ಪ್ರಗತಿವಾಹಿನಿ ಸುದ್ದಿ, ಬೆಂಗಳೂರು -ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ನಿನ್ನೆ ಉಪಚುನಾವಣೆ ಘೋಷಣೆಯಾಗಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ನೀತಿಸಂಹಿತೆಯೂ ಜಾರಿಯಾಗಿದೆ. ಆದರೆ ನೀತಿಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮೂವರು ಸಚಿವರ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ತನ್ಮೂಲಕ ಉಪಚುನಾವಣೆ ಘೋಷಣೆಯಾದ ನಂತರ ಮೊದಲ ನೀತಿಸಂಹಿತೆ ಉಲ್ಲಂಘನೆ ದೂರು ಮುಖ್ಯಮಂತ್ರಿ ಹಾಗೂ ರಾಜ್ಯ ಸರಕಾರದ ಮಂತ್ರಿಗಳ ವಿರುದ್ಧವೇ ದಾಖಲಾಗಿದೆ.
ಹಾಗಾದರೆ ಆಗಿದ್ದೇನು?
ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಾನೂನು ಸಚಿವ ಮಾಧುಸ್ವಾಮಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮೊದಲಾದವರು ಸಭೆ ನಡೆಸಿದ್ದಾರೆ. ಅವರು ಸಭೆ ನಡೆಸಿದ್ದು ಅನರ್ಹ ಶಾಸಕರ ಜೊತೆ. ಏಕಾಏಕಿ ಚುನಾವಣೆ ಘೋಷಣೆಯಾಗಿದ್ದರಿಂದ ಕಂಗೆಟ್ಟಿದ್ದ ಅನರ್ಹ ಶಾಸಕರನ್ನು ಭೇಟಿಯಾದ ಯಡಿಯೂರಪ್ಪ ಮತ್ತು ಇತರ ಸಚಿವರು ಅವರ ಅಹವಾಲು ಆಲಿಸುವ ಮತ್ತು ಅವರನ್ನು ಸಮಾಧಾನಪಡಿಸುವ ಕೆಲಸ ಮಾಡಿದರು.
ಸಭೆ ನಡೆಸಿದ್ದೆಲ್ಲಿ?
ಇಷ್ಟಕ್ಕೂ ನೀತಿಸಂಹಿತೆ ಉಲ್ಲಂಘನೆಯಾಗಿದ್ದೆಲ್ಲಿ? ಮುಖ್ಯಮಂತ್ರಿ ಹಾಗೂ ಇತರ ಸಚಿವರು ಅನರ್ಹ ಶಾಸಕರ ಜೊತೆ ಸಭೆ ನಡೆಸಿದ್ದು ಮಲ್ಲೇಶ್ವರಂನ ಸರಕಾರಿ ಅತಿಥಿಗೃಹದಲ್ಲಿ. ಚುನಾವಣೆ ನೀತಿ ಸಂಹಿತೆ ಪ್ರಕಾರ ಚುನಾವಣೆ ಘೋಷಣೆಯಾದ ನಂತರ ಸರಕಾರಿ ಅತಿಥಿಗೃಹಗಳನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸುವಂತಿಲ್ಲ.
ಆದರೆ ಮುಖ್ಯಮಂತ್ರಿ ಮತ್ತು ಇತರ ಸಚಿವರು ಉಪಚುನಾವಣೆ ಕುರಿತು ಯೋಜನೆ ರೂಪಿಸುವುದಕ್ಕಾಗಿ ಅನರ್ಹ ಶಾಸಕರ ಜೊತೆ ಸರಕಾರಿ ಅತಿಥಿಗೃಹದಲ್ಲಿ ಚರ್ಚೆ ನಡೆಸಿದ್ದು, ಇದು ಚುನಾವಣೆ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎನ್ನುವುದು ಕಾಂಗ್ರೆಸ್ ನೀಡಿದ ದೂರು.
ವೀಡಿಯೋ ಕಾನ್ಫರೆನ್ಸ್
ಇದಲ್ಲದೆ, ಸಂಜೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಮತ್ತು ಕೆಲವು ಸಚಿವರು ಕೇಂದ್ರ ಗೃಹಸಚಿವ ಹಾಗೂ ಇತರ ಮುಖಂಡರ ಜೊತೆಗೆ ವೀಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಇದು ಕೂಡ ನೀತಿಸಂಹಿತೆಯ ಉಲ್ಲಂಘನೆ ಎಂದು ಕಾಂಗ್ರೆಸ್ ಹೇಳಿದೆ. ಅಲ್ಲಿ ಕೂಡ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆ, ಉಪಚುನಾವಣೆಗೆ ಹಣಕಾಸಿನ ವ್ಯವಸ್ಥೆ ಮೊದಲಾದ ವಿಷಯಗಳ ಕುರಿತು ಚರ್ಚಿಸಲಾಗಿದೆ ಎಂದು ಕಾಂಗ್ರೆಸ್ ದೂರಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಇತರ ಸಚಿವರ ವಿರುದ್ಧ ನೀತಿಸಂಹಿತೆ ಉಲ್ಲಘನೆ ಕಾರಣಕ್ಕಾಗಿ ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರಾದ ವಿ.ಎಸ್.ಉಗ್ರಪ್ಪ ಹಾಗೂ ಪ್ರಕಾಶ ರಾಠೋಡ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ(ಪ್ರಗತಿವಾಹಿನಿ).
ಅನರ್ಹರಿಗೆ ಶಾಕ್ -ಹಠಾತ್ ಉಪಚುನಾವಣೆ ಘೋಷಣೆ
ನಾಳೆಯಿಂದಲೇ ನಾಮಪತ್ರ ಸಲ್ಲಿಕೆ ಆರಂಭ
ಸರಕಾರ ಕೆಡಗುವ ಶಾಸಕರಿಗೆ ದೊಡ್ಡ ಪಾಠವಾಯಿತೇ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ