ಪ್ರಗತಿವಾಹಿನಿ ಸುದ್ದಿ, ಚೆನ್ನೈ: ಗರ್ಭ ಧರಿಸಿದ ವಿಚಾರ ಮರೆಮಾಚಲು ಹೋಗಿ ಗರ್ಭಪಾತದ ಮಾತ್ರೆ ಸೇವಿಸಿದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ.
ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಚೆಂಗಂನಲ್ಲಿ ಈ ಘಟನೆ ನಡೆದಿದೆ. 15 ವರ್ಷದ ಬಾಲಕಿ ಮುರುಗನ್ ಎಂಬಾತನೊಂದಿಗೆ ಸ್ನೇಹ ಹೊಂದಿದ್ದಳು. ಈತ ಬಾಲಕಿಯನ್ನು ನಿತ್ಯ ಶಾಲೆಗೆ ತಲುಪಿಸುತ್ತಿದ್ದ ಎನ್ನಲಾಗಿದೆ. ಇವರಿಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿ ಇಬ್ಬರ ನಡುವೆ ದೈಹಿಕ ಸಂಪರ್ಕವೂ ಏರ್ಪಟ್ಟಿತ್ತು.
ತಾನು ಗರ್ಭಿಣಿಯಾಗಿರುವ ವಿಚಾರವನ್ನು ಬಾಲಕಿ ಮುರುಗನ್ ಗೆ ತಿಳಿಸುತ್ತಿದ್ದಂತೆ ವಿಚಲಿತಗೊಂಡಿದ್ದ ಆತ ಪ್ರಭು ಎಂಬ ತನ್ನ ಸ್ನೇಹಿತನಲ್ಲಿ ಹೇಳಿಕೊಂಡಿದ್ದ. ಈ ವೇಳೆ ಗರ್ಭಪಾತದ ಮಾತ್ರೆ ಸೇವಿಸುವಂತೆ ಪ್ರಭು ಸಲಹೆ ನೀಡಿದ್ದನೆನ್ನಲಾಗಿದೆ.
ಸ್ನೇಹಿತನ ಮಾತು ಕೇಳಿ ಗರ್ಭಪಾತದ ಮಾತ್ರೆ ಖರೀದಿಸಿದ ಮುರುಗನ್ ಬಾಲಕಿಗೆ ಆಕೆಯ ಮನೆಯಿಂದ ಕರೆತಂದು ಮಾರ್ಗ ಮಧ್ಯೆ ಮಾತ್ರೆ ನುಂಗಿಸಿದ್ದ. ಮಾತ್ರೆ ನುಂಗಿದ ಬಾಲಕಿ ತನ್ನ ಇನ್ನಿಬ್ಬರು ಸ್ನೇಹಿತೆಯರೊಂದಿಗೆ ಹೋಗುತ್ತಿದ್ದಾಗ ಪ್ರಜ್ಞಾಹೀನಳಾಗಿ ಕುಸಿದು ಬಿದ್ದಿದ್ದಾಳೆ.
ತಕ್ಷಣ ಬಾಲಕಿಯನ್ನು ಮುರುಗನ್ ತಿರುವಣ್ಣಾಮಲೈ ಸರಕಾರಿ ಆಸ್ಪತ್ರೆಗೆ ಕರೆದೊಯ್ದನಾದರೂ ಅಲ್ಲಿನ ವೈದ್ಯರು ಅಷ್ಟರಲ್ಲೇ ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಬಾಲಕಿಯ ತಂದೆ ನೀಡಿದ ದೂರುನನ್ವಯ ಪೊಲೀಸರು ಮುರುಗನ್ ನನ್ನು ಪೋಕ್ಸೋ ಕಾಯಿದೆಯಡಿ ಬಂಧಿಸಿ ಕ್ರಮ ಕೈಗೊಂಡಿದ್ದು ಮಾತ್ರೆ ಸೇವನೆಗೆ ಸಲಹೆ ನೀಡಿದ ಆತನ ಸ್ನೇಹಿತನಿಗಾಗಿ ಶೋಧ ನಡೆಸಿದ್ದು ವೈದ್ಯರ ಶಿಫಾರಸು ಇಲ್ಲದೆ ಮಾತ್ರೆ ಮಾರಿದ ಔಷಧದಂಗಡಿಯವರ ವಿರುದ್ಧವೂ ಕಾನೂನು ಕ್ರಮ ಜರುಗಿಸುತ್ತಿದ್ದಾರೆ.
ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿದ ಶಿಕ್ಷಕ ಅಮಾನತು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ