಲ್ಲೂ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವುದಿಲ್ಲ. ಆದರೆ ಈಗ ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿಯು ತನ್ನ ಬೇಜವಾಬ್ದಾರಿ ವರ್ತನೆ ಹಾಗೂ ನಿರಾಧಾರ ಹೇಳಿಕೆಗಳನ್ನು ಮಾಧ್ಯಮಗಳಿಗೆ ನೀಡುತ್ತಾ, ನನ್ನ ಪ್ರಾಮಾಣಿಕತೆ, ಹಾಗೂ ಸತ್ಯನಿಷ್ಟೆಯಿಂದ ನಿರ್ವಹಿಸಿದ ಕರ್ತವ್ಯಗಳಿಗೆ ಹಾಗೂ ನನ್ನ ಇಮೇಜ್‌ಗೆ ಚ್ಯುತಿ ತರುವ ಪ್ರಯತ್ನ ಮಾಡಿರುತ್ತಾರೆ. ಹಾಗಾಗಿ ಯಥಾ ಸ್ಥಿತಿಯನ್ನು ಹೇಳಲು ಹಾಗೂ ಇವರು ಮರೆಮಾಚಿರುವ ಸತ್ಯವನ್ನು ಜನರ ಮುಂದಿಡಲು ಮಾಧ್ಯಮ ಹೇಳಿಕೆ ನೀಡಲು ನನಗೆ ಪರವಾನಗಿ ನೀಡಬೇಕೆಂದು ಮತ್ತೊಮ್ಮೆ ಕೋರುತ್ತೇನೆ. ಹಾಗೂ ಮೇಲೆ ಹೇಳಿದ ವಿಷಯಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ವಿನಮ್ರಪೂರ್ವಕವಾಗಿ ಕೋರುತ್ತೇನೆ.
ಯುವಕರಿಗೆ ಉದ್ಯೋಗ ಸೃಷ್ಟಿಗೆ ಮಂಗಳೂರಿನ ಬಳಿ ಅಂತರರಾಷ್ಟ್ರೀಯ ಫರ್ನೀಚರ್ ಕ್ಲಸ್ಟರ್ ಶೀಘ್ರ ಪ್ರಾರಂಭ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ