
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ಸರ್ಕಾರಿ ನೌಕರರ ಹಿತರಕ್ಷಣೆಗೆ ಸಂಘ ಬದ್ಧವಿದೆ. ಆದ್ದರಿಂದ ಎನ್.ಪಿ.ಎಸ್. ರದ್ದುಪಡಿಸುವಂತೆ ಒತ್ತಾಯಿಸಿ ನಡೆಸಲಾಗುವ ಹೋರಾಟದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಕರೆ ನೀಡಿದರು.
ನಗರದ ಗಾಂಧಿ ಭವನದಲ್ಲಿ ಭಾನುವಾರ (ಸೆ.22) ನಡೆದ ಪ್ರತಿಭಾ ಪುರಸ್ಕಾರ, ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಹಾಗೂ ಕೇಂದ್ರ ಸಂಘದ ಪದಾಧಿಕಾರಿಗಳಿಗೆ ಅಭಿನಂದನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಾವು ಮಾಡುವ ಕೆಲಸ ಮುಖ್ಯ. ಸ್ತ್ರೀ ಮತ್ತು ಷುರುಷ ಎಂಬ ಭಾವನೆಗಳನ್ನು ತೆಗೆದು ಹಾಕಬೇಕು. ನಮ್ಮ ಸಮಸ್ಯೆಗಳನ್ನು ನಾವೇ ಕುಳಿತುಕೊಂಡು ಚರ್ಚಿಸಿದರೆ ಸಂಘಟನೆ ಬೆಳೆಯುತ್ತದೆ ಎಂದು ಕರೆ ನೀಡಿದರು.
ಸರ್ಕಾರಿ ನೌಕರರಿಗೆ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ಪಡೆಯಲು ಹೊಸ ಯೋಜನೆ ಆರಂಭಿಸುವುದು. ಬೆಂಗಳೂರಿನಲ್ಲಿ 3 ಎಕರೆ ಜಮೀನಿನಲ್ಲಿ ನೌಕರರ ಸಭಾ ಭವನ ಹಾಗೂ ಬೆಳಗಾವಿಯಲ್ಲಿ 2 ಎಕರೆ ಜಮೀನಿನಲ್ಲಿ 2 ವರ್ಷದಲ್ಲಿ ನೌಕರರ ಭವನ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಇಂದಿನ ವಿದ್ಯಾರ್ಥಿಗಳು ಒಳ್ಳೆಯ ಸಮಾಜ ರೂಪಿಸುವಲ್ಲಿ ಮುಂದಾಗಬೇಕು ಹಾಗೂ ನವ ಭಾರತ ನಿರ್ಮಾಣ ಮಾಡಲು ಶ್ರಮಿಸಬೇಕು ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಕೆ.ಜಿ.ಜಗದೀಶ ಮಾತನಾಡಿ, ನೌಕರರ ಸಂಘದಲ್ಲಿ ಖಾಲಿ ಇರುವ ಪದಾಧಿಕಾರಿಗಳನ್ನು ನೇಮಿಸಬೇಕು ಎಂದರು.
ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿವೆ ಆದರಿಂದ ವಿದ್ಯಾರ್ಥಿಗಳು ಸಮಾಜದ ಮೌಲ್ಯಗಳನ್ನು ತಿಳಿದುಕೊಂಡು ಉತ್ತಮ ಸಮಾಜವನ್ನು ಕಟ್ಟಲು ಸಿದ್ದರಾಗಬೇಕು ಎಂದು ಹೇಳಿದರು.
ಬೆಳಗಾವಿ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಜಗದೀಶ ಗೌಡಪ್ಪ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಡ ಪ್ರತಿಭಾವಂತ ಮಕ್ಕಳಿಗೆ ಹಾಗೂ ಎಸ್. ಎಸ್. ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.
ಮೇಘನಾ ಮಠಪತಿ ಪ್ರಾರ್ಥಿಸಿದರು. ಜಿಲ್ಲಾ ಜಂಟಿ ಕಾರ್ಯದರ್ಶಿ ನಾಗಾರ್ಜುನ ಮರನವರ ಅವರು ಸ್ವಾಗತಿಸಿದರು. ಹೇಮಾ, ಅಂಜಲಿ ಹಾಗೂ ಮಹೇಶ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸದಸ್ಯರು, ಉಪಾಧ್ಯಕ್ಷರು ಸರಕಾರಿ ನೌಕರರು, ಸಹಕಾರಿ ಸಂಘದ ಪದಾಧಿಕಾರಿಗಳು ಜಂಟಿ ಕಾರ್ಯದರ್ಶಿಗಳು ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ –
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ