
ಪ್ರಗತಿವಾಹಿನಿ ಸುದ್ದಿ: ಕಂಟೈನರ್, ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಟ್ರ್ಯಾಕ್ಟರ್ ನಲ್ಲಿದ್ದ 8 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು ಹಲವರು ಗಂಭೀರವಾಗಿ ಗಾಯಗೊಂಡಿರು ಘಟನೆ ಉತ್ತರ ಪ್ರದೇಶದ ಬುಲಂದರ್ ಶಹರ್ ಬಳಿ ಸಂಭವಿಸಿದೆ.
ಬುಲಂದ್‌ಶಹರ್ ಪೊಲೀಸ್ ಠಾಣೆ ವ್ಯಾಪ್ತಿಯ ಹೆದ್ದಾರಿ 34 ರ ಘಾಟಲ್ ಗ್ರಾಮದ ಬಳಿಯ ಈ ದುರ್ಘಟನೆ ನಡೆದಿದೆ. ಟ್ರಾಕ್ಟರ್ ನಲ್ಲಿದ್ದವರು ಕಾಸ್ಲಂಜ್‌ನಿಂದ ರಾಜಸ್ಥಾನದ ಗೋಗಾಮಿಡಿಗೆ ಹೋಗುತ್ತಿದ್ದರು. ಗೋಗಾಜಿ ಭಕ್ತರಿಂದ ತುಂಬಿದ್ದ ಟ್ರಾಕ್ಟರ್‌ಗೆ ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮ 8 ಜನರು ಸಾವನ್ನಪ್ಪಿ 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅನೇಕ ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇನ್ನು ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ರಭಸಕ್ಕೆ ಟ್ರಾಕ್ಟರ್ ನಜ್ಜುಗುಜ್ಜಾಗಿದ್ದು, ಮೃತದೆಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಇನ್ನು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.